ಪರವಾನಗಿ ಇಲ್ಲದೆ ಯಾವುದೇ ವಾಹನ ಚಾಲನೆ ಅಪರಾಧ: ಸಿಪಿಐ ಗಂಗಾಧರಪ್ಪ
ಕ.ಪ್ರ ವಾರ್ತೆ ಅರಸೀಕೆರೆ ಆ.6
ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು, ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿದ್ದು ಒಂದು ವೇಳೆ ಅಪಘಾತವಾದರೆ ಅದರಿಂದ ನೀವು ಬಹಳಷ್ಟು ಕಷ್ಟ ನಷ್ಟ ಅನುಭವಿಸ ಬೇಕಾಗುತ್ತಿದ್ದರಿಂದ 18 ವರ್ಷ ತುಂಬಿದ ಯುವಕ ಯುವತಿಯರು ವಾಹನ ಚಾಲನೆಗೆ ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳುವುದು ಅಗತ್ಯವಿದೆ ಎಂದು ಗ್ರಾಮಾಂತರ ಠಾಣೆ ಸಿಪಿಐ ಗಂಗಾಧರಪ್ಪ ತಿಳಿಸಿದರು.
ಪಟ್ಟಣದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮಾಂತರ ಹಾಗೂ ನಗರ ಠಾಣೆಯ ಆಶ್ರಯದಲ್ಲಿ ಏರ್ಪಡಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಕಾನೂನಿಗೆ ಮನ್ನಣೆ ನೀಡಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಈ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ ಇನ್ನಿತರೆ ವಾಹನಗಳ ಚಾಲನೆಗೆ ಲೈಸೆನ್ಸ್ ಪಡೆದು ಚಾಲನೆ ಮಾಡಿದರೆ ಮಾತ್ರ ಕಾನೂನಿನ ನೆರವು ಪಡೆಯಲು ಸಾಧ್ಯ. ಇಲ್ಲದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಅಪಘಾತಗಳು ಸಂಭವಿಸಿದರೆ ಯಾವುದೇ ರೀತಿಯ ಪರಿಹಾರ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ನಾಗರಿಕರೂ ಈ ಬಗ್ಗೆ ಗಮನ ಹರಿಸಬೇಕು. ಶಿರಧಾರಣ ಧರಿಸುವುದರಿಂದ ಅಪಘಾತಗಳ ಸಂದರ್ಭದಲ್ಲಿ ಜೀವಹಾನಿಯಾಗದಂತೆ ರಕ್ಷಿಸಿಕೊಳ್ಳಬಹುದು. ಇದರ ಜೊತೆಗೆ ಸಂಚಾರಿ ನಿಯಮಗಳ ಪಾಲನೆಯು ವಿದ್ಯಾರ್ಥಿ ದೆಸೆಯಿಂದಲೇ ಆರಂಭಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಕಳ್ಳತನ, ಧರೋಡೆ, ರ್ಯಾಗಿಂಗ್, ಮೋಸ, ವಂಚನೆಯಂತಹ ಪ್ರಕರಣಗಳಲ್ಲಿ ಒಮ್ಮೆ ಸಿಲುಕಿಕೊಂಡರೆ ಹೊರಬರುವುದು ಅಸಾಧ್ಯ. ಅಂತಹ ದುಶ್ಚಟಗಳಿಗೆ ಬಲಿಯಾಗಬಾರದು. ಪೊಲೀಸರಿಗೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು
ಕಾಲೇಜು ಆವರಣದಲ್ಲಿ ಮೊಬೈಲಲ್ಬಳಕೆ ಕೂಡ ನಿಷಿದ್ಧ. ಓದಿನ ವೇಳೆಯಲ್ಲಿ ಅನ್ಯ ಚಟುವಟಿಕೆಗಳಿಗೆ ಅವಕಾಶ ನೀಡದೆ ಪೋಷಕರಿಗೆ ಗುರು ಹಿರಿಯರಿಗೆ ಗೌರವ ತರುವಂತೆ ನಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿ, ಹಗಲು ರಾತ್ರಿಯೆನ್ನದೆ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುತ್ತಿರುವ ಸೈನಿಕರು ಹಾಗೂ ನಾಡಿನ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿರುವುದರಿಂದ ನಾವು ನೀವುಗಳು ಶಾಂತಿ ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಇಲಾಖೆ ಕಾರ್ಯವನ್ನು ಶ್ಲಾಘಿಸಿದರು. ಎಎಸ್ಐ ಗಂಗಾಧರ್ನಾಯ್ಕ್, ನಾಗರಾಜ್, ರವಿ, ಮಂಜುನಾಥ್ ಇನ್ನೂ ಮೊದಲಾದವರು ಈ ಸಂದರ್ಭದಲ್ಲಿಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

