ಬಣ್ಣಗಳಲ್ಲಿ ಮಿಂದೆದ್ದ ಜನತೆ
-ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 17
ಶಿರಹಟ್ಟಿ ಪಟ್ಟಣದಲ್ಲಿ ರಂಗಾದ ರಂಗಿನೋಕುಳಿಯನ್ನು ಮಕ್ಕಳು, ಯುವಕರು, ಮಹಿಳೆಯರು ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಸೋಮವಾರ ಆಚರಿಸಿದರು.
ಮಧ್ಯರಾತ್ರಿಯೇ ಕಾಮನನ್ನು ಸುಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಬೆಳಕು ಹರಿಯುತ್ತಲೇ ಸಣ್ಣ ಸಣ್ಣ ಮಕ್ಕಳು ಮನೆಮಂದಿಗೆಲ್ಲ ಬಣ್ಣ ಎರಚಿ ಸೌಹಾರ್ದಯುತವಾಗಿ ಸಡಗರ ಸಂಭ್ರಮದಿಂದ ಹೋಳಿ ಆಚರಿಸಿ ಖುಷಿ ಪಟ್ಟರು.
ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಡಿದು ಕುಣಿಯುತ್ತ ಸ್ನೇಹಿತರಿಗೆ, ಪರಿಚಯಸ್ಥರಿಗೆ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯ ಕೋರಿದರು. ಪಟ್ಟಣದ ಕುಂಬಾರ ಓಣಿ, ಮಹಿಷಿ ಓಣಿ, ಮರಾಠ ಗಲ್ಲಿ, ಕುರುಬರ ಓಣಿ, ಮ್ಯಾಗೇರಿ ಓಣಿ, ಅಂಬೇಡ್ಕರ್ ನಗರ, ವಿಜಯನಗರ, ವಿದ್ಯಾನಗರ, ಸಮೀಪದ ಹರಿಪುರ ಗ್ರಾಮದಲ್ಲಿ ಹೀಗೆ ಎಲ್ಲೆಡೆ ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.
ಬಣ್ಣದಾಟದಲ್ಲಿ ಯುವಕರೇ ಹೆಚ್ಚಾಗಿದ್ದರು. ಬೈಕ್ಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ಸುತ್ತುತ್ತಾ ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರತಿ-ಮನ್ಮಥರನ್ನು ಪ್ರತಿಷ್ಠಾಪಿಸಿದ್ದ ಕೆಲವು ಓಣಿಗಳಲ್ಲಿ ಮಕ್ಕಳು, ಮಹಿಳೆಯರೆಲ್ಲರೂ ಬಣ್ಣದಾಟ ಆಡಿದರು. ಪಟ್ಟಣದ ಜನರೆಲ್ಲ ಒಂದಾಗಿ ಜಾತಿ, ಧರ್ಮದ ಭೇದವಿಲ್ಲದೆ ಹಬ್ಬ ಆಚರಿಸಿದ್ದು ವಿಶೇಷ. ಯುವಕರು ಗುಂಪು ಗುಂಪಾಗಿ ಹಲಗೆ ಬಡಿದು ಕುಣಿಯುತ್ತ ಬಣ್ಣ ಎರಚುತ್ತಿದ್ದರಿಂದ ಪಟ್ಟಣದ ಎಲ್ಲ ಬಡಾವಣೆಗಳು, ಪ್ರಮುಖ ರಸ್ತೆಗಳು, ರಂಗೇರಿದ್ದವು. ಕೆಂಪು, ಹಸಿರು, ಕೇಸರಿ, ಹಳದಿ, ನೀಲಿ ಹೀಗೆ ಎಲ್ಲ ಬಣ್ಣಗಳು ಗಾಳಿಯಲ್ಲಿ ತೂರಲ್ಪಟ್ಟವು.
ಸಣ್ಣ ಮಕ್ಕಳಂತೂ ಪಿಚಕಾರಿ ಹಿಡಿದು ಹಿಂದಿನಿಂದ ಬಣ್ಣದ ನೀರು ಹಾಕಿ ಓಡುತ್ತಿದ್ದರು. ವಿಚಿತ್ರ ವೇಷಧಾರಿಗಳು ಬಣ್ಣ ಎರಚುತ್ತ ಅಡ್ಡಾಡುತ್ತಿದ್ದರು. ತಲೆಗೆ ಋಷಿಗಳ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೆಲವರು ಅಡ್ಡಾಡಿದರೆ, ಇನ್ನು ಕೆಲವರು ಮುಖವಾಡಗಳ ಹಾಕಿಕೊಂಡು, ಜೋಕರ್ ಟೋಪಿ ಸಿಕ್ಕಿಕೊಂಡು ತಮಟೆ ಶಬ್ದಕ್ಕೆ ಹೆಜ್ಜೆ ಹಾಕುತ್ತಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಬಣ್ಣ ಕೊಳ್ಳುವುದು, ಬಣ್ಣ ಹಚ್ಚುವುದು ಮುಂದುವರಿದಿತ್ತು. ರಂಗಿನಾಟ ನಿಲ್ಲಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ.
ಕೆರೆಯಲ್ಲಿ, ಹಳ್ಳಗಳಲ್ಲಿ ಸ್ನಾನ: ರಂಗಿನಾಟದಲ್ಲಿ ಮಿಂದೆದ್ದ ಯುವಕರು ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಹಳ್ಳ, ಬೆಳ್ಳಟ್ಟಿ ರಸ್ತೆಯಲ್ಲಿರುವ ಹೊಸಳ್ಳಿ ಕೆರೆಯಲ್ಲಿ ಸ್ನಾನ ಮಾಡಿದರು. ಅಕಾಲಿಕ ಮಳೆ ಸುರಿದ ಹಿನ್ನೆಲೆಯಲ್ಲಿ ಮೈತುಂಬಿಕೊಂಡಿದ್ದ ಕೆರೆಯಲ್ಲಿ, ಹಳ್ಳಗಳಲ್ಲಿ ಸಂಭ್ರಮದಿಂದ ಈಜಿದರು.
ಪೊಲೀಸ್ ಬಂದೋಬಸ್ತ್: ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲ ವೃತ್ತಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಣ್ಣದಾಟದ ನಂತರ ರಂಗಪಂಚಮಿಯ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ರತಿ-ಮನ್ಮಥರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಗ್ಗಲಗಿ, ತಮಟೆ, ಇತ್ಯಾದಿ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದ ಯುವಕರು, ಬಣ್ಣ ಹಚ್ಚುವುದನ್ನು ಮೆರವಣಿಗೆಯಲ್ಲೂ ಮುಂದುವರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

