ಮಳೆಗೆ ನೆಲಕ್ಕುರುಳಿದ ವೀಳ್ಯದೆಲೆ ಬಳ್ಳಿ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಾರದಿಂದ ಸುರಿದ ಅಕಾಲಿಕ ಮಳೆಯ ಆರ್ಭಟಕ್ಕೆ ವೀಳ್ಯೆದೆಲೆ ಬಳ್ಳಿ ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿ ರೈತರ ಬದುಕನ್ನು ನುಚ್ಚುನೂರು ಮಾಡಿದೆ.
ಸಮೀಪದ ಗೊಗೇರಿ ಗ್ರಾಮದ ಫಕ್ರುಸಾಬ್ ನದಾಫ್ ಎಂಬವರು 39 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ವೀಳ್ಯೆದೆಲೆಯ 120 ಬಳ್ಳಿಗಳನ್ನು ಸಾಲಸೂಲ ಮಾಡಿ ಬೆಳೆಸಿದ್ದರು. ಈಚೆಗೆ ಸತತವಾಗಿ ಗಾಳಿ ಸಮೇತ ಸುರಿದ ಮಳೆಯಿಂದಾಗಿ ತೋಟದಲ್ಲಿ ಬಹುತೇಕ ವೀಳ್ಯೆದೆಲೆ ಬಳ್ಳಿಗಳು ನೆಲಕ್ಕುರುಳಿವೆ.
ಪ್ರತಿವಾರ 3 ಪೆಂಡಿ ವೀಳ್ಯೆದೆಲೆ ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿರುವೆ. ಜತೆಗೆ ವೀಳ್ಯೆದೆಲೆ ಬೆಳೆ ಬೆಳೆಯಲು ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ.
ಏಕಾಏಕಿ ಸುರಿದ ಮಳೆಗೆ ರೈತನ ಬದುಕು ಮುರಾಬಟ್ಟೆಯಾಗಿದೆ ಎಂದು ವೀಳ್ಯೆದೆಲೆ ಬೆಳೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ರೈತ ಫಕ್ರುಸಾಬ್ ನದಾಫ್ ಅಳಲು ತೋಡಿಕೊಂಡನು.
ಬರ, ಪ್ರಕೃತಿ ವಿಕೋಪದಂತಹ ಒಂದಿಲ್ಲೊಂದು ಸಂಕಷ್ಟಗಳಿಗೆ ಅನ್ನದಾತ ತುತ್ತಾಗಿ ವ್ಯವಸಾಯವೇ ಬೇಡ ಎನ್ನುವ ಸ್ಥಿತಿ ರೈತ ಸಮುದಾಯಕ್ಕೆ ಬಂದಿದೆ. ಈ ಭಾಗದಲ್ಲಿ ಕೆಂಪು ಮಿಶ್ರಿತ (ಮಸಾರಿ) ಪ್ರದೇಶ ವ್ಯಾಪಕವಾಗಿದೆ. ಜತೆಗೆ ಅಂತರ್ಜಲ ಮಟ್ಟವೂ ಅಷ್ಟೇ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಗೊಗೇರಿ, ನಾಗರಸಕೊಪ್ಪ, ಕುಂಟೋಜಿ, ಮ್ಯಾಕಲಝರಿ, ಜಿಗೇರಿ, ವದೇಗೊಳ, ಕಾಲಕಾಲೇಶ್ವರ ಭಾಗದ ರೈತರು ಸಾಲಸೂಲ ಮಾಡಿ ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸಿ ವಾಣಿಜ್ಯ ಬೆಳೆಗಳಾದ ಬಾಳೆ, ದ್ರಾಕ್ಷಿ, ಮಾವು, ವೀಳ್ಯೆದೆಲೆ, ತರಕಾರಿಯಂತಹ ಬೆಳೆ ಬೆಳೆಯಲು ಹೆಚ್ಚಿನ ಒತ್ತು ನೀಡುತ್ತಾರೆ. ಜೊತೆಗೆ ಉತ್ತಮ ಫಸಲನ್ನು ಪಡೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಮುನಿಸಿನ ಪರಿಣಾಮ ಸುರಿದ ಅಕಾಲಿಕ ಮಳೆ ರೈತರು ಬೆಳೆದ ಬೆಳೆ ಹಾನಿಗೀಡಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೊಂದೆಡೆ ತಾಲೂಕಿನ ನಿಡಗುಂದಿ, ಹಾಲಕೇರಿ, ಮಾರನಬಸರಿ, ಜಕ್ಕಲಿ, ಅಬ್ಬಿಗೇರಿ, ಹೊಳೆಆಲೂರು, ಇಟಗಿ, ಸೂಡಿ ಭಾಗದ ಕಪ್ಪು ಮಿಶ್ರಿತ ಭೂಮಿಯಲ್ಲಿ ಬೆಳೆದ ಹತ್ತಿ, ಬಿಳಿಜೋಳ, ಗೋದಿಯಂತಹ ವಾಣಿಜ್ಯ ಬೆಳೆಗಳು. ಕಟಾವು ಹಂತದಲ್ಲಿದ್ದ ಜೋಳ, ಗೋದಿ, ಹತ್ತಿ ಬೆಳೆಯು ನೆಲಕ್ಕುರುಳಿದ ಪರಿಣಾಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
-ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

