ಗದಗ

ಎಪಿಎಂಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Published On :

ಗಜೇಂದ್ರಗಡ: ರೈತನ ಶ್ರಮಕ್ಕೆ ಬೆಲೆ ಇಲ್ಲ. ಇದ್ದ ಬೆಲೆಯನ್ನು ಮಧ್ಯವರ್ತಿಗಳು ನೀಡದೇ ತಮ್ಮ ಕಿಸೆಗೆ ಹಾಕಿಕೊಳ್ಳುತ್ತಾರೆ. ಅನ್ನದಾತರು ಹಗಲು ರಾತ್ರಿ ಎನ್ನದೇ ಬೆವರು ಸುರಿಸಿ ಬೆಳೆದಿರುವ ಶೇಂಗಾ ಬೆಳೆಯನ್ನು ಕೃಷಿ ಮಾರುಕಟ್ಟೆಗೆ ತಂದಾಗ ಟೆಂಡರ್ ಆಗಿರುವ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಾ ದಲ್ಲಾಳಿಗಳು ವಂಚಿಸುತ್ತಿದ್ದಾರೆಂದು ಆರೋಪಿಸಿ ರೊಚ್ಚಿಗೆದ್ದ ರೈತರು ಶುಕ್ರವಾರ ಸಂಜೆ ಎಪಿಎಂಸಿ ಕಚೇರಿಗೆ ಬೀಗ ಜಡಿದು ದಿಢೀರ ಪ್ರತಿಭಟನೆ ನಡೆಸಿದರು.
ಸೂಕ್ತ ಕ್ರಮಕ್ಕೆ ಪಟ್ಟು: ಅಧಿಕಾರಿಗಳು ರೈತರ ಅಳಲಿಗೆ ಸೂಕ್ತ ಸ್ಪಂದಿಸದಿದ್ದಾಗ ರೈತರ ಸಹನೆಯ ಕಟ್ಟೆ ಒಡೆಯಿತು. ಆಗ ಕಚೇರಿ ಒಳಗಿದ್ದ ಕಬ್ಬಿಣ ಡೆಸ್ಕ್ಗಳನ್ನು ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲ ಸಮಯ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಮೊದಲೆ ಶೇಂಗಾಕಾಯಿ ಉತ್ಪಾದನೆ ಕುಸಿದಿದೆ. ದರವು ನೆಲಕಚ್ಚಿಗೆ ಅಲ್ಪ-ಸ್ವಲ್ಪ ಬೆಳೆದಿರುವ ಫಸಲಿಗೆ ನ್ಯಾಯಯುತ ದರ ನೀಡದೇ ರೈತರಿಗೆ ವಂಚಿಸುತ್ತಿರುವ ಎಪಿಎಂಸಿಯಲ್ಲಿ ಸುಲಿಗೆಕೋರ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಪಟ್ಟು ಹಿಡಿದರು.
ಪುಡಿಗಾಸಿಗೆ ಕನ್ನ: ಸದಾ ಒಂದಿಲ್ಲೊಂದು ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಅನ್ನದಾತ ಶೇಂಗಾ ಫಸಲಿಗೆ ಈಗಾಗಲೇ ಸೂಕ್ತ ದರ ದೊರೆಯದೇ ಆತಂಕದಲ್ಲಿದ್ದಾನೆ. ಶೇಂಗಾ ಬೆಳೆಗೆ ಬೆಲೆ ಪಾತಾಳಕ್ಕಿಳಿದಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಸಮೀಪದ ಲಕ್ಕಲಕಟ್ಟಿ, ರಾಜೂರು, ದಿಂಡೂರು, ನಾಗೇಂದ್ರಗಡ, ಲಕ್ಕಲಕಟ್ಟಿ, ಕಾಲಕಾಲೇಶ್ವರ, ಪುರ್ತಗೇರಿ, ಕುಂಟೋಜಿ, ಜಿಗೇರಿ, ನಾಗರಸಕೊಪ್ಪ, ಚಿಲಝರಿ, ರಾಮಪುರ, ಹೊಸರಾಮಪುರ, ವದೇಗೋಳ, ಕೊಡಗಾನೂರು, ನಾಗರಸಕೊಪ್ಪ ತಾಂಡಾ, ಬೆಣಸಮಟ್ಟಿ, ಸಾವಯವ ಗ್ರಾಮ ಮ್ಯಾಕಲಝರಿ ಇತರ ಗ್ರಾಮಗಳ ನೂರಾರು ರೈತರು ಶೇಂಗಾ ಬೆಳೆ ಬೆಳೆದು ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ. ಆದರೆ, ಇರುವ ಪುಡಿಗಾಸನ್ನು ನೀಡದೇ ರೈತನ ತುತ್ತು ಅನ್ನಕ್ಕೂ ಕಲ್ಲು ಹಾಕುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿ ಎಕರೆಗೆ 3ರಿಂದ 8 ಕ್ವಿಂಟಲ್ ಫಸಲು ಬರುತ್ತದೆ. ಅದರಲ್ಲಿ ಬೀಜ, ಗೊಬ್ಬರ, ಕೂಲಿಕಾರ್ಮಿಕರಿಗೆ ಕನಿಷ್ಠ ರು. 13ರಿಂದ ರು. 20 ಸಾವಿರ ವೆಚ್ಚ ಮಾಡಲಾಗುತ್ತದೆ. ಸದ್ಯ ಬೆಳೆ ಇಲ್ಲದ ದುಸ್ಥಿತಿ ಎದುರಿಸುತ್ತಿದ್ದರೂ ರೈತ ಬೆಳೆದ ಬೆಳೆಗೆ ಮಧ್ಯವರ್ತಿಗಳು ರೈತನ ಬಾಳಲ್ಲಿ ಚೆಲ್ಲಾಟವಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸುತ್ತಿದ್ದಾನೆ ಎಂದು ಅಳಲು ತೋಡಿಕೊಂಡರು. ದಲ್ಲಾಳಿಗಳು ಶೇಂಗಾ ಬೆಳೆಗೆ ಸೂಕ್ತ ನ್ಯಾಯಯುತ ಬೆಲೆ ನೀಡದೇ ವಂಚಿಸುತ್ತಿರುವುದನ್ನು ಕಂಡು ಅನ್ಯಾಯಕ್ಕೆ ಒಳಗಾದ ರೈತನ ನೆರವಿಗೆ ಧಾವಿಸಿದರು. ರೈತರಿಗೆ ಹಾಡ ಹಗಲೇ ಮೋಸ ಮಾಡುತ್ತಿರುವ ಎಪಿಎಂಸಿ ದಲ್ಲಾಳಿಯ ಪರವಾನಗಿ ರದ್ದುಪಡಿಸಿ ಅಂಗಡಿಯನ್ನು ಸಿಜ್ ಮಾಡಬೇಕೆಂದು ಪಟ್ಟು ಹಿಡಿದು ಕುಳಿತರು.
ಪಿಎಸ್ಐ ಭೇಟಿ-ತರಾಟೆ: ಸಂಜೆ 5 ಗಂಟೆವರೆಗೂ ನಡೆದ ಈ ಬೆಳವಣಿಗೆ ಕಂಡು ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ಎಚ್.ಆರ್. ನಡಗಡ್ಡಿ ರೈತರ ಅಳಲನ್ನು ಆಲಿಸಿದರು. ಆಗ ವಾತಾವರಣ ಕೊಂಚ ತಿಳಿಗೊಂಡಿತು. ರೈತರ ಮೊಗದಲ್ಲಿ ಆಶಾಭಾವನೆ ಮೂಡಿತು. ರೈತನನ್ನು ವಂಚಿಸಿದ ದಲ್ಲಾಳಿಯ ಕಾರಕೂನನ್ನು ತರಾಟೆಗೆ ತೆಗದುಕೊಂಡರು. ಆಗಿರುವ ಅನ್ಯಾಯ ಸರಿಪಡಿಸುವ ಯತ್ನ ನಡೆಸಿದರು. ರೈತರ ಪ್ರತಿಭಟನೆಗೆ ಕರವೇ ಸ್ವಾಭೀಮಾನಿ ಬಣ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು. ಸಂಜೆ 6 ಗಂಟೆವರೆಗೂ ಪಿಎಸ್ಐ ಸಂಧಾನ ಯತ್ನ ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಎಂ.ಎಸ್. ಹಿರೇಮಠ, ಛತ್ರಪ್ಪ ರಾಠೋಡ, ಆರ್.ಎನ್. ಕುಲಕರ್ಣಿ, ಹಸನಸಾಬ ಮುಜಾವರ, ಶರಣಪ್ಪ ಕೊಪ್ಪರದ, ಶರಣಯ್ಯ ಹಿರೇಮಠ, ಗೌಡಯ್ಯ ಹಿರೇಮಠ, ಹನಮಂತಪ್ಪ ಗುಳಗುಳಿ, ಬಸವರಾಜ ಕೊತಬಾಳ, ಶರಣಪ್ಪ ಕಪ್ಪರದ, ಮಹಾಂತಯ್ಯ ಗುಳಗುಳಿ, ಕುಮಾರ ಜಾವೂರ, ಮುತ್ತಣ್ಣ ಮೇಟಿ, ಹೊನಕೇರಪ್ಪ ಲಕ್ಕಲಕಟ್ಟಿ, ಕುಮಾರ ರಾಠೋಡ, ಮಲ್ಲಿಕಾರ್ಜುನ ಹಡಪದ, ಗೈಬುಸಾಬ ನಿಶಾನದಾರ, ಕುಮಾರ ರಾಠೋಡ, ಹೊನ್ನಪ್ಪ ಹಡಪದ ನೂರಾರು ರೈತರು ಪಾಲ್ಗೊಂಡಿದ್ದರು.


ಅಧಿಕಾರಿಗಳು ತರಾಟೆಗೆ


ಲಕ್ಕಲಕಟ್ಟಿ ಗ್ರಾಮದ ಗೌಡಯ್ಯ ಹಿರೇಮಠ ರೈತ ರಾಚೂಟಿ ವೀರಭದ್ರೇಶ್ವರ ಟ್ರೇಡರ್ಸ್ ಅಂಗಡಿಗೆ 54 ಚೀಲ ಶೇಂಗಾ ಫಸಲು ತಂದಿದ್ದು, ಪ್ರತಿ ಕ್ವಿಂಟಲ್ಗೆ ರು. 2909 ದರ ನಿಗದಿಯಾಗಿರುವುದನ್ನು ಮಾರುಕಟ್ಟೆ ಅಧಿಕಾರಿಗಳು ಘೋಷಿಸಿದ್ದರು. ಆದರೆ, ಅಂಗಡಿ ಕಾರಕೂನನು ಮುಗ್ಧ ರೈತನಿಗೆ ರು. 2775 ದರ ಆಗಿದೆ ಎಂದು ಮೋಸ ಮಾಡಲು ಯತ್ನಿಸಿದಾಗ ಇದನ್ನು ಗಮನಿಸಿದ ರೈತರು ಮಾರುಕಟ್ಟೆ ಕಾರ್ಯಾಲಯಕ್ಕೆ ನುಗ್ಗಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.