ಹಾಸನ

ಅರಸೀಕೆರೆಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶಾಸಕರ ಭರವಸೆ

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ಆ. 6
ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಿಸಲು ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರು. ನೀಡುವುದರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಸಂಸದರ ನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರ ನಿಧಿಯಿಂದ ಹಣ ದೊರಕಿಸಿ ಕೊಡುವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.
  ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ  ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,  ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುವ ಪತ್ರಕರ್ತರಿಗೆ ಪತ್ರಿಕಾ ಭವನದ ಅವಶ್ಯಕತೆ ಇದೆ. ಅದನ್ನು ಪೂರೈಸಲು ತಾವು ಕಂಕಣಬದ್ಧರಾಗಿದ್ದು ಪುರಸಭೆಯಿಂದ ನಿವೇಶನ ಪಡೆದು ಉತ್ತಮವಾದ ಭವನ ನಿರ್ಮಾಣ ಮಾಡಿ ಮುಂದಿನ ವರ್ಷ ಪತ್ರಿಕಾ ದಿನಾಚರಣೆಯನ್ನು ಅಲ್ಲಿಯೇ ಆಚರಿಸೋಣ ಎಂದು ಹೇಳಿದರು.
 ಪತ್ರಕರ್ತರಿಗೆ ಸರ್ಕಾರ ಅಗತ್ಯ ಸೌಲಭ್ಯದೊಂದಿಗೆ ರಕ್ಷಣೆ, ನೀಡ ಮಾಡಬೇಕು. ಇತ್ತೀಚಿನ ದಿನಗಳಲ್ಲಿ  ಮಾಧ್ಯಮ ಜಗತ್ತು ವಿಸ್ತೃತವಾಗಿ ಬೆಳೆಯುತ್ತಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಣನೀಯವಾಗಿ ಬದಲಾವಣೆ ಆಗುತ್ತಿಲ್ಲ. ಸಂವಿಧಾನದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಬಗ್ಗೆ ನಿಗಾ ಇಡುವ ಜವಾಬ್ದಾರಿ ಪತ್ರಿಕಾ ರಂಗಕ್ಕಿದೆ ಎಂದು ಹೇಳಿದರು.
  ಸಾಹಿತಿ ಡಿ.ಎಸ್.ರಾಮಸ್ವಾಮಿ ಉಪನ್ಯಾಸ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷೆ ಲೀಲಾವತಿ ಮಾತನಾಡಿ ಸರ್ಕಾರಗಳು ಈವರೆಗೆ ಪತ್ರಕರ್ತರ ನೋವು ನಲಿವುಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ.
 ಪತ್ರಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಎಲ್ಲ ಸಮಸ್ಯೆಗಳ ಪರಿಹಾರ ಸಾಧ್ಯ.  ಪತ್ರಿಕಾ ಅಕಾಡೆಮಿಯಾಗಲಿ, ಸಂಪಾದಕರ ಮಂಡಳಿಯಾಗಲಿ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.
 ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಉದಯಕುಮಾರ್, ತಹಶೀಲ್ದಾರ್ ಕೇಶವಮೂರ್ತಿ, ತಾಪಂ ಅಧ್ಯಕ್ಷ ಶಿವಮೂರ್ತಿ ಇದ್ದರು. ತಾ.ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ದಿನಾಚರಣೆ ಪ್ರಯುಕ್ತ ನಡೆದ  ಕ್ರೀಡೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.