ಕಾಂಗ್ರೆಸ್‌ನಿಂದ ಸುಭದ್ರ ಸರ್ಕಾರ ಅಸಾಧ್ಯ: ಶೆಟ್ಟರ್
ಶಿರಹಟ್ಟಿ: ದೇಶ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಕೇಂದ್ರದ ಕಾಂಗ್ರೆಸ್ ಸರ್ಕಾರ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಬಿಜೆಪಿ ಪರ ಅಲೆ ಎದ್ದಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಹಾವೇರಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ಮಾಡಿ ಮಾತನಾಡಿದರು.
ದೇಶದಲ್ಲಿ ಬಿಜೆಪಿ ಆಡಳಿತವೂ ಖಚಿತ, ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. ಹಾಗೆಯೇ ಹಾವೇರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಕೂಡ ನಿಶ್ಚಿತವೇ ಆಗಿದೆ. ದೇಶದ ತುಂಬೆಲ್ಲ ಮೋದಿ ಪರ ಅಲೆ ಕಾಣುತ್ತಿದ್ದು, ರಾಷ್ಟ್ರದ ಸುರಕ್ಷತೆ ದೃಷ್ಟಿಯಿಂದ ಮತದಾರರು ಈ ತೀರ್ಮಾನಕ್ಕೆ ಬಂದಿದ್ದಾರೆ. ಯುಪಿಎ ರಾಷ್ಟ್ರ ಕಂಡ ದುರಂತ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವುದೇ ಅದರ ಮಹತ್ ಸಾಧನೆ. ವಾಜಪೇಯಿ ಗಳಿಸಿದ ರಾಷ್ಟ್ರ ಗೌರವ, ಘನತೆಯನ್ನು ಹರಾಜು ಹಾಕಿರುವುದು ಬಿಟ್ಟರೆ ರಾಷ್ಟ್ರದ ಸುಭದ್ರತೆ ದೃಷ್ಟಿಯಿಂದ ಏನನ್ನೂ ಮಾಡಿಲ್ಲ. ಮಹತ್ವದ ಪೋಟಾ ಕಾಯಿದೆ ರದ್ದುಗೊಳಿಸಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದೆ ಎಂದು ದೂರಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಅಧಿಕಾರ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ. ಹುದ್ದೆ ಹೊಂದಿದ್ದರೂ ಅಧಿಕಾರ ಹೊಂದಿರದ ವ್ಯಕ್ತಿಯೋರ್ವರು 10 ವರ್ಷದ ಅವಧಿಗೆ ಪ್ರಧಾನಿಯಾಗಿದ್ದು, ಯಾವ ರಂಗದಲ್ಲಿಯೂ ದೇಶ ಅಭಿವೃದ್ಧಿ ಕಾಣಲಿಲ್ಲ. ಸ್ವಾತಂತ್ರ್ಯಾ ನಂತರ ಅರ್ಧ ಶತಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನ ದುರಾಡಳಿತದಿಂದ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟಸಾಧ್ಯ ಎಂದರು.
ಕಾಂಗ್ರೆಸ್ ಪಕ್ಷದ ಅಂತಿಮ ಯಾತ್ರೆ ಪ್ರಾರಂಭವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸೋಲಿನ ಭಯ ಕಾಡುತ್ತಿದ್ದು, ಘಟಾನುಘಟಿ ನಾಯಕರಾದ ಪಿ. ಚಿದಂಬರಂ, ಮನಿಷ್ ತಿವಾರಿ, ಜಯಂತಿ ನಟರಾಜನ್ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದು, ಜೆಡಿಎಸ್ ಪಕ್ಷಕ್ಕಂತೂ ಅಭ್ಯರ್ಥಿಗಳೇ ಸಿಗಲಿಲ್ಲ. ಇದಕ್ಕೆ ನರೇಂದ್ರ ಮೋದಿಯವರ ಅಲೆಯೇ ಮುಖ್ಯ ಕಾರಣ ಎಂದರು. ಹಾವೇರಿ ಲೋಕಸಭೆ ಮತಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಹೇಮಗಿರೀಶ ಹಾವಿನಾಳ ಮುಂತಾದವರು ಮಾತನಾಡಿದರು. ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನ, ತಾಪಂ ಸದಸ್ಯ ಶಿವನಗೌಡ ಕಂಠಿಗೌಡ್ರ, ಶೇಖರಗೌಡ್ರ ತೆಗ್ಗಿನಮನಿ, ವೈ.ಎಫ್. ಹಂಚಿ, ಅಶೋಕ ಹಳ್ಳೆಪ್ಪನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

