ಹಾಸನ

ಚುನಾವಣಾ ಖರ್ಚು ವೆಚ್ಚ ಬಗ್ಗೆ ನಿಗಾ: ಅಧಿಕಾರಿಗಳಿಗೆ ಸೂಚನೆ

Published On :

ಕನ್ನಡಪ್ರಭ ವಾರ್ತೆ, ಹಾಸನ, ಏ.12
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ಸಂಪೂರ್ಣ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚುನಾವಣಾ ವೆಚ್ಚಗಳ ಪರಿಶೀಲನೆಗಾಗಿ ಸ್ಥಳೀಯವಾಗಿ ನೇಮಕವಾಗಿರುವ ಜಿಲ್ಲೆ ಹಾಗೂ ಕ್ಷೇತ್ರ ಮಟ್ಟದ ಲೆಕ್ಕಪತ್ರ ಅಧಿಕಾರಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್,ರಾಜ್ ನಡೆಸಿದ ಸಭೆಯಲ್ಲಿ ಹಾಜರಿದ್ದ ಚುನಾವಣಾ ಆಯೋಗದಿಂದ ನೇಮಕಗೊಂಡು ಜಿಲ್ಲೆಗೆ ಆಗಮಿಸಿರುವ ಖರ್ಚು ವೆಚ್ಚ ವೀಕ್ಷಕರು ಈವರೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿತು.
ಎಂಸಿಎಂಸಿ ತಂಡಗಳ ಪರಿಚಯ:   ಕ್ಷೇತ್ರವಾರು ನೇಮಕಗೊಂಡಿರುವ ಖರ್ಚು ವೆಚ್ಚ ವೀಕ್ಷಕರು, ಫ್ಲೈಯಿಂಗ್,ಸ್ವಾಡ್ ಎಂಸಿಎಂಸಿ ತಂಡಗಳ ಪರಿಚಯ ಮಾಡಿಕೊಂಡರು. ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಲೆಕ್ಕಪತ್ರಗಳನ್ನು ಮರೆಮಾಚಲು ಸಾಧ್ಯವಾಗದಂತೆ ಸೂಕ್ಷ್ಮ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ತಾವು ಈಗಾಗಲೇ ಕರಪತ್ರ, ಬ್ಯಾನರ್, ಫ್ಲೆಕ್ಸ್, ಕುರ್ಚಿ ನೀರು, ಊಟ, ವೇದಿಕೆ, ಶಾಮಿಯಾನ, ಧ್ವನಿವರ್ಧಕ ಮತ್ತಿತರ ಪ್ರಮುಖವಾಗಿ ಚುನಾವಣೆ ಸಂದರ್ಭ ಬಳಸಲ್ಪಡುವ ವಸ್ತು ಮತ್ತು ಸೇವೆಗಳಿಗೆ ಅಂದಾಜು ಐಟಂವಾರು ವೆಚ್ಚವನ್ನು ನಿಗಧಿಪಡಿಸಿ ಎಲ್ಲಾ ಲೆಕ್ಕ ಪತ್ರ ಅಧಿಕಾರಿಗಳಿಗೆ ನೀಡಿದ್ದು ಅಭ್ಯರ್ಥಿಗಳು ನೀಡುವ ವೆಚ್ಚ ಬಿಲ್ಲುಗಳನ್ನು ತಾಳೆ ಹಾಕಿ ನೋಡುವಂತೆ ಸೂಚಿಸಲಾಗಿದೆ ಎಂದರು.
ಯಾವುದೇ ಹಬ್ಬ ಧಾರ್ಮಿಕ ಆಚರಣೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ ಇದರ ಹೆಸರಿನಲ್ಲಿ ಅವಕಾಶ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು. ಮದುವೆ ನಾಮಪಕರಣಗಳಿಗೆ ಅನುಮತಿ ಅಗತ್ಯವಿಲ್ಲ. ಆದರೆ ರಾಜಕಾರಣಿಗಳು ಆಗಮಿಸಿ ಆಮಿಷವೊಡ್ಡುವುದು, ಮತದಾರರ ಓಲೈಕೆ ಮಾಡುವ ಪ್ರಯತ್ನಗಳಾದರೆ ಆ ಬಗ್ಗೆ ಕ್ರಮ ವಹಿಸಲು ಈಗಾಗಲೇ ಆಯಾಯಾ ತಂಡಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೋಹನ್,ರಾಜ್ ತಿಳಿಸಿದರು.
