ಗದಗ

ನಾಳೆ ರೋಣ ವೀರಭದ್ರೇಶ್ವರ ಜಾತ್ರೆ

Published On :

ರೋಣ: ಪಟ್ಟಣದ ಆರಾಧ್ಯದೈವ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 8ರಂದು ಬೃಹತ್ ರಥೋತ್ಸವ ಜರುಗಲಿದೆ. ಜಾತ್ರಾ ನಿಮಿತ್ತವಾಗಿ ಮೇ 8ರಿಂದ 12ರ ವರೆಗೆ  ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದ್ವಾಪಾರ ಯುಗದಲ್ಲಿ ದ್ರೋಣಾಚಾರ್ಯರು ಇಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಹೊಂದಿದ ದ್ರೋಣಪುರ(ಈಗಿನ ರೋಣ) ಪಟ್ಟಣದಲ್ಲಿ ನೆಲೆನಿಂತ ವೀರಭದ್ರೇಶ್ವರ ಮೂರ್ತಿಗೆ ಐತಿಹಾಸಿಕ ಹಿನ್ನೆಲೆಯಿದೆ. ಇದರಂತೆ ಪಟ್ಟಣದಲ್ಲಿ ಪ್ರಾಚೀನ ಅನೇಕ ಜೈನ, ಶೈವ ದೇವಾಲಯ, ಬಸದಿಗಳಿವೆ. ರೋಣ ಪಟ್ಟಣದಲ್ಲಿ ಧಾರ್ಮಿಕತೆ, ಸಾಮರಸ್ಯ ಮೂಡಿಸಲು ಕಾರಣಿಕರ್ತನಾದ ಆರಾಧ್ಯ ದೈವ ವೀರಭದ್ರೇಶ್ವರನು ಇಲ್ಲಿ ನೆಲೆ ನಿಲ್ಲಲು ಒಂದು ಹಿನ್ನೆಲೆಯಿದೆ. ಅನೇಕ ದಶಕಗಳ ಹಿಂದೆ ದಿವಂಗತ ವಿರೂಪಾಕ್ಷರಾವ್ ಕುಲಕರ್ಣಿ ಎಂಬುವರು ಪಟ್ಟಣದಲ್ಲಿನ ತಮ್ಮ ಮನೆಯ ಗೋಡೆಯನ್ನು ದುರಸ್ತಿಗೊಳಿಸುವ ವೇಳೆಯಲ್ಲಿ ಗೋಡೆಯೊಳಗೆ ವಿಗ್ರಹವೊಂದು ಕಾಣಿಸಿತಂತೆ. ಅದನ್ನು ಹೊರತೆದಾಗ ಅದು ವೀರಭದ್ರ ದೇವರ ಮೂರ್ತಿಯಾಗಿತ್ತು. ಆ ಕುಟುಂಬದ ಸದಸ್ಯರು ಮೂರ್ತಿಯನ್ನು ಸಾರ್ವಜನಿಕವಾಗಿ ಪೂಜಿಸಲು ಅನೂಕೂಲವಾಗುವಂತೆ ಅಂದಿನ ಸಮಾಜದ ಹಿರಿಯರಿಗೆ ಹಸ್ತಾಂತರಿಸಿದರು. ನಂತರ ಸಣ್ಣ ಗುಡಿಯನ್ನು ನಿರ್ಮಿಸಿ ಅದರಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಆರಂಭಗೊಂಡಿತು. ಸಣ್ಣದಿದ್ದ ದೇವಸ್ಥಾನ 1969ರಲ್ಲಿ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಶ್ರಮ ಮತ್ತು ದಾನಿಗಳ ನೆರವಿನಿಂದ ವಿಶಾಲವಾದ ದೇವಸ್ಥಾನ ನಿರ್ಮಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಬೃಹತ್ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಪಟ್ಟಣದಲ್ಲಿ ನೆಲೆನಿಂತ ವೀರಭದ್ರ ದೇವರಿಗೆ ಜನತೆ ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. ಇಂದಿಗೂ ಪಟ್ಟಣದ ಕುಲಕರ್ಣಿಯವರ ಮನೆತನದವರು ವೀರಭದ್ರೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಜಾತ್ರಾ ಸಂದರ್ಭದಲ್ಲಿ ಸತತ 9 ದಿನಗಳವರೆಗೆ ನಂದಾದೀಪ ಬೆಳಗಿಸಲಾಗುತ್ತಿದೆಯಂತೆ. ದೇವರ ದರ್ಶನ ಮತ್ತು ಜಾತ್ರೆಯ ವೈಭವವನ್ನು ಸವಿಯಲು ಹೊರರಾಜ್ಯ, ವಿವಿಧ ಜಿಲ್ಲೆ, ತಾಲೂಕು ಮತ್ತು ಸುತ್ತಲಿನ ಗ್ರಾಮಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಜಾತ್ರೆಯು ಪ್ರತಿಯೊಂದು ಮನೆಯಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ.
ಕಲ್ಯಾಣ ಮಂಟಪ: ರುದ್ರಾಭಿಷೇಕ, ಭಕ್ತರ ಮುಡುಪು, ಹರಕೆ ತಿರುಸಲು ಬಂದ ಭಕ್ತರಿಗೆ ತಂಗಲು, ಮದುವೆ, ಮುಂಜಿ, ಧಾರ್ಮಿಕ ಚಿಂತನಗೋಷ್ಠಿ ಮುಂತಾದ ಕಾರ್ಯಕ್ರಮ ಜರುಗಲು ವೀರಭದ್ರೇಶ್ವರ ಟ್ರಸ್ಟ್ ಕಮಿಟಿಯು ಶ್ರಮ ಮತ್ತು ಭಕ್ತರ ದೇಣಿಗೆಯಿಂದ ಅಕ್ಕಮಹಾದೇವಿ ಮಹಾಮನೆ ಹಾಗೂ ವೀರಭದ್ರೇಶ್ವರ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.