ಕೆಟ್ಟಚಟ ಹೋಳಿ ಹಬ್ಬದ ಬೆಂಕಿಗೆ ಹಾಕಿ ಹೊಸ ಮನುಷ್ಯರಾಗಿ ಬಾಳಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 19
ಹೋಳಿ ಹಬ್ಬದಲ್ಲಿ ಕಾಮದಹನದ ಹೆಸರಿನಲ್ಲಿ ಕೆಟ್ಟ ಚಟಗಳನ್ನು ಬೆಂಕಿಯಲ್ಲಿ ಸುಟ್ಟು ಹೊಸ ಮನುಷ್ಯರಾಗಿ ಮುಂಬರುವ ಜೀವನವನ್ನು ಭಕ್ತಿ, ಶೃದ್ಧೆ ಮತ್ತು ಸಂಯಮದಿಂದ ನಡೆಸಿಕೊಂಡು ಹೋಗಬೇಕು. ಮಾಡಿದ ತಪ್ಪುಗಳನ್ನು ಮನ್ನಿಸು ಎಂದು ಪರಮಾತ್ಮನಲ್ಲಿ ಬೇಡಿಕೊಂಡು ಮತ್ತೆ-ಮತ್ತೆ ತಪ್ಪುಗಳನ್ನು ಮಾಡದೆ ಜೀವನ ಸಾಗಿಸುವುದೆ ಸರಿಯಾದ ಧರ್ಮ ಎಂದು ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಜ. ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಈಚೆಗೆ ಜರುಗಿದ 1992ನೇ ಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ತಪ್ಪುಗಳನ್ನು ಮಾಡುವುದು ಸಹಜ. ಆದರೆ, ಮಾಡಿದ ತಪ್ಪುಗಳನ್ನು ಮತ್ತೆ ಮಾಡದೆ ಜೀವನವನ್ನು ಒಂದು ಸವಾಲಾಗಿ ಸ್ವೀಕರಿಸಿ. ಎಷ್ಟೆ ಕಷ್ಟಬಂದರೂ ಅದರಲ್ಲಿ ಈಜಿ ಜಯಿಸಬೇಕು. ಮನಸ್ಸಿನ ಮಲಿನತೆಯನ್ನು ಶ್ರೀ ಮಠದಲ್ಲಿ ನಡೆಯುವಂತಹ ಶಿವಾನುಭವ ಮತ್ತು ಇತರೆ ಕಾರ್ಯಕ್ರಗಳಲ್ಲಿ ತೊಡಗಿಸಿಕೊಂಡು ಕಳೆದುಕೊಳ್ಳಬೇಕು. ವಿಕಾರ ಮತ್ತು ವಿಚಿತ್ರ ಚಿತ್ರಗಳನ್ನು ನೋಡಿ ಮನಸ್ಸನ್ನು ಕೆಡಿಸಿಕೊಂಡು ಜೀವನವೇ ಇಷ್ಟೆ ಎಂದು ಪರಿತಪಿಸುವುದಕಿಂತ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಬದುಕು ಬಂಗಾರವಾಗುತ್ತದೆ ಎಂದರು. ಕೆ.ಆರ್. ಬೆಲ್ಲದ ಕಾಲೇಜಿನ ಉಪನ್ಯಾಸಕ ಎಂ.ಡಿ. ನಾಯಕ ಮಾತನಾಡಿ, ಪೂಜ್ಯರ ಸಾಹಿತ್ಯ ಸೇವೆ ಮತ್ತು ಶೈಕ್ಷಣಿಕ ಸೇವೆ ಈ ಬರದ ನಾಡಿಗೆ ಚೈತನ್ಯ ತಂದುಕೊಟ್ಟಿವೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಶ್ರೀಗಳು ಪುಸ್ತಕಗಳನ್ನು ಬರೆದಿದ್ದು, ಎಲ್ಲ ಪುಸ್ತಕಗಳು ಓದುಗರ ಮನಸ್ಸನ್ನು ಅರಳಿಸುತ್ತವೆ. 3 ಸಾವಿರಕ್ಕೂ ಹೆಚ್ಚು ವಚನಗಳನ್ನು ಪೂಜ್ಯರು ರಚಿಸಿ ಲೋಕದ ಡೊಂಕನ್ನು ತಿದ್ದಲು ಪ್ರಯತ್ನಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ನೂತನ ಅಧ್ಯಕ್ಷೆ ಭಾರತಿ ಹಕ್ಕಿ ಮತ್ತು ಉಪಾಧ್ಯಕ್ಷ ಸೋಮನಗೌಡ ಗೌಡ್ರ ಅವರನ್ನು ಶ್ರೀಗಳು ಸನ್ಮಾನಿಸಿದರು. ನಿರಂಜನ ದೇವರು, ಶಂಕ್ರಪ್ಪ ಬಾರಿಕಾಯಿ, ಆರ್.ಆರ್. ಹೆಗ್ಗಡಾಳ, ಬಾಬು ಶಿವಶೆಟ್ಟರ್, ಎಸ್.ಬಿ.ಕೆ. ಗೌಡರ, ಪ್ರಾ. ಎಂ.ಬಿ. ಬೆಳವಟಗಿಮಠ, ಅಬುಲ್ ಖುರೇಶಿ, ಎಂ.ಎಸ್. ಶಿವಶೆಟ್ಟರ್, ವಿ.ಸಿ. ಹಂಚಿನಾಳ, ಎಸ್.ವಿ. ಚವಡಿ, ಎಂ.ಎಸ್. ಕಣವಿಮಠ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಸ್. ಇನಾಮತಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