ಕರಪತ್ರಗಳ ಮೇಲೆ ಮುದ್ರಕರ ಹೆಸರು:  ಅಭ್ಯರ್ಥಿ ಹಾಗೂ ಅವರು ನಿಯೋಜಿಸಿರುವ ಏಜೆಂಟರು ಲೆಕ್ಕಪತ್ರಗಳ ಬಿಲ್ಲುಗಳನ್ನು ಲೆಕ್ಕ ಪತ್ರ ಅಧಿಕಾರಿಗಳಿಗೆ ಸಲ್ಲಿಸಬಹುದು. ಆದರೆ ಅಭ್ಯರ್ಥಿ ನೇಮಿಸುವ ಏಜೆಂಟ್ ಚುನಾವಣಾ ಲೆಕ್ಕಪತ್ರ ಅಧಿಕಾರಿಗಳ ಸಮ್ಮುಖದಲ್ಲಿ ಮಾದರಿ ಸಹಿ ಮಾಡಿ ನಂತರ ತಾವೇ ಹಾಜರಾಗಿ ಬಿಲ್ಲುಗಳನ್ನು ಸಲ್ಲಿಸಬೇಕಾಗುತ್ತದೆ. ಪ್ರತಿ ಕರಪತ್ರಗಳ ಮೇಲೆ ಮುದ್ರಕರು ಹಾಗೂ ಪ್ರಕಟಕರ ಹೆಸರು ಮುದ್ರಿಸಲೇಬೇಕಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ನಡೆಸಲು ಜಿಲ್ಲಾ ಮಟ್ಟದ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯಿಂದ ಅನುಮೋದನೆ ಪಡೆಯತಕ್ಕದ್ದು ಎಂದು ಹೇಳಿದರು. ಮೊಬೈಲ್,ಗಳಿಗೆ ಬಲ್ಕ್ ಎಸ್ಎಂಎಸ್ಗಳನ್ನು ಕಳುಹಿಸುವ ಮುನ್ನ ಹಾಗೂ ಇಂಟರ್‌ನೆಟ್ ಮೂಲಕ ಪ್ರಚಾರ ಮಾಡಲು ಈ ಸಮಿತಿಗೆ ಮಾಹಿತಿ ನೀಡಿ ದೃಢೀಕರಿಸಿಕೊಳ್ಳತಕ್ಕದ್ದು ಎಂದರು.
ಅನುಮಾನಾಸ್ಪದ ವಾಹನಗಳ ತಪಾಸಣೆ:  ಜಿಲ್ಲೆಯಲ್ಲಿ 24 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಚುರುಕು ಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಹೇಳಿದರು. ಚೆಕ್‌ಪೊಸ್ಟ್‌ಗಳಲ್ಲದೇ ಜಿಲ್ಲೆಯ ಹಲವು ಭಾಗಗಳಲ್ಲಿ ದಿಢೀರ್ ತಪಾಸಣೆಯನ್ನೂ ನಡೆಸಲಾಗುವುದು ಎಂದರು.
ಕೇಂದ್ರ ಚುನಾವಣಾ ಆಯೋಗ ನೇಮಿಸಿರುವ ವೆಚ್ಚ ವೀಕ್ಷಕರಾದ ಶ್ರವಣಬೆಳಗೊಳ, ಅರಕಲಗೂಡು, ಸಕಲೇಶಪುರ ಕ್ಷೇತ್ರಗಳ ಆರ್.ಕೆ. ಪಾಂಡೆ, ಐ.ಎ. ಮತ್ತು ಎ.ಎಸ್, ಅರಸೀಕೆರೆ ಕ್ಷೇತ್ರದ ಎಸ್.ಕೆ. ವಿಮಲನಾಥನ್. ಐ.ಸಿ. ಮತ್ತು ಸಿ.ಇ.ಎಸ್., ಹಾಸನ ಮತ್ತು ಬೇಲೂರು ಕ್ಷೇತ್ರಗಳಿಗೆ ಸತ್ಯಜಿತ್‌ಸಿಂಗ್ ಐ.ಸಿ. ಮತ್ತು ಸಿ.ಇ.ಎಸ್. ಮತ್ತು ಹೊಳೆನರಸೀಪುರ ಕ್ಷೇತ್ರದ ರವೀಂದ್ರ ಸಿಂದು,  ಐ.ಆರ್.ಎಸ್. ಅವರು ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಕೃಷ್ಣ ಏಳು ಕ್ಷೇತ್ರಗಳ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಲೆಕ್ಕಪತ್ರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.