ಕೋಟ್ಯಂತರ ವೆಚ್ಚ: ಕಾಮಗಾರಿ ಕಳಪೆ...
ಕನ್ನಡಪ್ರಭ ವಾರ್ತೆ, ಆಲೂರು, ಏ.12
ಪಟ್ಟಣ ಪಂಚಾಯ್ತಿಗೆ ಕಳೆದ ಸಾಲಿನಲ್ಲಿ ಕೋಟ್ಯಂತರ ರು. ಅನುದಾನ ಬಂದಿದ್ದು, ಈ ಹಣದಲ್ಲಿ ಕೈಕೊಂಡಿರುವ ಕಾಮಗಾರಿಗಳು ಅತ್ಯಂತ ಕಳಪೆಯಿಂದ ಕೂಡಿವೆ ಎಂಬ ತೀವ್ರ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದಕ್ಕೆ ಉದಾಹರಣೆ ಇಲ್ಲಿ ನಿರ್ಮಿಸಲಾಗಿರುವ ಚರಂಡಿಗಳು, ಕಾಂಕ್ರಿಟ್ ರಸ್ತೆಗಳು ವರ್ಷದೊಳಗೇನೆ ಹದಗೆಟ್ಟಿರುವುದು. ಇವುಗಳಿಗಾಗಿ ಕೋಟ್ಯಂತರ ರು. ವ್ಯವಯಿಸಲಾಗಿದ್ದು, ಇವುಗಳ ಗುಣಮಟ್ಟದ ಬಗ್ಗೆ ಪಪಂನವರು ಎಷ್ಟು ಒತ್ತು ನೀಡಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ.
ಇವುಗಳ ಗುತ್ತಿಗೆಯನ್ನು ಸ್ಥಳೀಯರೇ ನಡೆಸುವ ಕಾರಣ ಅವರೊಂದಿಗೆ ನಾವು ಏಕೆ ಸುಮ್ಮನೆ ನಿಷ್ಠುರ ಕಟ್ಟಿಕೊಳ್ಳಬೇಕೆಂದು ಕಾಮಗಾರಿ ಹೇಗೆಯೇ ನಡೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸುವ ಗೋಜಿಗೆ ಹೋಗುವುದಿಲ್ಲ. ಕಳಪೆ ಕಾಮಗಾರಿ ನಡೆಯಲು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರವೂ ಕಾರಣ ಎಂದು ನಾಗರಿಕ ವೇದಿಕೆ ಸಂಚಾಲಕ ಸುರೇಶ್ ದೂರುತ್ತಾರೆ.
ಈಗಾಗಲೇ ಸರ್ವೇ ಕಾರ್ಯ ಮುಗಿದಿರುವ ಎಲ್ಲ ಕಾಂಕ್ರಿಟ್ ರಸ್ತೆಗಳನ್ನು ತೆರವುಗೊಳಿಸ ಬೇಕಾಗುತ್ತದೆ. ಕೋಟ್ಯಂತರ ರು. ವ್ಯಯಿಸಿ ನಿರ್ಮಿಸಿದ ರಸ್ತೆಗಳನ್ನು ಈ ರೀತಿ ವೃಥಾ ಒಡೆದರೆ ಯಾರಿಗೆ ನಷ್ಟವಾಗುತ್ತದೆ ಎಂಬುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿದಿಲ್ಲವೇ.
ಮುಂದಿನ ದಿನಗಳಲ್ಲಿ ಯುಜಿಡಿ ನಿರ್ಮಾಣ ವಾಗುತ್ತದೆ. ಆಗ ಇವುಗಳನ್ನು ತೆರವುಗೊಳಿಸ ಬೇಕಾಗುತ್ತದೆ. ಅದರ ಬದಲು ಕಡಿಮೆ ಖರ್ಚಿನ ಡಾಂಬರ್ ರಸ್ತೆಗಳನ್ನು ನಿರ್ಮಿಸಿದ್ದರೆ ಸಾಕೆಂಬ ಮುಂದಾಲೋಚನೆ ಇವರಿಗೆ ಇರಲಿಲ್ಲವೇ ಎಂಬುದು ತಿಳಿಯದಾಗಿದೆ.
