ಮುಂದುವರಿದ ಕಾಡು ಪ್ರಾಣಿಗಳ ದಾಳಿ: ರೈತಸಂಘದಿಂದ ಪ್ರತಿಭಟನೆ
ಕ.ಪ್ರ. ವಾರ್ತೆ ಅರಸೀಕೆರೆ ಏ.3
ತಾಲೂಕಿನಲ್ಲಿ ನಿರಂತರವಾಗಿ ಕರಡಿ, ಕಾಡುಹಂದಿ, ಚಿರತೆ, ಹಾಗೂ ಆನೆ ಮುಂತಾದ ಕಾಡು ಪ್ರಾಣಿಗಳಿಂದ ದಾಳಿ ಸಂಭವಿಸುತ್ತಿದ್ದರೂ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಧೋರಣೆ ಖಂಡಿಸಿ ತಾಲೂಕು ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಅರಣ್ಯ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ದಿನನಿತ್ಯ ಕರಡಿ ದಾಳಿಯಿಂದ ಜನರು ಮನೆಯಿಂದ ಹೊರಗೆ ಬರಲು ಭಯಪಡುವಂತಹ ಪರಿಸ್ಥಿತಿ ಎದುರಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಹಲವು ವ,ರ್ಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕರಡಿ, ಕಾಡುಹಂದಿ, ಚಿರತೆ, ಹಾಗೂ ಆನೆ ದಾಳಿ ಸಂಭವಿಸುತ್ತಿದ್ದರೂ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಪರಿಹಾರ ದೊರಕಿಸುವುದು ಮಾತ್ರ ತಮ್ಮ ಕರ್ತವ್ಯವೆಂದು ಅಧಿಕಾರಿಗಳು ತಿಳಿದಿದ್ದು ಇಂತಹ ನಿರ್ಲಕ್ಷ್ಯ ಮನೋಭಾವ ಹೊಂದಿರುವ ಅಧಿಕಾರಿಗಳನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲವೇ ಅಮಾನತು ಮಾಡಬೇಕೆಂದರಲ್ಲದೇ, ಗಾಯಾಳುವಿಗೆ ಸರ್ಕಾರ ಸೂಕ್ತ ಪರಿಹಾರ ಧನ ವಿತರಿಸಬೇಕೆಂದು ಒತ್ತಾಯಿಸಿದರು.
ದಸಂಸ ಮುಖಂಡ ವೆಂಕಟೇಶ್ ಮಾತನಾಡಿ, ಕಣಕಟ್ಟೆ ಹೋಬಳಿಯ ಭಾಗಗಳಲ್ಲಿ ಕರಡಿ ದಾಳಿ ಪುನರಾವರ್ತನೆಯಾಗುತ್ತಿದ್ದು ಕರಡಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತಿಚೇಗಷ್ಟೇ ಹಿಡಿದಿದ್ದ ಕರಡಿಯನ್ನು ನಾಗಪುರಿ ಅರಣ್ಯದಲ್ಲಿಯೇ ಬಿಟ್ಟು ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಇದರಿಂದಾಗಿಯೇ ರೊಚ್ಚಿಗೆದ್ದಿರುವ ಕರಡಿಗಳು ದಾಳಿಗೆ ಮುಂದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮೇಳೆನಹಳ್ಳಿ ನಾಗರಾಜ್ ಮಾತನಾಡಿ ಕಾಡುಪ್ರಾಣಿಗಳಿಂದ ಜನರನ್ನು ರಕ್ಷಿಸುವಲ್ಲಿ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ಮುಂದುವರೆದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಣ್ಣಾಯಕನಹಳ್ಳಿ ಶಿವಮೂರ್ತಿ ಇತರರು ಮಾತನಾಡಿದರು. ರೈತ ಮುಖಂಡ ಜವನಹಳ್ಳಿ ನಿಂಗಪ್ಪ, ಮೇಳೆನಹಳ್ಳಿ ರಮೇಶ್, ಬೋಂಡ ರವಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

