ಹಳೆ ತಹಸೀಲ್ ಕಚೇರಿ ಈಗ ಶೌಚಾಲಯ...!
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 25
ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಆವರಣವಿಂದು ಸಾಮೂಹಿಕ ಶೌಚಾಲಯ, ಮೂತ್ರಾಲಯವಾಗಿ ಬದಲಾಗಿ ಗಬ್ಬುವಾಸನೆ ಬೀರುತ್ತಿದೆ. ಇಲ್ಲಿಗೆ ಮೂಗುಮುಚ್ಚಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಜನ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.
ಈ ಮೊದಲು ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಒಂದೇ ಆವರಣದಲ್ಲಿದ್ದವು. ನೂತನ ಕಟ್ಟಡವಾದ ನಂತರ ಠಾಣೆ ಸ್ಥಳಾಂತರವಾಯಿತು. ನಂತರ ಇಲ್ಲಿ ತಹಸೀಲ್ದಾರ್ ಕಚೇರಿ ಮಾತ್ರ ಇತ್ತು. ತಹಸೀಲ್ದಾರ್ ಕಚೇರಿ ಇರುವವರೆಗೆ ಸುಂದರ, ಸ್ವಚ್ಛವಾಗಿತ್ತು. ನಂತರದ ದಿನಗಳಲ್ಲಿ ಮುಂಡರಗಿಯಲ್ಲಿ ಮಿನಿವಿಧಾನಸೌಧ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಅಲ್ಲಿದ್ದ ತಹಸೀಲ್ ಕಚೇರಿ ಎತ್ತಂಗಡಿಯಾಯಿತು.
ಶೌಚಾಲಯವಾಗಿ ಮಾರ್ಪಾಡು: ತಹಸೀಲ್ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರ ನಂತರ ಹಳೇ ಕಚೇರಿ ಕೊಠಡಿಗಳು ಇದೀಗ ಮೂತ್ರಾಲಯ, ಶೌಚಾಲಯವಾಗಿ ಮಾರ್ಪಟ್ಟಿವೆ. ಬೆಳಗಿನ 5ರಿಂದ 6.30ರ ವರೆಗೆ ಶೌಚಾಲಯವಾಗಿ, ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮೂತ್ರಾಲಯವಾಗಿ, ರಾತ್ರಿ 7.30ರಿಂದ ಬೆಳಗಿನವರೆಗೆ ಮತ್ತೆ ಶೌಚಾಲಯವಾಗಿದೆ. ಪಕ್ಕದಲ್ಲಿ ತರಕಾರಿ ಮಾರುಕಟ್ಟೆ, ಎದುರಿನಲ್ಲಿ ದಿನಸಿ ವಸ್ತುಗಳ ಕಿರಾಣಿ ಅಂಗಡಿ, ಅಕ್ಕಪಕ್ಕದ ಮನೆಗಳು ಜನ ಹಾಗೂ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಮಕ್ಕಳು ಗಬ್ಬುವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಭಯದಿಂದ ಜೀವನ ನಡೆಸುವಂತಾಗಿದೆ.
ಭರವಸೆ: ಪಟ್ಟಣದಲ್ಲಿರುವ ತರಕಾರಿ ಮಾರುಕಟ್ಟೆ ಇಕ್ಕಟ್ಟಾದ ಜಾಗೆಯಲ್ಲಿದೆ. ಈ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿಯೇ ನಿತ್ಯ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಈ ಹಿಂದೆ ಬಿ. ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಂದಿನ ಜಿಲ್ಲಾಧಿಕಾರಿಗೆ ಹಳೇ ತಹಸೀಲ್ದಾರ್ ಕಚೇರಿಯಲ್ಲಿ ತರಕಾರಿ ಮಾರುಕಟ್ಟೆಗೆ ಅವಕಾಶ ಮಾಡುವಂತೆ ಶಿಫಾರಸು ಮಾಡಲು ತಿಳಿಸಿದ್ದರು. ಪುರಸಭೆಯವರೂ ಕಂದಾಯ ಇಲಾಖೆಗೆ ಮಾತನಾಡಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ಯಾವುದೇ ಕೆಲಸ ನಡೆದಿಲ್ಲ. ಹಳೇ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಸ್ವಚ್ಛತೆ ಕೊರತೆಯಿದೆ ಎಂದು ಪತ್ರಿಕೆಗಳಲ್ಲಿ ಹಲವಾರು ಬಾರಿ ವರದಿಗಳು ಪ್ರಕಟವಾದರೂ ಪ್ರಯೋಜನವಾಗಿಲ್ಲ. ಅಲ್ಲಿ ನಿತ್ಯವೂ ಮಲ-ಮೂತ್ರ ವಿಸರ್ಜನೆ ನಿಲ್ಲಿಸಲು ಯಾವುದೇ ಕ್ರಮವನ್ನು ಪುರಸಭೆ, ತಾಲೂಕು ಅಧಿಕಾರಿಗಳಾಗಲಿ ತೆಗೆದುಕೊಂಡಿಲ್ಲ. ಮುಂಡರಗಿ ಪಟ್ಟಣದಲ್ಲಿ ಇಂತಹ ಅನೇಕ ಸಮಸ್ಯೆಗಳು ಇವೆ. ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇನ್ನಾದರೂ ಮುಂಡರಗಿ ಪಟ್ಟಣದ ಸ್ವಚ್ಛತೆ ಕುರಿತು ಅಧಿಕಾರಿಗಳು ಗಮನಹರಿಸುತ್ತಾರೋ ಕಾದುನೋಡಬೇಕಿದೆ.
ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ತಾಪಂ, ಪುರಸಭೆ, ನಗರಸಭೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಂಸ್ಥೆಗಳ ಸ್ವಚ್ಛತೆ ಬಗ್ಗೆ ಸ್ಥಳಕ್ಕೆ ಭೇಚಿ ನೀಡಿ ಪರಿಶೀಲಿಸುತ್ತಿದ್ದಾರೆ. ಆದರೆ, ಗದಗ ಜಿಲ್ಲೆಯಲ್ಲಿ ಮುಂಡರಗಿಯೂ ಒಂದಿದೆ. ಅಲ್ಲೊಂದು ಪುರಸಭೆ ಕಚೇರಿ ಇದೆ ಎನ್ನುವುದು ಜಿಲ್ಲಾಧಿಕಾರಿಗೆ ಗೊತ್ತಿದ್ದಂತಿಲ್ಲ. ಇವರು ಮುಂಡರಗಿಗೆ ಬಂದು ಯಾವುದೇ ಪರಿಶೀಲನೆ ನಡೆಸಿಲ್ಲ. ಕಂದಾಯ ಇಲಾಖೆಗೆ ಸೇರಿರುವ ಹಳೇ ತಹಸೀಲ್ದಾರ್ ಕಚೇರಿಯೇ ರೋಗ ಹರಡುವ ಕೇಂದ್ರವಾಗಿ ನಿರ್ಮಾಣವಾಗಿದ್ದರೂ ಇತ್ತಕಡೆ ಗಮನಹರಿಸದಿರುವುದು ವಿಷಾದಕರ.
-ವೈ.ಎನ್. ಗೌಡರ, ಮುಂಡರಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

