ಹಳ್ಳಿಮೈಸೂರು ಆರೋಗ್ಯ ಕೇಂದ್ರ ಮುಂದೆ ಕರವೇಯಿಂದ ಪ್ರತಿಭಟನೆ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.7
ತಾಲೂಕಿನ ಹಳ್ಳಿಮೈಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಕೊರತೆ ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ವತಿಯಿಂದ ಮಂಗಳವಾರ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಕರವೇ ಘಟಕದ ತಾಲೂಕು ಅಧ್ಯಕ್ಷ ಕೆರಗೋಡು ಮಹೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಳ್ಳಿಮೈಸೂರು ಗ್ರಾಮಸ್ಥರೂ ಪಾಲ್ಗೊಂಡು ಸಹಕಾರ ನೀಡಿದರಲ್ಲದೇ, ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವೈದ್ಯರ ಅವಶ್ಯಕತೆ ಇದ್ದರೂ, ಕೇವಲ ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅದರಲ್ಲಿಯೂ ಇರುವ ಒಬ್ಬರೇ ವೈದ್ಯರೂ ಸರಿಯಾದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷ್ಯ ವಹಿಸುವುದಾಗಿ ಆರೋಪಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಒಬ್ಬರೇ ವೈದ್ಯರು ದೂರದ ಊರಿನಿಂದ ನಿತ್ಯವೂ ಪ್ರಯಾಣ ಮಾಡುತ್ತಿರುವ ಕಾರಣದಿಂದಾಗಿ ರಾತ್ರಿಯ ವೇಳೆ ಆಸ್ಪತ್ರೆಯಲ್ಲಿ ಯಾವುದೇ ಸೇವೆ ಲಭ್ಯವಿಲ್ಲದೇ, ಸಾರ್ವಜನಿಕರು ತುರ್ತು ಆರೋಗ್ಯ ಸೇವೆಗೆ ತಾಲೂಕು ಕೇಂದ್ರದಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ ಎಂದು ಪ್ರತಿಭಟನಾಕಾರರು ದೂರಿದರು.
ಅಲ್ಲದೇ ಇಲ್ಲಿನ ಆಸ್ಪತ್ರೆಯಲ್ಲಿನ ಆ್ಯಂಬುಲೆನ್ಸ್ ಅನ್ನು ಬೇರೆಡೆಗೆ ನೀಡಿರುವ ಕಾರಣದಿಂದಾಗಿ ಹಳ್ಳಿಮೈಸೂರು ಹೋಬಳಿಯಲ್ಲಿನ ಜನಸಾಮಾನ್ಯರ ಪಾಲಿಗೆ ಆ್ಯಂಬುಲೆನ್ಸ್ ಸೇವೆಯು ಇಲ್ಲದಂತಾಗಿದೆ ಎಂದು ಕರವೇ ಕಾರ್ಯಕರ್ತರು ದೂರಿದರು.
ಪ್ರತಿಭಟನಾನಿರತರು ಕೂಡಲೇ ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಪಟ್ಟುಹಿಡಿದು ಪ್ರತಿಭಟನೆ ತೀವ್ರಗೊಳಿಸಿದ ಪರಿಣಾಮ ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಇಲ್ಲಿನ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಬಳಿಕ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಕರವೇ ನಗರ ಘಟಕದ ಅಧ್ಯಕ್ಷ ಓಹಿಲೇಶ್, ತಾಲೂಕು ಉಪಾಧ್ಯಕ್ಷ ವೆಂಕಟಸ್ವಾಮಿ, ಕುಮಾರಚಾರಿ, ಮಂಜು,ಕೃಷ್ಣೇಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

