ಹಾಸನ

ಪ್ರಾಣಿ, ಪ್ರಕೃತಿ ಕೇಂದ್ರಿತ ಸಾಹಿತ್ಯ ಹೆಚ್ಚು ಹೆಚ್ಚು ರಚನೆಯಾಗಲಿ: ಲೇಖಕಿ ರೂಪ

Published On :

ಕ.ಪ್ರ. ವಾರ್ತೆ  ಹಾಸನ  ಏ. 16
ಮಾನವ ಕೇಂದ್ರಿತ ಸಾಹಿತ್ಯ ರಚನೆಯ ಹೊರಗೆ ಪ್ರಾಣಿ ಪ್ರಕೃತಿ ಕೇಂದ್ರಿತ ಸಾಹಿತ್ಯ ರಚನೆಯೂ ಆಗಬೇಕು. ಇದನ್ನು ಸಾಧಿಸಲು ಪಶುವೈದ್ಯನಿಗೆ ವಿಫುಲ ಅವಕಾಶಗಳಿವೆ ಎಂದು ಲೇಖಕಿ ರೂಪ ಹಾಸನ ಅಭಿಪ್ರಾಯ ಪಟ್ಟರು.
  ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು (ಶಿವಮೊಗ್ಗ), ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ  ಹಮ್ಮಿಗೊಂಡಿದ್ದ ಅನುವಾದ ಕೌಶಲ್ಯ ಮತ್ತು ಸವಾಲು ಹಾಗೂ ಪಶುವೈದ್ಯಕೀಯ ಸಾಹಿತ್ಯ ರಚನೆ ಕುರಿತು ನಡೆದ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
  ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರ ಪಟ್ಟಿಯಲ್ಲಿ, ಹಿಂದುಳಿದ ಜನಾಂಗ, ಮಹಿಳೆಯರು ಹಾಗು ಮಕ್ಕಳ ನಂತರ ಪ್ರಾಣಿಗಳು ಸೇರುತ್ತವೆ. ಇದು ಸಾಹಿತ್ಯ ಕ್ಷೇತ್ರಕ್ಕೂ ಸತ್ಯ. ಮೂಕ ಪ್ರಾಣಿಗಳಿಗೆ ದನಿ ಇಲ್ಲ. ಅವು ತಮ್ಮ ಸಂಕಟ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವುಗಳ ಪರವಾಗಿ ಹೇಳುವುದು ಅತ್ಯಂತ ಶ್ರೇಷ್ಠವಾದದ್ದು.
 ಪಶುವೈದ್ಯ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಭಾವನಾತ್ಮಕ ಹಿನ್ನೆಲೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದೆ ಆದಲ್ಲಿ ಅದು ಅತ್ಯುತ್ತಮ ಸಾಹಿತ್ಯವೆನಿಸಿಕೊಳ್ಳುತ್ತದೆ ಎಂದು ಹೇಳಿದರು.
 ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಜಿ.ಪಿ. ಬಸವರಾಜು ಮಾತನಾಡಿ, ಸಾಹಿತ್ಯ ರಚನೆಯಲ್ಲಿ ಪಶುವೈದ್ಯನಿಗೆ ಇರುವ ಅವಕಾಶಗಳು ಜಗತ್ತಿನಲ್ಲಿ ಯಾರಿಗೂ ಇಲ್ಲ. ಅವನ ಕರ್ಮಭೂಮಿ ಹಳ್ಳಿಗಳು. ಇಲ್ಲಿ ಎಲ್ಲವೂ ಇದೆ.
  ತಾನು ಚಿಕಿತ್ಸೆ ಮಾಡುವ ಸಾಕುಪ್ರಾಣಿಗಳು ಮತ್ತು ಇತರೆ ಪ್ರಾಣಿ ಪಕ್ಷಿಗಳು, ಕೃಷಿ ಬದುಕು, ರೈತ ಸಮುದಾಯ ಮತ್ತು ಅವನ ಕುಟುಂಬ, ಮಹಿಳೆಯರು, ದಲಿತರು, ಜಾತಿ ವ್ಯವಸ್ಥೆ, ಪರಿಸರದ ಬದಲಾವಣೆಗಳು, ರಾಜಕೀಯ, ಇತ್ಯಾದಿಗಳು ಲಭ್ಯ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಬರೆಯಲು ಪ್ರಾರಂಭಿಸಿದರೆ ದೊಡ್ಡ ಸಾಹಿತ್ಯ ಭಂಡಾರವೇ ನಿರ್ಮಿಸಲು ಸಾಧ್ಯವೆಂದು ನುಡಿದರು.
  ಕಾರ್ಯಗಾರದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಹಾಗೂ ಉತ್ತಮ ಪಶುವೈದ್ಯಕೀಯ ಸಾಹಿತ್ಯ ರಚನೆಗೆ ವಸ್ತುವಾಗಬಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
 ಅಧ್ಯಕ್ಷತೆ  ವಹಿಸಿದ್ದ ಕನ್ನಡ ಪಶುವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ಟಿ. ಎಸ್. ರಮಾನಂದ ಮಾತನಾಡಿ, ಪಶುವೈದ್ಯ ತನ್ನ ವೃತ್ತಿ ಬದುಕಿನ ಮಧ್ಯೆಯೂ ಒಂದಿಷ್ಟು ಸಮಯ ಮಾಡಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರೆ ಸಮಾಜಕ್ಕೂ ಲಾಭ ಎಂದು ತಿಳಿಸಿದರು.
 ಮಹಾವಿದ್ಯಾಲಯ ಪ್ರಭಾರ ಡೀನ್  ಡಾ. ಆರ್. ಡಿ. ಪಡಲ್ಕರ್, ಪಶುವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ. ಟಿ. ಎಚ್. ನಟರಾಜ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಮಂಜುನಾಥ  ಸ್ವಾಗತಿಸಿದರು. ಗೀತ ಪ್ರಾರ್ಥಿಸಿದರು.  ಡಾ. ತಿಮ್ಮಪ್ಪ  ವಂದಿಸಿದರು. ಡಾ. ಕೆ. ಎಂ. ನಾಗರಾಜ್ ನಿರೂಪಿಸಿದರು.
 ಸಾಹಿತ್ಯ ರಚನೆಯಲ್ಲಿ ಪಶುವೈದ್ಯನಿಗೆ ಇರುವ ಅವಕಾಶ ಜಗತ್ತಿನಲ್ಲಿ ಯಾರಿಗೂ ಇಲ್ಲ. ಅವನ ಕರ್ಮಭೂಮಿ ಹಳ್ಳಿಗಳು. ಇಲ್ಲಿ ಎಲ್ಲವೂ ಇದೆ      

  - ಜಿ.ಪಿ. ಬಸವರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.