ರಾಜ್ಯದಲ್ಲೂ ರಾಜಕೀಯ ಮ್ಯಾಚ್ಫಿಕ್ಸಿಂಗ್: ಮಾಜಿ ಶಾಸಕ ಶ್ರೀರಾಮರೆಡ್ಡಿ ಆರೋಪ
ಕ.ಪ್ರ.ವಾರ್ತೆ ಹಾಸನ ಆ. 10
ರಾಜ್ಯ ವಿಧಾನಸಭೆಗೆ ಆಯ್ಕೆ ಆಗಿರುವ ಸುಮಾರು 80 ಶಾಸಕರು ಭೂಮಾಫಿಯಾಗಳಾಗಿದ್ದು, ಅವರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಆದ್ದರಿಂದ ಅಕ್ರಮ ಭೂ ಒತ್ತುವರಿ ಕುರಿತಂತೆ ಎ.ಟಿ.ರಾಮಸ್ವಾಮಿ ಮತ್ತು ಸುಬ್ರಮಣಿಯನ್ ವರದಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಟೀಕಾ ಪ್ರಹಾರ ನಡೆಸಿದರು.
ನಗರದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಪ್ರತಿಪಕ್ಷವೇ ಇಲ್ಲ. ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಪಕ್ಷಗಳೆಲ್ಲವೂ ಒಂದಲ್ಲ ಒಂದು ರೀತಿ ಪರಸ್ವರ ಅವಲಂಬಿತರು. ಹಾಗಾಗಿ ಅತ್ತ ಕಡೆ (ಆಡಳಿತ ಪಕ್ಷ) ಮತ್ತು ಇತ್ತ ಕಡೆ (ವಿರೋಧಪಕ್ಷದವರು) ಎಲ್ಲಾ ಒಂದೇ. ಬಿಜೆಪಿ, ಕೆಜಿಪಿಯೊಂದಿಗೆ 3 ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೆ, ಜೆಡಿಎಸ್, ಎರಡು ಲೋಕಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದೆ. ಇದು ರಿಯಲ್ ಮ್ಯಾಚ್ಫಿಕ್ಸಿಂಗ್. ಅಧಿಕಾರಕ್ಕಾಗಿ ಹೆಸರು ಬೇರೆ ಇಟ್ಟುಕೊಂಡಿದ್ದಾರೆ ಹೊರತು ನೀತಿಗಳೆಲ್ಲಾ ಎಲ್ಲವೂ ಒಂದೇ ಎಂದು ಖಂಡಿಸಿದರು.
ಅಕ್ರಮ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ ಸುಬ್ರಮಣಿಯನ್ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಕೂಡ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ಹೇಳಿದ ಕ್ಷಣ ಶಾಸಕರ ಹಕ್ಕು ಚ್ಯುತಿ ಆಗುತ್ತದೆ ಎಂಬುದು ದುರ್ದೈವದ ಸಂಗತಿ. ವಾಸ್ತವವಾಗಿ ಹಕ್ಕುಚ್ಯುತಿ ಆಗಿರುವುದು ಅಂಥಹ ಶಾಸಕರನ್ನು ಆಯ್ಕೆ ಮಾಡಿದ 6 ಕೋಟಿ ಜನರದ್ದು ಎಂದು ವಿಷಾದ ವ್ಯಕ್ತಪಡಿಸಿದರು.
ಎಲ್ಲಾ ಚುನಾವಣೆಗಾಗಿ: ಬಿಪಿಎಲ್ ಕಾರ್ಡ್ ವಿತರಣೆ ಸುವ್ಯವಸ್ಥಿತ ರೀತಿಯಲ್ಲಿ ಆಗುತ್ತಿಲ್ಲ. ಆಗಿದ್ದರೂ ಬಿಪಿಎಲ್ ಕಾರ್ಡ್ದಾರರಿಗೆ ರುಪಾಯಿಗೆ 30 ಕೆಜಿ ಅಕ್ಕಿ ನೀಡಲು ಮುಂದಾಗಿರುವುದು ಸರಿಯಲ್ಲ. ಬಜೆಟ್ನಲ್ಲಿ ಅಕ್ಕಿಗೆ ಹಣವನ್ನೇ ನಿಗದಿ ಮಾಡಿಲ್ಲ. ಅತ್ತ ಅನ್ನಭಾಗ್ಯ ಯೋಜನೆಗಾಗಿ ಹೆಚ್ಚುವರಿಯಾಗಿ ಬೇಕಾದ 80 ಸಾವಿರ ಮೆಟ್ರಿಕ್ ಟನ್ ಅಕ್ಕಿ ಕೊಡಲು ನಿರಾಕರಿಸಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವ ಸಿದ್ಥತೆ ಇಲ್ಲದೆ ಅಕ್ಕಿ ವಿತರಣೆ ಮುಂದಾಗಿರುವುದು ನಿಜಕ್ಕೂ ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಅಕ್ಕಿಯನ್ನು ನೀಡಿ ಮತ್ತೊಂದು ಕಡೆ ತರಕಾರಿ, ಬೆಳೆ, ಅಡುಗೆ ಅನಿಲ, ಡಿಸೇಲ್ ಬಸ್ದರಗಳನ್ನು ಏರಿಸಲಾಗಿದೆ. ಇದರಿಂದ ಕೇವಲ ಅಕ್ಕಿ ಕೊಟ್ಟರೆ ಜನರಿಗೆ ಉಪಕಾರ ಮಾಡಿದಂತೆ ಆಗುವುದಿಲ್ಲ ಎಂದ ಅವರು, ಕಾಂಗ್ರೆಸ್, ಬಿಜೆಪಿಯಲ್ಲಿ ಗಣಿ ಮತ್ತು ಭೂಹಗರಣದಲ್ಲಿ ಭಾಗಿಯಾಗಿರುವ ಮಂದಿ ಹೆಚ್ಚಿದ್ದಾರೆ ಎಂದು ಆರೋಪಿಸಿದರು.
ಮಿನುಗಿದ ಕೆಂಬಾವುಟ: ನಗರದಲ್ಲಿ 6 ದಿನಗಳವರೆಗೆ ಸಿಪಿಎಂನ ಕೆಂಬಾವುಟಗಳು ಮಿನುಗಿದರೇ ಕ್ರಾಂತಿ ಗೀತೆಗಳು ಮೊಳಗಿದವು. ಈ ದೇಶದ ನಮ್ಮದೋ. ಈ ಬಾವುಟ ನಮ್ಮದೋ ... ಎಂಬ ಕ್ರಾಂತಿ ಗೀತೆಗಳು ಕಲಾವಿದರು ಹಾಡಿದರು. ಪ್ರಮುಖ ರಸ್ತೆಗಳಲ್ಲಿ ಸಿಪಿಎಂನ ಬಾವುಟಗಳನ್ನು ಹಾರಿಸಲಾಗಿತ್ತು. ಇಲ್ಲಿ ನಡೆದ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ 30 ಜಿಲ್ಲೆಗಳ ