ಡಾ. ಮಳಲಿ ವಸಂತಕುಮಾರ್ ಅಖಿಲ ಕರ್ನಾಟಕ ಪ್ರಥಮ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ
ಕನ್ನಡಪ್ರಭ ವಾರ್ತೆ, ಹಾಸನ, ಏ.4
ಜಿಲ್ಲಾ ವಚನ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿ ಆಶ್ರಯದಲ್ಲಿ ಏಪ್ರಿಲ್ 20 ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಕನ್ನಡದ ಸುಪ್ರಸಿದ್ಧ ಸಾಹಿತಿ ಡಾ. ಮಳಲಿ ವಸಂತಕುಮಾರ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ತಿ. ರಾಮಕೃಷ್ಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನಾಯಕರಹಳ್ಳಿ ಮಂಜೇಗೌಡ ತಿಳಿಸಿದ್ದಾರೆ.
ವಸಂತಕುಮಾರ್ ನಾಡು-ನುಡಿಯ ಅವಿಚ್ಚಿನ್ನ ಆರಾಧಕರು, ಕನ್ನಡಪರ ಹೋರಾಟಗಾರರು, ಜನಪ್ರಿಯ ವಾಗ್ಮಿಗಳು. ಕನ್ನಡ ಸಾರಸ್ವತ ಲೋಕಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಅವರ ವಚನ ವಿಭೂತಿ ಸಹಸ್ರ ಪುಟಗಳ ಆಧುನಿಕ ವಚನ ಸಂಕಲನ ಅಚ್ಚಿನಲ್ಲಿದೆ.
ಪ್ರಸ್ತುತ ವಚನ ವರ್ತಮಾನ ಎಂಬ ವಚನ ಸಂಕಲನ ಹೊರ ಬರುತ್ತಿದೆ. ಮಳಲಿ ಆಧುನಿಕ ವಚನಕಾರರೆನಿಸಿದ್ದು, ಮೈಸೂರು ವಿವಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಪ್ರಸ್ತುತ ಎಂ.ಫಿಲ್ ತರಗತಿಗೆ ಬೋಧಿಸುತ್ತಿದ್ದಾರೆ.
ಮಳಲಿ ಪರಿಚಯ: ಹಾಸನ ಜಿಲ್ಲೆ ಮಳಲಿ ಗ್ರಾಮದ ದೇವಮ್ಮ - ಪಟೇಲ್ ಚಿಕ್ಕೇಗೌಡರ ಪುತ್ರ ವಸಂತಕುಮಾರ್ 1945ರ ಆಗಸ್ಟ್ 6 ರಂದು ಜನಿಸಿದರು.
ಹುಟ್ಟೂರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಸಾಂಸ್ಕೃತಿಕ ನೆಲೆವೀಡಾದ ಮೈಸೂರಿನಲ್ಲಿ ಎಂ.ಎ. ಮುಗಿಸಿ, ಮದರಾಸು ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದು ಡಾ. ಎಚ್. ತಿಪ್ಪೇರುದ್ರಸ್ವಾಮಿ ಮಾರ್ಗದರ್ಶನದಲ್ಲಿ ಕುವೆಂಪು ನಾಟಕಗಳನ್ನು ಕುರಿತು ಪಿ.ಎಚ್.ಡಿ. ಪದವಿ ಪಡೆದರು. ನಂತರ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.
ಆನಂತರ ಯುವರಾಜ ಕಾಲೇಜಿನಲ್ಲಿ ಉಪ ಪ್ರಾಧ್ಯಾಪಕರಾಗಿ, ಮೈಸೂರು ವಿವಿ ನಿಲಯ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಹಾಸನದ ಹೇಮಗಂಗೋತ್ರಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರದಾಗಿದೆ.
ಮಳಲಿ ಮುಖ್ಯ ಸಂಯೋಜಕರಾಗಿ ಉತ್ತಮ ಆಡಳಿತಗಾರರಾಗಿ, ಆತ್ಯುತ್ತಮ ಸಂಶೋಧಕರಾಗಿ, ಕೃಷಿಕರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದಾರೆ.
ಡಾ. ದೇ.ಜ.ಗೌ ಮೈಸೂರು ವಿವಿ ಕುಲಪತಿಗಳಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ದುಡಿದಿದ್ದಾರೆ.
ವಿಶ್ವವಿದ್ಯಾನಿಲಯ ಹಾಗೂ ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿಎಚ್ಡಿ ಪದವಿ ಪಡೆದಿದ್ದಾರೆ. 8 ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಗ್ರಂಥಾಲಯಕ್ಕೆ ಹುಟ್ಟಿದ ಮನೆ: ಕಳೆದ ವರ್ಷ ಅಬುದಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿ ಮಳಲಿ ಭಾಗವಹಿಸಿದ್ದರು.
ತಮ್ಮ ಹುಟ್ಟೂರು ಮಳಲಿ ಗ್ರಾಮದಲ್ಲಿ ಗ್ರಾಮಸ್ಥರ ಜ್ಞಾನಭಂಡಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಂಥಾಲಯ ತೆರೆದು ತಾನು ಹುಟ್ಟಿ ಬೆಳೆದ ಮನೆಯನ್ನೇ ಗ್ರಂಥಾಲಯಕ್ಕೆ ನೀಡಿದ್ದು ಅದರ ಪೂರ್ಣ ನಿರ್ವಹಣೆ ಮಳಲಿಯವರೇ ನಿರ್ವಹಿಸುತ್ತಿದ್ದಾರೆ.
ಇವರ ಸಹೃದಯತೆ ಸೌಜನ್ಯ, ಪ್ರಾಮಾಣಿಕತೆ, ಸರಳ ಪ್ರವೃತ್ತಿಗಳಿಂದ ಅನೇಕರ ಜನಮನಗೆದ್ದಿದ್ದು, ಕನ್ನಡರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದಹಲವಾರು ಪ್ರಶಸ್ತಿ ಗೌರವಗಳಿಗೆ ಬಾಜನರಾಗಿದ್ದಾರೆ.
ಕಥಾ ಸಂಕಲನ: ಈಡು. ವಿಮರ್ಶಕ ಕೃತಿಗಳು, ಕದಂಬ, ವಿಪಕ್ಷೆ ಸಂಪಾದಿತ ಕೃತಿಗಳು ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ, ಕುವೆಂಪು ನಾಟಕ ಸಮೀಕ್ಷೆ ಚಿತ್ರಾಂಗದ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ, ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಯದುಗಿರಿ ಮಹಿಮೆ, ಗ್ರಂಥಾಮೃತ, ಸಂಸ್ಕೃತಿ ದೀಪಮಾಲೆ, ನಮ್ಮ ಕನ್ನಡ ವಜ್ರಕಿರಣ, ಗ್ರಂಥಾಮೃತ, ಸಂಸ್ಕೃತಿ ದೀಪಮಾಲೆ, ವಜ್ರಕಿರಣ, ಯುವ ಕವಿತೆ, ಸರಸ್ವತಿಯ ವರಪುತ್ರ, ಕನ್ನಡ ದೀಪ ಮುಂತಾದ 4ಕ್ಕು ಹೆಚ್ಚಿನ ಕೃತಿ ರಚಿಸಿದ್ದಾರೆ.
ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಸೌಭಾಗ್ಯವೆನ್ನಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