ಅನಗತ್ಯವಾದ್ದೇ ನಿರ್ಮಾಣ: ಪಟ್ಟಣದಲ್ಲಿ ಅವಶ್ಯ ಬೇಕಾದ್ದನ್ನು ಬಿಟ್ಟು ಅನಗತ್ಯವಾದವುಗಳನ್ನೇ ಹೆಚ್ಚಾಗಿ ನಿರ್ಮಿಸಲಾಗಿದೆ. ಪಟ್ಟಣದಲ್ಲಿ ವ್ಯಾಪಾರಿ ಮಳಿಗೆಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಇವುಗಳು ಉದ್ಘಾಟನೆಗೊಂಡು ಹಲವು ವರ್ಷಗಳೇ ಕಳೆದರೂ ಉಪಯೋಗಕ್ಕೆ ಬಾರದೆ ಹಾಳು ಬಿದ್ದಿವೆ. ಕೋಟ್ಯಂತರ ಮೌಲ್ಯದ ನೂತನ ಮಳಿಗೆಗಳನ್ನು (ಪಟ್ಟಣ ಪಂಚಾಯ್ತಿ ಕಚೇರಿ ಪಕ್ಕದಲ್ಲಿ) ನಿರ್ಮಿಸಲಾಗಿದೆ. ತಾಲೂಕು ಪಂಚಾಯ್ತಿ ಮುಂಭಾಗ ನಿರ್ಮಿಸಿರುವ ಕಾಂಪ್ಲೆಕ್ಸ್ನಲ್ಲಿ ಕೇವಲ ಮುಖ್ಯ ರಸ್ತೆಯೆಡೆ ಇರುವ ಮಳಿಗೆಗಳಿಗೆ ಮಾತ್ರ ಬೇಡಿಕೆಯಿದ್ದರೆ, ಪಪಂನವರು ನಾಲ್ಕು ಬದಿಯಲ್ಲಿ ರಸ್ತೆ ಇದೆ ಎಂಬಂತೆ ನಾಲ್ಕು ದಿಕ್ಕುಗಳಿಗೂ ಮಳಿಗೆಗಳನ್ನು ನಿರ್ಮಿಸಿ, ಅದರ ಮೇಲ್ಭಾಗದಲ್ಲಿ ಎರಡು ದೊಡ್ಡ ಹಾಲ್ಗಳನ್ನು ನಿರ್ಮಿಸಿದ್ದಾರೆ. ಆ ಹಾಲ್ಗಳು ಇಂದಿಗೂ ಖಾಲಿ ಬಿದ್ದಿವೆ.
ಮನಸೋ ಇಚ್ಛೆ ವರ್ತಿಸುವ ಸದಸ್ಯರು: ಇಲ್ಲಿ ಬೇಕಾಬಿಟ್ಟಿಯಾಗಿ ನಿರ್ಮಿಸಿರುವ ಕಾಂಪ್ಲೆಕ್ಸ್ಗಳನ್ನು ಸ್ವಲ್ಪ ಯೋಚಿಸಿ ನಿರ್ಮಿಸಿದ್ದರೆ ಚನ್ನರಾಯಪಟ್ಟಣ, ಬೇಲೂರು, ಹೊಳೆನರಸೀಪುರ ತಾಲೂಕಿನಲ್ಲಿ ನಿರ್ಮಿಸಿರುವ ಕಾಂಪ್ಲೆಕ್ಸ್ಗಳು ಯು (್ಖ) ಮಾದರಿಯಲ್ಲಿದ್ದು, ಅಲ್ಲಿ ಪ್ರತಿಯೊಂದು ಮಳಿಗೆಗಳಿಗೂ ಬೇಡಿಕೆಯಿದೆ. ಇದನ್ನ ನೋಡಿಕೊಂಡು ಸಹ ನಾಗರಿಕರು ಪ್ರಶ್ನಿಸದೆ ತೆಪ್ಪಗಿದ್ದಾರೆ. ಇದರಿಂದಾಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ಸದಸ್ಯರು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ.
ಆಲೂರಿನ ಮತ್ತೊಂದು ವಿಶೇಷತೆ ಎಂದರೆ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲದಿರುವುದು. 11 ವಾರ್ಡ್ಗಳ ಮಾತು ಹಾಗಿರಲಿ. ಪಟ್ಟಣದ ಮುಖ್ಯ ರಸ್ತೆಯಲ್ಲಿಯೂ ಪಪಂನವರು ಶೌಚಾಲಯ ನಿರ್ಮಾಣಕ್ಕೆ ಮನಸ್ಸು ಮಾಡಿಲ್ಲ. ಪಟ್ಟಣಕ್ಕೆ ಹೊರಗಿನಿಂದ ಬರುವವರು ಶೌಚಾಲಯಕ್ಕೆ ಸ್ಥಳವಿಲ್ಲದೆ ಪಟ್ಟಣ ಪಂಚಾಯ್ತಿಯವರಿಗೆ ಹಿಡಿಶಾಪ ಹಾಕಿ ಗಲ್ಲಿಗಳಲ್ಲಿ ಕಾರ್ಯ ಮುಗಿಸಬೇಕಿದೆ. ಗಂಡಸರಾದರೆ ಹ್ಯಾಗೋ ಕಾರ್ಯ ಮುಗಿಸಿ ಕೊಳ್ಳುತ್ತಾರೆ. ಆದರೆ ಹೆಂಗಸರ ಪಾಡೇನೆಂಬುದು ಇವರಿಗೆ ತಿಳಿದಿದೆಯೇ?.
