ಕೋಳಗುಂದದಲ್ಲಿ ನೀರಿಗೆ ಹಾಹಾಕಾರ
ಜಾವಗಲ್: ಜಾವಗಲ್ ಹೋಬಳಿ ಕೋಳಗುಂದದಲ್ಲಿ ಅಂತರ್ಜಲ ಬತ್ತಿ ಹೋಗಿರುವುದರಿಂದ ನೀರಿಗೆ ಹಾಹಾಕಾರ ಉಂಟಾಗಿದ್ದು, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಗಮನ ಹರಿಸಿರುವುದಿಲ್ಲ. ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ನಡೆಯುತ್ತಿದ್ದು, ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹ ಪಡಿಸಿದ್ದಾರೆ.
ಬನಶಂಕರಿದೇವಿ ರಥೋತ್ಸವ
ಜಾವಗಲ್: ಕೋಳಗುಂದ ಗ್ರಾಮದಲ್ಲಿ ಏ. 23 ರವರೆಗೆ ಬನಶಂಕರಿ ದೇವಿ ರಥೋತ್ಸವ ನಡೆಯುವುದು. ಅದರ ಅಂಗವಾಗಿ ನಾನಾ ಉತ್ಸವಗಳು ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಾಲಯ ಭಕ್ತ ಮಂಡಲಿ ಮನವಿ ಮಾಡಿದೆ.
ಸ್ವಚ್ಛ ಆಡಳಿತಕ್ಕೆ ಜೆಡಿಯುಗೆ ಮತ ನೀಡಿ: ಅರುಣ್
ಹೊಳೆನರಸೀಪುರ: ರಾಜ್ಯದಲ್ಲಿ ಸ್ವಚ್ಚ ಆಡಳಿತ ನೀಡಲು ಅವಕಾಶ ನೀಡುವ ಆಶಾಭಾವನೆ ಹೊಂದಿರುವುದಾಗಿ ರಾಷ್ಟ್ರೀಯ ಜೆಡಿಯು ಮುಖಂಡ ಹಾಗೂ ದಕ್ಷಿಣ ರಾಜ್ಯದ ಚುನಾವಣೆ ಉಸ್ತುವಾರಿ ಮುಖಂಡ ಅರುಣಕುಮಾರ್ ಶ್ರೀವಾಸ್ತವ್ ತಿಳಿಸಿದರು. ಇತ್ತೀಚೆಗೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ರೀತಿಯಲ್ಲಿನ ಕಳಂಕರಹಿತ ಆಡಳಿತ ಇಡೀ ದೇಶದಲ್ಲಿ ಬರಬೇಕೆಂಬ ಉದ್ದೇಶದಿಂದ ರಾಜ್ಯದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಉಮೇದುವಾರರನ್ನು ಕಣಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ರಾಜ್ಯವನ್ನು ಆಳಿದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ಭಾರಿ ಭ್ರಷ್ಟಾಚಾರವನ್ನು ಎಸಗಿ ಜನರಿಂದ ದೂರ ಸರಿದಿವೆ. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಜೆಡಿಯು ಪಕ್ಷಕ್ಕೆ ಮತ ನೀಡಿ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಜನತೆ ಆಶೀರ್ವಾದ ಮಾಡಬೇಕೆಂದು ಅವರು ಮತದಾರರಲ್ಲಿ ಕೋರಿದರು. ರಾಜ್ಯದ ಜನತೆ ಜೆಡಿಯು ಪಕ್ಷದ ಬಾಣದ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಅರುಣ್ಕುಮಾರ್ ಶ್ರೀವಾಸ್ತವ್ ಅವರೊಂದಿಗೆ ಮಾಜಿ ಶಾಸಕ ಧರ್ಮಪ್ಪ, ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾ ಜೆಡಿಯು ಅಧ್ಯಕ್ಷ ಡಿ.ಎಚ್.ಸತೀಶ್, ತಾಲೂಕು ಜೆಡಿಯು ಅಧ್ಯಕ್ಷ ಮಳಲಿ ನಾರಾಯಣ್ ಸೇರಿದಂತೆ ಬಹಳಷ್ಟು ಮುಖಂಡರು, ಕಾರ್ಯಕರ್ತರು ಇದ್ದರು.
ಕುರುಬ ಸಮಾಜಕ್ಕೆ ಅಪಮಾನ: ಆರೋಪ
ಬೇಲೂರು: ಬೇಲೂರು ವಿಧಾನಸಭೆ ಕ್ಷೇತ್ರಕ್ಕೆ ಜೆಡಿಎಸ್ನಿಂದ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್ಗೆ ಟಿಕೆಟ್ ನೀಡದೆ ಕುರುಬ ಸಮಾಜಕ್ಕೆ ಅಪಮಾನ ಮಾಡಲಾಗಿದೆ ಎಂದು ಜಿಲ್ಲಾ ಕುರುಬ ಸಮಾಜದ ನಿರ್ದೇಶಕ ಬೀರೇಗೌಡ ಆಪಾದಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳಿಂದ ಬೇಲೂರು ವಿಧಾನ ಸಭೆ ಕ್ಷೇತ್ರದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್ಗೆ ಟಿಕೆಟ್ ನೀಡುತ್ತೇವೆ ಎಂದು ಅಶ್ವಾಸನೆ ನೀಡುತ್ತಿದ್ದ ಜೆ.ಡಿ.ಎಸ್. ನಾಯಕರು ಏಕಾಏಕಿ ವಂಚಿಸಿದ್ದಾರೆ ಎಂದು ಅಪಾದಿಸಿದರು. ಇದು ಇಡೀ ಸಮಾಜಕ್ಕೆ ಮಾಡಿರುವ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕುರುಬ ಸಮಾಜದ ಸಹಕಾರ್ಯದರ್ಶಿ ವೀರಣ್ಣ ಮಾತನಾಡಿ ಬಿ.ಸಿ.ಮಂಜುನಾಥ್ಗೆ ಟಿಕೆಟ್ ತಪ್ಪಿಸಲು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತಸುಬ್ಬಾಯರೆ ಕಾರಣವಾಗಿದ್ದು ಹಿಂದುಳಿದ ವರ್ಗಗಳ ಏಳಿಗೆ ಸಹಿಸದ ಇವರು ಪಿತೂರಿ ನೆಡೆಸಿ ಟಿಕೆಟ್ ಸಿಗದ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದರು. ತಾಲೂಕಿನಲ್ಲಿ 23 ಸಾವಿರ ಕುರುಬ ಸಮಾಜದ ಮತದಾರರಿದ್ದು ಇದನ್ನು ಗಮನಿಸದೆ ವರಿಷ್ಠರಿಗೆ ಈ ಸಮಾಜದ ಮತಗಳು ಕೇವಲ ಎಂಟು ಸಾವಿರ ಎಂದು ತಪ್ಪು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಟಿಕೆಟ್ ಸಿಗದ ಹಾಗೆ ಮಾಡಿದ್ದು ಇವರ ಈ ನಡತೆಯನ್ನು ಕುರುಬ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಮೋಹನ್ಕುಮಾರ್, ಜಯರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

