ಮಾಹಿತಿ ಕೇಳಿದ್ದಕ್ಕೆ ರು. 4,40,432 ಪಾವತಿಗೆ ಸೂಚನೆ
ಕ.ಪ್ರ. ವಾರ್ತೆ ಸಕಲೇಶಪುರ ಏ.6
ಮಾಹಿತಿ ಹಕ್ಕಿನಡಿ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಲು 4,40.432 ರು. ಕಟ್ಟುವಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಪುರಸಭೆ ಆದೇಶಿಸಿರುವ ಕುತೂಹಲಕಾರಿ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಎಂ ರಘು ಎಂಬುವರು ಪುರಸಭೆ 2007 ರಿಂದ ಫೆ. 2013ನೇ ಇಸವಿಯವರೆಗೆ ನಡೆದಿರುವ ಕಾಮಗಾರಿಗಳ ವಿವರ ಕೇಳಿದ್ದಾರೆ. ಆದರೆ ಈ ಮಾಹಿತಿ ಪಡೆಯಲು ನೀವು 2,38,820 ರು. ಪಾವತಿಸಬೇಕು. ನಂತರ ನಾವು ಮಾಹಿತಿ ನೀಡುತ್ತೇವೆ ಎಂದು ಹಿಂಬರಹ ನೀಡಿದ್ದಾರೆ.
ಅದೇ ರೀತಿ ಪುರಸಭೆಯ ದ್ವಿತೀಯ ದರ್ಜೆ ಸಹಾಯಕಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಷ್ಟು ಕಡತಗಳನ್ನು ವಿಲೇವಾರಿ ಮಾಡಿದ್ದಾರೆಂದು ಮತ್ತೊಂದು ಮಾಹಿತಿ ಕೇಳಿದ್ದಾರೆ. ಇದಕ್ಕೆ ಪುರಸಭೆಯವರು 2,01,612 ರು. ಕಟ್ಟಿ ನಂತರ ಮಾಹಿತಿ ನೀಡುತ್ತೇವೆ ಎಂದು ಹಿಂಬರಹ ನೀಡುವ ಮೂಲಕ ಮಾಹಿತಿ ಹಕ್ಕಿನಡಿ ಪುರಸಭೆಯ ಕಾಮಗಾರಿ ತಿಳಿಯಲು ಯತ್ನಿಸಿದ ವ್ಯಕ್ತಿಗೆ ಸಖತ್ ಶಾಕ್ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಘು, ಪುರಸಭೆಯವರು ಸಾರ್ವಜನಿಕರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರದ ನಿಯಮದಂತೆ ಕೇವಲ 5 ರಿಂದ 7 ವರ್ಷ ಒಂದೇ ಕಚೇರಿಯಲ್ಲಿ ಕೆಲಸ ಮಾಡಬಹುದೆಂಬ ನಿಯಮವಿದ್ದರೂ ಕೆಲ ಸಿಬ್ಬಂದಿ ಹಲವಾರು ವರ್ಷಗಳಿಂದ ಇದೇ ಕಚೇರಿಯಲ್ಲಿ ಕಾಯಂ ಆಗಿ ಠಿಕಾಣಿ ಹೂಡಿದ್ದಾರೆ. ಪುರಸಭೆಯ ಕೆಲವು ಸಿಬ್ಬಂದಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಮಾಹಿತಿ ನೀಡಿದರೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಈ ರೀತಿ ಲಕ್ಷಾನುಗಟ್ಟಲೇ ಹಣ ನೀಡಲು ಆದೇಶಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

