ಕಾಡಾನೆಗಳ ಸಮಸ್ಯೆಗೆ ಕಾಣದ ಪರಿಹಾರ
ಕ.ಪ್ರ. ವಾರ್ತೆ ಆಲೂರು ಏ. 20
ತಾಲೂಕಿನ ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿಗಳಲ್ಲಿ ಕಳೆದ 20 ವರ್ಷಗಳಿಂದ ಸಾರ್ವಜನಿಕರು ಹಾಗೂ ಕಾಡಾನೆಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಿದ್ದು, ಕಾಡಾನೆಗಳ ಹಾವಳಿಯಿಂದಾಗಿ ಈ 13 ವರ್ಷಗಳಲ್ಲಿ 31 ಜನ ಮೃತಪಟ್ಟಿದ್ದು, 17 ಕಾಡಾನೆಗಳು ಸಹ ಮೃತಪಟ್ಟಿವೆ. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದ್ದು, ಜನತೆ ಶಾಶ್ವತ ಪರಿಹಾರ ಕಾಣದೆ ಕಷ್ಟದಿಂದ ನಿತ್ಯದ ಜೀವನ ಸಾಗಿಸುತ್ತಿದ್ದಾರೆ.
ಗೊರೂರು ಗ್ರಾಮದಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ ಜಲಾಶಯದ ನೀರು ಸಂಗ್ರಹವಾಗುವ ಸ್ಥಳದಲ್ಲಿದ್ದ ಕಾಡು ನಾಶಗೊಂಡು ಸಂಪೂರ್ಣ ಪ್ರದೇಶ ನೀರಿನಿಂದ ಆವೃತ್ತವಾಯಿತು.
ಈ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಹೇರಳವಾಗಿ ಬೆಳೆದಿದ್ದ ಆನೆಗಳಿಗೆ ಪ್ರಿಯವಾದ ಬಿದಿರಿನ ಬೆಳೆ ಸಂಪೂರ್ಣ ನಾಶಗೊಂಡ ಪರಿಣಾಮ ಆನೆಗಳು ಆಹಾರವನ್ನರಸಿ ಕುಂದೂರು, ಹೊಸಪೇಟೆ, ಪಾಳ್ಯ ಹೋಬಳಿಗಳ 72ಕ್ಕೂ ಹೆಚ್ಚು ಗ್ರಾಮಗಳು ಕಾಡಾನೆಗಳ ಹಾವಳಿಗೆ ತುತ್ತಾಗಿ ಇಲ್ಲಿನ ಜನತೆ ತತ್ತರ ಗೊಳ್ಳುವಂತಾಯಿತು.
ಜಲಾಶಯ ನಿರ್ಮಾಣಕ್ಕಾಗಿ: ಈ ಭಾಗಗಳಲ್ಲಿ ಹೆಚ್ಚಾಗಿ ಎಚ್ಆರ್ಪಿಯ ಪುನರ್ವಸತಿ ಗ್ರಾಮಗಳೇ ಇದ್ದು, ಜಲಾಶಯ ನಿರ್ಮಾಣಕ್ಕಾಗಿ ಹುಟ್ಟಿ ಬೆಳೆದ ಗ್ರಾಮಗಳನ್ನು ತೊರೆದು ತಮಗೆ ಯಾವುದೇ ಪ್ರಯೋಜನವಿಲ್ಲದಿದ್ದರೂ ವಿಧಿ ಇಲ್ಲದೆ ಸರ್ಕಾರ ನೀಡಿದ ಹಾಗೂ ವಾಸಿಸಲು ಯೋಗ್ಯವಲ್ಲದ ಸ್ಥಳಗಳಿಗೆ ಬಂದು ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದ ಸಂದರ್ಭದಲ್ಲಿ ಕಾಡಾನೆಗಳ ಹಾವಳಿ ಎಂಬ ಗಂಡಾಂತರ ಬಂದೊದಗಿತು.
