ಸೂಕ್ತ ಸ್ಥಾನಮಾನ; ಗೌಡರ ವಾಗ್ದಾನ
ಕ.ಪ್ರ. ವಾರ್ತೆ ಬೇಲೂರು ಏ.19
ಈ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ಥಳೀಯ ಮುಖಂಡರ ನಡುವೆ ಉಂಟಾಗಿದ್ದ ಮನಸ್ತಾಪ ನಿವಾರಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶುಕ್ರವಾರ ಯಶಸ್ವಿಯಾದರು.
ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದ ಬಿ.ಸಿ. ಮಂಜುನಾಥ್ ಅವರ ನಿವಾಸಕ್ಕೆ ತೆರಳಿದ ಗೌಡರು, ಸುಮಾರು 30 ನಿಮಿಷಗಳವರೆಗೆ ಮಂಜುನಾಥ್ ಅವರ ಪತ್ನಿ ಜಿಪಂ ಸದಸ್ಯೆ ಹೇಮಾವತಿ ಮಂಜುನಾಥ್ ಅವರೊಡನೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗೌಡರು, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಸೂಕ್ತ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರಚಾರ ಸಭೆ ವೇದಿಕೆಗೆ ಮಂಜುನಾಥ್ ಅವರನ್ನು ಕರೆತಂದ ಗೌಡರು, ತಮ್ಮ ಪಕ್ಕದಲ್ಲೇ ನಿಲ್ಲಿಸಿಕೊಂಡು ಭಾಷಣ ಮಾಡಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ್, ಜೆಡಿಎಸ್ ತಾಯಿ ಇದ್ದಂತೆ, ಅದಕ್ಕೆ ಮೋಸ ಮಾಡುವುದಿಲ್ಲ. ಟಿಕೆಟ್ ಸಿಗದ ಕಾರಣ ಅಸಮಾಧಾನವಾಗಿತ್ತು. ಗೌಡರು, ತಮಗೆ ಸಾಂತ್ವನ ಹೇಳಿದ ನಂತರ ಮನಸು ಹಗುರವಾಗಿದೆ. ಮುಂದೆ ಪಕ್ಷದ ಅಭ್ಯರ್ಥಿ ಲಿಂಗೇಶ್ ಅವರ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ದೇವೇಗೌಡರು, ರೇವಣ್ಣರಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಹೇಳಿದರು.
ಅಭ್ಯರ್ಥಿ ಕೆ.ಎಂ. ಲಿಂಗೇಶ್ ಅವರು ಮಾತನಾಡಿ, ಪರಿಸ್ಥಿತಿಗೆ ಅನುಗುಣವಾಗಿ ಜೆಡಿಎಸ್ ನನಗೆ ಟಿಕೆಟ್ ನೀಡಿದೆ. ನಾನು ಗೆದ್ದರೂ ಮಂಜುನಾಥ್ ಗೆದ್ದಂತೆ, ಜಾತ್ಯತೀತವಾಗಿ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.
ಭರವಸೆ: ಪುರಸಭಾ ಮಾಜಿ ಅಧ್ಯಕ್ಷ ಬಿ.ಸಿ. ಮಂಜುನಾಥ್ ಅವರಿಗೆ ಪಕ್ಷ ಮುಂದಿನ ದಿನಗಳಲ್ಲಿ ಸೂಕ್ತವಾದ ಅಧಿಕಾರ ನೀಡಿ ಉನ್ನತ ಸ್ಥಾನ ಕಲ್ಪಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ವಿಧಾನಸಭೆ ಚುನಾವಣೆಯ ಜೆಡಿಎಸ್ ಟಿಕೆಟ್ ವಂಚಿತರಾಗಿರುವ ಬಿ.ಸಿ. ಮಂಜನಾಥ್ ಅವರ ನಿವಾಸದಲ್ಲಿ ಸುಮಾರು ಅರ್ಧ ಗಂಟೆ ಗುಪ್ತ ಸಮಾಲೋಚನೆ ನಡೆಸಿದರು. ಬಿ.ಸಿ.ಮಂಜುನಾಥ್ ಅವರ ನಿವಾಸಕ್ಕೆ ದೇವೇಗೌಡರು ಬರುವ ವಿಷಯವನ್ನು ಮೊದಲೇ ತಿಳಿದಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರು ಸಾಕಷ್ಟು ಮಂದಿ ಜಮಾಯಿಸಿದ್ದರು. ಕೊಠಡಿಯೊಂದರಲ್ಲಿ ಚರ್ಚೆ ನಡೆಸಿದ ಬಳಿಕ ಹೊರಬಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಿ.ಸಿ. ಮಂಜುನಾಥ್ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವೇಗೌಡರು ಸುದ್ದಿಗಾರರೊಂದಿಗೆ, ಬಿ.ಸಿ.ಮಂಜುನಾಥ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿರುವ ಬಗ್ಗೆ ತಮಗೂ ಬೇಸರವಿದೆ. ಆದರೆ ರಾಜಕೀಯ ಲೆಕ್ಕಾಚಾರದ ಮೇಲೆ ಲಿಂಗೇಶ್ ಅವರಿಗೆ ನೀಡಲಾಗಿದೆಯೇ ಹೊರತು ಇದರಲ್ಲಿ ಯಾರ ಕೈವಾಡ ಅಥವಾ ಪ್ರಭಾವವಿಲ್ಲ. ತೊ.ಚ ಅನಂತಸುಬ್ಬರಾಯರಿಗೆ ಬಿ.ಫಾರಂ ಅನ್ನು ಹಸ್ತಾಂತರ ಮಾಡಲಾಗಿದೆಯೇ ಹೊರತು ಅವರು ಯಾವುದೇ ಚರ್ಚೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ತಾವು ಯಾವುದೇ ವರ್ಗಕ್ಕೂ ಮೋಸ ಮಾಡಿಲ್ಲ. ಎಲ್ಲರಿಗೂ ಎಂಎಲ್‌ಸಿ, ಎಂಎಲ್‌ಎ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದರೆ ಏನು ಮಾಡಲು ಸಾಧ್ಯ? ಕುರುಬ ಸಮಾಜದ ಬಿ.ಸಿ.ಮಂಜುನಾಥ್ ಅವರು ಈ ಚುನಾವಣೆಯಲ್ಲಿ ಲಿಂಗೇಶ್ ಅವರೊಂದಿಗೆ ಕೈ ಜೋಡಿಸಿ ಪಕ್ಷ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಲಿಂಗೇಶ್ ಕೂಡ ಬಿ.ಸಿ ಮಂಜುನಾಥ್ ಅವರನ್ನು ಕಡೆಗಣಿಸಿದೆ ಅವರೊಟ್ಟಿಗೆ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

