ಸರ್ಕಾರಕ್ಕೆ ಗೋವಿನಜೋಳ ನೀಡಿ ಗೋಳಾಟ
ಕನ್ನಡಪ್ರಭ ವಾರ್ತೆ, ಗದಗ, ಮಾ. 6
ಮಾರುಕಟ್ಟೆಯಲ್ಲಿ ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇದ್ದಾಗ ಸರ್ಕಾರ ಮಧ್ಯಪ್ರವೇಶಿಸಿ ಬೆಳೆಯನ್ನು ಸೂಕ್ತವಾದ ಬೆಂಬಲ ಬೆಲೆಯಲ್ಲಿ ಖರೀದಿಸುವುದು ಸಾಮಾನ್ಯ. ಆದರೆ, ಉತ್ಪನ್ನಗಳಿಗೆ ಸರ್ಕಾರ ಸಕಾಲದಲ್ಲಿ ಹಣ ನೀಡದೇ ಇದ್ದಲ್ಲಿ, ರೈತರು ಯಾವ ಉದ್ದೇಶಕ್ಕಾಗಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿರುತ್ತಾರೋ ಅದು ಸಾಫಲ್ಯವಾಗಲ್ಲ. ಬದಲಾಗಿ ಹೆಚ್ಚಿನ ಹೊರೆಯಾಗಲಿದ್ದು, ಈ ಸ್ಥಿತಿ ಗದಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಮಾರುಕಟ್ಟೆಯಲ್ಲಿ ಗೋವಿನಜೋಳದ ಬೆಲೆ ರು. 1000-1100ರ ವರೆಗೆ ಮಾರಾಟವಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರು ಬೆಂಬಲ ಬೆಲೆಯಲ್ಲಿ ಗೋವಿನಜೋಳವನ್ನು ಖರೀದಿಸುವಂತೆ ಒತ್ತಾಯಿಸಿದರು. ರೈತರ ಒತ್ತಾಯಕ್ಕೆ ಮಣಿದ ಸರ್ಕಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ನಿರ್ಧರಿಸಿ, ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿರುವ ಟಿಎಪಿಸಿಎಂಎಸ್ಗಳ ಮೂಲಕ ಖರೀದಿಸಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಗೋವಿನಜೋಳ ಮಾರಾಟ ಮಾಡಿದ ರೈತರಿಗೆ ಇಲ್ಲಿಯವರೆಗೂ ಹಣವನ್ನೇ (2ನೇ ಕಂತು) ನೀಡಿಲ್ಲ.
ವಿವಿಧೆಡೆ ಖರೀದಿ: ಗದಗ ಜಿಲ್ಲೆಯಲ್ಲಿಯೇ ನೀರಾವರಿ ಸೌಲಭ್ಯ ಹೊಂದಿರುವ ಏಕೈಕ ತಾಲೂಕು ನರಗುಂದ ಇಲ್ಲಿನ ರೈತರ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯೂ ಗೋವಿನಜೋಳವಾಗಿದ್ದರಿಂದ ನರಗುಂದ, ಶಿರೋಳ, ಚಿಕ್ಕನರಗುಂದ ಹಾಗೂ ಕೊಣ್ಣೂರುಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಖರೀದಿಸಲಾಗಿತ್ತು. ರೋಣ, ಮುಂಡರಗಿ, ಗದಗ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿಗಳಲ್ಲಿಯೂ ಖರೀದಿ ಕೇಂದ್ರವಿದ್ದರೂ ರೋಣ ಮತ್ತು ನರಗುಂದದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಿದೆ. ರೋಣದಲ್ಲಿ 47 ಸಾವಿರ ಕ್ವಿಂಟಲ್ ಹಾಗೂ ನರಗುಂದದಲ್ಲಿ 50 ಸಾವಿರ ಕ್ವಿಂಟಲ್ಗಿಂತಲೂ ಹೆಚ್ಚಿನ ಖರೀದಿ ನಡೆದಿದೆ.