ಪಪಂನಲ್ಲಿ ಐವರು ಮಹಿಳಾ ಸದಸ್ಯರಿದ್ದರೂ ಈ ಬಗ್ಗೆ ಏಕೆ ಚಿಂತಿಸಿಲ್ಲ ಎಂಬುದನ್ನು ಅವರೇ ತಿಳಿಸಬೇಕಿದೆ. ಇಲ್ಲಿನ ಜನಸಂಖ್ಯೆ ಹಾಗೂ ಹೊರಗಿನಿಂದ ಬಂದು ಹೋಗುವವರನ್ನು ಪರಿಗಣಿಸಿದರೆ ಕನಿಷ್ಠ ಮೂರರಿಂದ ನಾಲ್ಕು ಶೌಚಾಲಯಗಳ ಅವಶ್ಯಕತೆ ಪಟ್ಟಣದಲ್ಲಿದೆ.
ಇರುವುದೊಂದೇ ಶೌಚಾಲಯ: ಒಂದು ನೆಮ್ಮದಿಯ ಸಂಗತಿ ಏನೆಂದರೆ ಪಟ್ಟಣದ ಬಸ್ನಿಲ್ದಾಣದಲ್ಲಿರುವ ಶೌಚಾಲಯ. ಇದು ಕೇವಲ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದರೆ, ವಿಧಿ ಇಲ್ಲದೆ ಪಟ್ಟಣದ ನಾಗರಿಕರು ಉಪಯೋಗಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ನಾಗರಿಕರಿಗೆ ಅನುಕೂಲವಾದರೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಏಕೆಂದರೆ ಪ್ರಯಾಣಿಕರಿಗೆ ಅವಶ್ಯಕತೆ ಇದ್ದಾಗ ಸಾರ್ವಜನಿಕರು ಇದರ ಸದುಪಯೋಗ ಪಡೆಯುತ್ತಿರುತ್ತಾರೆ. ಇದು ಇಬ್ಬರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.
ಇಲ್ಲಿರುವ ಶೌಚಾಲಯವಾದರೂ ಸುಸಜ್ಜಿತವಾಗಿದೆಯೇ ಎಂದರೆ ಅದೂ ಸಹ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಇದರ ನಿರ್ವಹಣೆಯೂ ಸಮರ್ಪಕವಾಗಿಲ್ಲ.
ಕೆಲವೊಮ್ಮೆ ಇಲ್ಲಿ ನೀರಿನ ಸಮಸ್ಯೆ ಉಂಟಾಗಿ ವಾರಗಟ್ಟಲೆ ಬೀಗ ಹಾಕಿದ ಉದಾಹರಣೆಗಳಿವೆ. ಇನ್ನು ಇದಕ್ಕೆ ಅವೈಜ್ಞಾನಿಕ ಮಾದರಿಯಲ್ಲಿ ಇಂಗು ಗುಂಡಿ ನಿರ್ಮಿಸಿದ್ದು, 20 ರಿಂದ 30 ದಿನದೊಳಗೆ ಇದು ಭರ್ತಿಯಾಗಿ ಪಕ್ಕದಲ್ಲಿರುವ ಖಾಜಿ ಮೊಹಲ್ಲಾ ಮನೆಗಳ ಮುಂಭಾಗದ ಚರಂಡಿಗಳಲ್ಲಿ ಹರಿಯುತ್ತಿದೆ. ಈ ಶೌಚಾಲಯ ನಿರ್ಮಾಣವಾದಾಗಿನಿಂದ ಖಾಜಿ ಮೊಹಲ್ಲಾ ಬಡಾವಣೆಯ ನಿವಾಸಿಗಳ ಗೋಳು ಹೇಳತೀರದು. ಶೌಚ ಗುಂಡಿ ಮಲೀನ ತ್ಯಾಜ್ಯ ಮನೆಯ ಮುಂಭಾಗವೇ ಹರಿದರೂ ಸಹಿಸಲು ಅಸಾಧ್ಯ ವಾಸನೆಯ ನಡುವೆ ಜೀವನ ಸಾಗಿಸಬೇಕಾಗಿದ್ದು, ಸಾಂಕ್ರಾಮಿಕ ರೋಗಕ್ಕೆ ಈ ಪ್ರದೇಸದ ಜನತೆ ತುತ್ತಾಗುವ ಸಂಭವ ಇಲ್ಲದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