ಈ ಭಾಗದಲ್ಲಿನ ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ರಾಜ್ಯ, ಕೇಂದ್ರ ಸರ್ಕಾರಗಳೆರಡು ಈ ಭಾಗ ನಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು, ಈ ಸಂಬಂಧವಾಗಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಾಗ ಬಂದು ಕಣ್ಣೊರೆಸುವ ನಾಟಕವಾಡುವ ಜನಪ್ರತಿನಿಧಿಗಳ ಅಧಿಕಾರಿಗಳು ನಂತರ ಇತ್ತ ತಿರುಗಿ ನೋಡುತ್ತಿಲ್ಲ.
ಕಾಡಾನೆ ದಾಳಿಗೆ ಸಿಲುಕಿ ಯಾರಾದರೂ ಮೃತಪಟ್ಟಾಗ ಅಥವಾ ಅಪಾರ ಬೆಳೆ ಹಾನಿಯಾದಾಗ ಅಲ್ಪಸ್ವಲ್ಪ ಪರಿಹಾರ ನೀಡುವ ಸರ್ಕಾರದವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವುದನ್ನು ಬಿಟ್ಟು ನಾಮಕಾವಸ್ಥೆಗೆ ಒಂದೆರಡು ಆನೆಗಳನ್ನು ಹಿಡಿದು ಪಕ್ಕದ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದರು. ಆದರೆ ಆನೆಗಳು ಅಲ್ಲಿಂದ ಇಲ್ಲಿಗೇ ವಾಪಸ್ಸಾಗುತ್ತಿವೆ.
ಇಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸಲು ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸಲು ಅನುಮತಿ ನೀಡಿತು.
ಡೋಂಗಿ ಪ್ರಾಣಿ ದಯಾಸಂಘದವರು: ಆದರೆ ಈ ಪ್ರದೇಶದಲ್ಲಿ ಕುಳಿತು ಪ್ರಚಾರಕ್ಕಾಗಿ ನಾಟಕವಾಡುವ ಕೆಲವು ಡೋಂಗಿ ಪ್ರಾಣಿ ದಯಾಸಂಘದವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಪರಿಣಾಮ ಈ ಕಾರ್ಯ ಸ್ಥಗಿತಗೊಂಡಿದೆ. ಪ್ರತಿಭಟನೆಗಳು ತೀವ್ರಗೊಂಡಾಗ ಖುದ್ದು ಉಚ್ಛ ನ್ಯಾಯಾಲಯವೇ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚಿಸಿ ಜಿಲ್ಲೆಯಾದ್ಯಂತ ಕಾಡಾನೆ ಹಾವಳಿಗೆ ತುತ್ತಾಗಿ ಹಾನಿಗೊಳಗಾಗುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿತ್ತು.
ಟಾಸ್ಕ್ ಫೋರ್ಸ್ ಕಮಿಟಿಯವರು 2012ರ ಮಾ. 4 ರಿಂದ 2012ರ ಮಾ. 6 ರವರೆಗೂ ಈ ಭಾಗದಲ್ಲಿ ಸಂಚರಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವರದಿ ನೀಡಿತ್ತು. ಆದರೆ ಈವರೆಗೂ ನ್ಯಾಯಾಲಯದಿಂದ ಯಾವ ಆದೇಶ ಹೊರ ಬಿತ್ತೆಂಬುದು ಈ ಭಾಗದ ಜನರಿಗೆ ಇನ್ನೂ ತಿಳಿದಿಲ್ಲ.
ಆನೆಗಳ ಹಾವಳಿಯಂತೂ ವಿಪರೀತವಾಗಿದ್ದು, ಆಲೂರು, ಸಕಲೇಶಪುರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾಗೂ ಮಾನವನ ನಡುವೆ ಸಂಘರ್ಷ ನಿರಂತರವಾಗಿ ಮುಂದುವರಿದಿದೆ.
ಈ ಭಾಗದ ಹೆಚ್ಚಿನ ಸಂಖ್ಯೆಯ ಜನ ಈಗಾಗಲೇ ಗುಳೇ ಹೋಗಿ ಕೂಲಿ ನಾಲಿ ಮಾಡುವಂತಾಗಿದ್ದು, ಕಾಫಿ ಬೆಳೆಗಾರರು ಕಾರ್ಮಿಕರಿಲ್ಲದೆ ತೋಟಗಳನ್ನು ಹಾಳು ಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

