ಬೀಗರ ಔತಣಕ್ಕೆ ಅನುಮತಿ ನಕಾರ ತಹಸೀಲ್ದಾರ್ ಕ್ರಮ ಪ್ರಶ್ನಿಸಿ ಹೈ ಮೊರೆ
ಕ.ಪ್ರ.ವಾರ್ತೆ , ಬೆಂಗಳೂರು , ಏ.17
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೀಗರ ಔತಣಕ್ಕೆ ಅನುಮತಿ ನಿರಾಕರಿಸಿದ ತಹಸೀಲ್ದಾರ್ ಕ್ರಮ ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ವಿವಾಹದ ನಂತರ ಬೀಗರ ಔತಣಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಹಾಸನ ಜಿಲ್ಲೆಯ ಅರಸೀಕೆರೆಯ ರಂಗನಾಥ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ತಮಗೆ ರೇಖಾ ಎಂಬ ಯುವತಿಯೊಂದಿಗೆ ಏಪ್ರಿಲ್ 28ರಂದು ವಿವಾಹ ನಿಶ್ಚಯವಾಗಿದೆ. ಅದರ ಮರುದಿನದ ಬೀಗರ ಔತಣಕ್ಕೆ ಅನುಮತಿ ನೀಡುವಂತೆ ಕಳೆದ ಏಪ್ರಿಲ್ 4ರಂದು ರೇಖಾ ಅವರ ತಂದೆ ತಹಸೀಲ್ದಾರ್ ಬಳಿ ಅನುಮತಿ ಕೋರಿದ್ದಾರೆ. ಆದರೆ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಮಗೆ ಅನುಮತಿ ನಿರಾಕರಿಸಲಾಗಿದೆ.
ಇದು ಖಾಸಗಿ ಸಮಾರಂಭವಾಗಿದ್ದು, ಇದರಲ್ಲಿ ಯಾವುದೇ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಭಾಗವಹಿಸುತ್ತಿಲ್ಲ. ತಾವು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಔತಣಕೂಟ ನಡೆಸಲಿದ್ದೇವೆ.
ಇದಕ್ಕೂ ನೀತಿ ಸಂಹಿತೆಗೂ ಯಾವುದೇ ಸಂಬಂಧವಿಲ್ಲ. ಬೀಗರ ಔತಣ ವಿವಾಹ ಮಹೋತ್ಸವದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ನೆರವೇರಿಸಲು ನಿರ್ಬಂಧ ಹೇರಿರುವುದು ಸರಿಯಲ್ಲ. ಇದರಿಂದ ತಮಗೆ ಅನ್ಯಾಯವಾಗುತ್ತಿದೆ. ಈಗಾಗಲೇ ಔತಣಕೂಟಕ್ಕಾಗಿ ಸಂಪೂರ್ಣ ತಯಾರಿ ನಡೆದಿದ್ದು, ಅದಕ್ಕೆ ಅಡ್ಡಿಪಡಿಸುವುದರಿಂದ ತಮಗೆ ನಷ್ಟವುಂಟಾಗುತ್ತದೆ. ಆದ್ದರಿಂದ ತಮಗೆ ಔತಣಕೂಟ ನಡೆಸಲು ಅನುಮತಿ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

