ಗದಗ

ಇಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 9
ವರ್ಷದ ಹಿಂದೆ ನಗರಸಭೆಗೆ ಚುನಾವಣೆ ನಡೆದಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿಯ ವಿಷಯವಾಗಿ ಸಾಕಷ್ಟು ವಿಳಂಬವಾಗಿತ್ತು. ಈಗ ಮೀಸಲಾತಿ ಗೊಂದಲ ನಿವಾರಣೆಯಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯಗೆ ಮಾ.10ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರಾಗ ಬಯಸುವರರಲ್ಲಿ ಉತ್ಸಾಹ ಗರಿಗೆದಿರಿದೆ.
35 ಸದಸ್ಯರ ಹೊಂದಿರುವ ಗದಗ, ಬೆಟಗೇರಿ ಅವಳಿ ನಗರದ ನಗರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದು, ಈ ಪಕ್ಷದ ಸದಸ್ಯರಲ್ಲಿ ಅಧಿಕಾರದ ಕನಸು ಮತ್ತಷ್ಟು ಇಂಬುಗೊಂಡಿದೆ. ಕಾಂಗ್ರೆಸ್ 22 ಸ್ಥಾನ ಪಡೆದಿದ್ದು, ಅಧಿಕಾರದ ಸ್ಪಷ್ಟ ಬಹುಮತ ಹೊಂದಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸಹಜವಾಗಿ ಅರ್ಹತೆ ಹೊಂದಿರುವ ಎಲ್ಲ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಬಿಎಸ್ಆರ್ ಪಕ್ಷ 7 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕೃತ ವಿರೋಧ ಪಕ್ಷವಾಗಿದೆ. ಇನ್ನು ಕೆಜೆಪಿ 1 ಹಾಗೂ ಬಿಜೆಪಿ 5 ಸ್ಥಾನ ಪಡೆದಿದ್ದು, ಈ ಮೂರು ಪಕ್ಷಗಳು ಲೋಕಸಭೆ ಚುನಾವಣೆಯ ಪೂರ್ವದಲ್ಲಿಯೇ ಒಂದರಲ್ಲಿ ಒಂದು ವೀಲಿನವಾಗುವುದರಿಂದ ಬಿಜೆಪಿ ದೊಡ್ಡ ವಿರೋಧ ಪಕ್ಷವಾಗಲಿದ್ದು, 13 ಸ್ಥಾನಗಳ ಬಲ ಹೊಂದಲಿದೆ.
ಆಕಾಂಕ್ಷಿಗಳು: ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, 1ನೇ ವಾರ್ಡ್ನಿಂದ ಆಯ್ಕೆಯಾಗಿರುವ ಅಮೃತಾ ಪಾಟೀಲ, 20ನೇ ವಾರ್ಡ್ನ ರುದ್ರವ್ವ ಕೆರಕಲಮಟ್ಟಿ, 28ನೇ ವಾರ್ಡ್ನ ಶಿವಲೀಲಾ ಅಕ್ಕಿ ಅವರ ನಡುವೆ ಪೈಪೋಟಿ ಇದ್ದು, ಪಕ್ಷದ ವರಿಷ್ಠರು ಯಾರ ಮೇಲೆ ಕೃಪಾಕಟಾಕ್ಷ ಬೀರುತ್ತಾರೋ ಅವರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ.
ಇನ್ನು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 34ನೇ ವಾರ್ಡ್ನಿಂದ ಆಯ್ಕೆಯಾಗಿರುವ ಸುರೇಶ ಕಟ್ಟಿಮನಿ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅವರೊಟ್ಟಿಗೆ 13ನೇ ವಾರ್ಡ್ ಸದಸ್ಯ ಮಂಜುನಾಥ ಪೂಜಾರ, 16ನೇ ವಾರ್ಡ್ನಿಂದ ಆಯ್ಕೆಯಾಗಿರುವ ಕೃಷ್ಣಾ ಪರಾಪುರ ಹಾಗೂ 21ನೇ ವಾರ್ಡ್ನಿಂದ ಆಯ್ಕೆಯಾಗಿರುವ ಮಹಿಳಾ ಸದಸ್ಯೆ ಕಮಲಾ ಹಾದಿಮನಿ ಅವರ ನಡುವೆ ಪ್ರಬಲವಾದ ಪೈಪೋಟಿ ಇದ್ದು, ಇವರಲ್ಲಿ ಅದ್ಯಾರಿಗೆ ಸ್ಥಾನ ಲಭಿಸಲಿದೆ ಕಾಯ್ದು ನೋಡಬೇಕು.
ರಾಜಕೀಯ ಲೆಕ್ಕಾಚಾರ: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುತ್ತಿದ್ದು, ಇದರ ಆಧಾರದಲ್ಲಿ ಮತಗಳನ್ನು ಸೆಳೆಯುವ ತಂತ್ರಕ್ಕೆ ಮಾರು ಹೋಗುವ ಸಾಧ್ಯತೆ ನಿಚ್ಚಳವಾಗಿದ್ದು, ಇದರಿಂದ ಪ್ರಬಲ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.