ಹಣ ನೀಡಿಲ್ಲ: ಪ್ರಸಕ್ತ ಸಾಲಿನ ಜನವರಿ ತಿಂಗಳಲ್ಲಿ ಖರೀದಿಸಿದ ಗೋವಿನಜೋಳದ ಹಣವನ್ನು ಜಿಲ್ಲಾಡಳಿತ ಇಲ್ಲಿಯವರೆಗೂ ನೀಡಿಲ್ಲ.
ಇದಕ್ಕೂ ಮೊದಲು ಖರೀದಿಸಿ ಗೋವಿನಜೋಳಕ್ಕೆ (ನರಗುಂದ ತಾಲೂಕಿನಲ್ಲಿ ಹೆಚ್ಚು) ಹಣ ನೀಡಿದ್ದಾರೆ.
ಆದರೆ, ಜನವರಿ ತಿಂಗಳಲ್ಲಿ ಖರೀದಿಸಿದ ಗೋವಿನಜೋಳಕ್ಕೆ ಜಿಲ್ಲಾಡಳಿತ ಹದಿನೈದು ದಿನಗಳಲ್ಲಿ ಹಣ ನೀಡುವುದಾಗಿ ತಿಳಿಸಿತ್ತು. ಆದರೆ, ಮಾರ್ಚ್ ಮೊದಲವಾರ ಮುಗಿ ಯುತ್ತಾ ಬಂದರೂ ಹಣ ನೀಡುತ್ತಿಲ್ಲ. ಇದರ ಬಗ್ಗೆ ಕೇಳಿದರೆ ಇನ್ನು ವಿಳಂಬವಾಗುತ್ತದೆ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ.
ಹೆಚ್ಚಿನ ಹಣ ಸಿಗುತ್ತದೆ ಎನ್ನುವ ಆಸೆಯಿಂದ ಬೆಂಬಲ ಬೆಲೆ ಕೇಂದ್ರಕ್ಕೆ ಗೋವಿನಜೋಳ ಮಾರಾಟ ಮಾಡಿದ್ದೇವೆ. ಗೋವಿನಜೋಳ ಮಾರಾಟ ಮಾಡಿ 2 ತಿಂಗಳಾಗಿದೆ. ನಮ್ಮ ಹಣವನ್ನು ನೀಡಿರಿ ಎಂದು ಕೇಳಿದರೆ ಇನ್ನು ಮೇಲಿಂದ ಹಣ ಬಂದಿಲ್ಲ ಎನ್ನುತ್ತಾರೆ. ಕೈಯಲ್ಲಿನ ಬೆಳೆಯನ್ನು ಮಾರಾಟ ಮಾಡಿ ಹಣವಿಲ್ಲದೇ ಕಾಯುವಂತಾಗಿದೆ. ಜಿಲ್ಲಾಡಳಿತ ಕೂಡಲೇ ನಮಗೆ ಬರಬೇಕಾದ ಹಣ ನೀಡಬೇಕು.
- ಅಶೋಕ ಉಗಲಾಟ, ಸಿ.ಎಸ್. ಪಾಟೀಲ,
ಮಾರುತೆಪ್ಪ ಜುಂಗಣ್ಣವರ,
ಜಿಲ್ಲೆಯ ವಿವಿಧ ಗ್ರಾಮಗಳ ರೈತರು
ಸಿಬ್ಬಂದಿ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ರೈತರಿಗೆ ಹಣ ನೀಡುವಲ್ಲಿ ಸ್ವಲ್ಪ ವಿಳಂಬವಾಗಿದೆ ಹಾಗೂ ಈಗಾಗಲೇ ಕೆಲ ರೈತರಿಗೆ ಹಣವನ್ನು ವಿತರಣೆ ಮಾಡಲಾಗಿದೆ. ಇನ್ನುಳಿದ ಎಲ್ಲಾ ರೈತರಿಗೂ ಮಾರ್ಚ್ ಅಂತ್ಯದೊಳಗೆ ಹಣ ನೀಡಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
- ಎನ್.ಎಸ್. ಪ್ರಸನ್ನಕುಮಾರ,
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರು, ಗದಗ
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

