ಗದಗ: ಆಲಿಕಲ್ಲು ಸಹಿತ ಭಾರಿ ಮಳೆ
ಗದಗ: ಅವಳಿ ನಗರ ಸೇರಿದಂತೆ ಗದಗ ತಾಲೂಕಿನ ಸುತ್ತಮುತ್ತ ಭಾನುವಾರ ಸಂಜೆಯಿಂದ ಆಲಿಕಲ್ಲು ಮಳೆಯಾಗಿದ್ದು, ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ತಾಲೂಕಿನ ಹುಲಕೋಟಿ, ಹರ್ತಿ, ಯಲಿಶಿರೂರ, ಶಿರುಂಜ, ಕೋಟಮಚಗಿ, ಲಕ್ಕುಂಡಿ, ಕಣಗಿನಹಾಳ, ಅಡವಿಸೋಮಾಪುರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರಭಸವಾದ ಆಲಿಕಲ್ಲು ಮಳೆ ಸುರಿದಿದೆ.
ಗದಗ-ಬೆಟಗೇರಿಯಲ್ಲಿ 45 ನಿಮಿಷಕ್ಕೂ ಹೆಚ್ಚುಕಾಲ ಮಳೆ ಸುರಿದಿದ್ದು, ಮಳೆ ಹಾಗೂ ಗಾಳಿಯ ರಭಸಕ್ಕೆ ನಗರದ ಅಂಜುಮನ್ ಕಾಲೇಜ್ ಬಳಿಯ ರಸ್ತೆಯ ಬದಿಯಲ್ಲಿ ಕ್ರೂಸರ್ ವಾಹನವೊಂದರ ಮೇಲೆ ಮರ ಉರುಳಿಬಿದ್ದಿದೆ. ಈ ಘಟನೆಯಿಂದಾಗಿ ವಾಹನ ನುಜ್ಜಾಗಿದ್ದು ಹೊರತುಪಡಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ. ರಸ್ತೆಯಲ್ಲಿ ಮರ ಉಳಿದ ಪರಿಣಾಮವಾಗಿ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ವ್ಯವಸ್ಥೆಯಲ್ಲಿ ಅಡೆತಡೆ ಉಂಟಾಗಿತ್ತು. ಭಾರಿ ಮಳೆಯಿಂದಾಗಿ ಚರಂಡಿಯಲ್ಲಿ ಮಳೆಯ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡುಬಂದಿತು. ಮಳೆಯಲ್ಲಿ ವಾಹನ ಸವಾರರು ಸಂಚರಿಸಲು ತೀವ್ರವಾಗಿ ಪರದಾಡಿದರು.
ಹೋಳಿಹುಣ್ಣಿಮೆ ಬಳಿಕ ಸುರಿಯಬೇಕಾಗಿದ್ದ ಮಳೆಯೂ ಚಳಿಗಾಲದಲ್ಲಿಯೇ ಭಾರಿ ಪ್ರಮಾಣದ ಮಳೆ ಸುರಿದಿದ್ದು, ರೈತಾಪಿ ವರ್ಗದ ಜನತೆಯಲ್ಲಿ ಆತಂಕ ಹುಟ್ಟಿಸಿದೆ. ರೈತರು ಹೊಲದಲ್ಲಿನ ಬೆಳೆಗಳ ಒಕ್ಕಲುತನಕ್ಕೆ ತೀವ್ರ ಅಡ್ಡಿ ಉಂಟಾಗಿದ್ದು, ಹತ್ತಿ ಬೆಳೆ ಮಳೆಗೆ ನೆನೆದಿದೆ. ಜೋಳದ ರಾಶಿ ಮಳೆಗೆ ಸಿಲುಕಿ ಕಪ್ಪು ಆವರಿಸುವ ಭಯ ರೈತರಿಗೆ ಮೂಡಿದೆ. ದನಕರಗಳಿಗಾಗಿ ಬೆಳೆದು ನಿಂತಿದ್ದ ಜೋಳದ ದಂಟು ಬಣವೆ ಸೇರುವ ಮುನ್ನವೆ ಮಳೆಗೆ ಸಿಲುಕಿದೆ. ಕಣದಲ್ಲಿ ಜೋಳದ ತೆನೆ, ಜೋಳ, ಕುಸುಬಿ, ಗೋವಿನಜೋಳ ಸೇರಿದಂತೆ ಇನ್ನಿತರ ಹಿಂಗಾರಿ ಬೆಳೆಗಳ ರಾಶಿ ಮಾಡಿದ್ದ ರೈತರ ಬೆಳೆ ಮಳೆಗೆ ಸಿಲುಕಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರಾಶಿಗೆ ಕಣದ ತುಂಬೆಲ್ಲಾ ಹರಿವಿದ್ದ ಬೆಳೆಯನ್ನು ಸಂರಕ್ಷಿಸಲು ರೈತ ಕಷ್ಟಪಡುತ್ತಿದ್ದಾನೆ.
ಜಿಲ್ಲಾದ್ಯಂತ ಮಳೆ: ಗದಗ ಜಿಲ್ಲಾದ್ಯಂತ ಶನಿವಾರ ಸುರಿದ ರಭಸದ ಮಳೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಗದಗ ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಸುರಿದ ರಭಸದ ಆಲಿಕಲ್ಲು ಮಳೆ ಸುರಿಯಿತು. ರೋಣ ತಾಲೂಕಿನಲ್ಲಿ ಕೆಲವಡೆ ಅಲ್ಲಲ್ಲಿ ಮಳೆಯಾದರೆ ಇನ್ನು ಕೆಲವೆಡೆ ಮೋಡಕವಿದ ವಾತಾವರಣ ಮುಂದುವರಿದಿದೆ. ನರೇಗಲ್ಲ, ಮುಳಗುಂದದಲ್ಲಿಯೂ 20 ನಿಮಿಷಕ್ಕೂ ಹೆಚ್ಚುಕಾಲ ರಭಸದ ಮಳೆಯಾಗಿದೆ. ಶಿರಹಟ್ಟಿಯಲ್ಲಿ ಸುರಿದ ರಭಸದ ಮಳೆಯಿಂದಾಗಿ ಪಟ್ಟಣದ ಹಲವು ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಜಿಲ್ಲಾದ್ಯಂತ ಗೋದಿ, ಹತ್ತಿ ಬೆಳೆಯನ್ನು ಬೆಳೆಯಲಾಗಿದ್ದು, ದಿಢೀರನೆ ಬಂದ ಆಲಿಕಲ್ಲು ಮಳೆಯಿಂದ ಬೆಳೆಗೆ ಕೆಲವೆಡೆ ನೀರುನುಗ್ಗಿ ಬೆಳೆಗಳು ಹಾಳಾದ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

