ಗದಗ

ಕೆಲಸ ಮಾಡದಿದ್ರೆ ಮನೆಗೆ ತೆರಳಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಮೇ 20
ಕೆಡಿಪಿ ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಎಸ್.ಎ. ವಸ್ತ್ರದ ಅವರನ್ನು ಶಾಸಕ ಬಿ.ಆರ್. ಯಾವಗಲ್ ಆರೋಗ್ಯ ಇಲಾಖೆ ಕುರಿತ ಮಾಹಿತಿ ಕೇಳಿದಾಗ ಸರಿಯಾದ ಮಾಹಿತಿ ನೀಡದಿದ್ದಾಗ ನಿಮಗೆ ಆಸಕ್ತಿ ಇದ್ದರೆ ಕೆಲಸ ನಿರ್ವಹಿಸಿ ಇಲ್ಲವಾದರೆ ಏಕೆ ಸುಮ್ಮನೆ ಸರ್ಕಾರದ ಹಣ ಪೋಲು ಮಾಡಬೇಡಿ ಮನೆಗೆ ಹೋಗಿ ಎಂದು ಖಡಕ್ ಉತ್ತರ ನೀಡಿದರು.
ಸೋಮವಾರ ತಾಪಂ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಗೆ ಪ್ರತಿ ವರ್ಷ ನೂರಾರು ಕೋಟಿ ರು. ಸರ್ಕಾರ ಖರ್ಚು ಮಾಡುತ್ತಿದೆ. ಅದನ್ನು ಅಧಿಕಾರಿಗಳು ಸರಿಯಾಗಿ ಬಳಸದಿರುವುದರಿಂದ ಇಂದಿಗೂ ಗ್ರಾಮೀಣ ಪ್ರದೇಶದ ಜನತೆ ಹಲವು ಮಾರಕ ರೋಗಗಳಿಗೆ ತುತ್ತಾಗಬೇಕಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ನಿಮ್ಮ ಇಲಾಖೆಯ ಗುರಿಗಳು ಏನು ಇವೆ ಎಂಬುದನ್ನು ಪ್ರತಿಯೊಬ್ಬ ಸರ್ಕಾರಿ ನೌಕರರು ತಿಳಿದುಕೊಂಡು ತಮ್ಮ ಕಾರ್ಯನಿರ್ವಹಿಸಬೇಕು. ಕೆಲಸದಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ ಅಂಥವರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಶಿಕ್ಷಣಾಧಿಕಾರಿ ಸುರೇಶ ಅಂಗಡಿ ಮಾತನಾಡಿ, ತಾಲೂಕಿನಲ್ಲಿ ನೂತನ ಕಟ್ಟಡಗಳಿಗೆ ಹಣ ಕಡಿಮೆಯಾಗುತ್ತದೆ ಎಂದು ಭೂ ಸೇನಾ ಅಧಿಕಾರಿಗಳು ಹೇಳತ್ತಿದ್ದಾರೆಂದು ತಿಳಿಸಿದಾಗ ಶಾಸಕರು ಪ್ರತಿಕ್ರಿಯಿಸಿ, ಸದ್ಯ ಆ ಶಾಲೆಗಳಿಗೆ ಎಷ್ಟು ಹಣವಿದೆ, ಅದರಲ್ಲಿರುವ ಎಲ್ಲ ಗ್ರಾಮೀಣ ಶಾಲೆಗಳ ಕಾಮಗಾರಿ ಬೇಗ ಮುಗಿಸಬೇಕು ಮತ್ತು ಹೊಸ ಶಾಲಾ ಕಟ್ಟಡಗಳಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, 2013-14ನೇ ಸಾಲಿನಲ್ಲಿ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ರು. 1 ಕೋಟಿ ಬಂದಿದೆ. ಇದಕ್ಕೆ ಕಡಿಮೆ ಎಂದರೆ 10 ಗುಂಟೆ ಜಾಗ ಬೇಕು ಎಂದು ಹೇಳಿದಾಗ, ಅದಕ್ಕೆ ಶಾಸಕರು ಪುರಸಭೆ ಅಧಿಕಾರಿ ಎಸ್. ರಾಜಶೇಖರನ್ನು ಮಾತನಾಡಿಸಿ, ಪುರಸಭೆ ವ್ಯಾಪ್ತಿಯಲ್ಲಿ 10 ಕಡೆಗಳಲ್ಲಿ ಜಾಗವಿದೆ ಎಂದು ಕೇಳಿದಾಗ ಅದಕ್ಕೆ ಪುರಸಭೆ ಅಧಿಕಾರಿ ಮಾತನಾಡಿ, ನಾವು ಈಗಾಗಲೇ 5 ಜಾಗೆಯನ್ನು ನಗರದ ವಿನಾಯಕ ನಗರದಲ್ಲಿ ತೆಗೆದಿರಿಸಿ ಅದನ್ನು ಕಂದಾಯ ಇಲಾಖೆಯವರಿಗೆ ವಹಿಸಿದ್ದವೆಂದು ಹೇಳಿದರು. ಶಾಸಕರು ಹೆಚ್ಚುವರಿ ಜಾಗ ನಿಮ್ಮ ಪುರಸಭೆಗಿದೆ ಎಂದಾಗ ಅದಕ್ಕೆ ಅಧಿಕಾರಿ ಒಂದು ಕಡೆ 7 ಗುಂಟೆ ಮತ್ತೊಂದೆಡೆ 6 ಗುಂಟೆ ಮಾತ್ರ ಪುರಸಭೆ ವ್ಯಾಪ್ತಿಗಿದೆ ಎಂದರು. ಶಾಸಕರು ಪ್ರತಿಕ್ರಿಯಿಸಿ ಹಿಂದಿನವರು ಎಲ್ಲ ಜಾಗ ಗುಳುಂ ಮಾಡಿದ್ದಾರೆ. ಇದಕ್ಕೆ ಬೇಕಾದ ಜಾಗ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಅಧ್ಯಕ್ಷೆ ಭೀಮವ್ವ ಶಿರಹಟ್ಟಿ, ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳ, ತಹಸೀಲ್ದಾರ್ ಎಸ್.ಡಿ. ನಾಗಾವಿ, ಕೃಷಿ ಅಧಿಕಾರಿ ಎಸ್.ಎಚ್. ಕೊಡತಗೇರಿ, ಹೆಸ್ಕಾಂ ಅಧಿಕಾರಿ ಎಂ.ಎ. ಸಗ್ರಿ, ನೀರಾವರಿ ನಿಗಮ ಅಧಿಕಾರಿ ಗುರುಪ್ರಸಾದ್, ಲೋಕೋಪಯೋಗಿ ಇಲಾಖೆ, ಪಶುಸಂಗೋಪನಾ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.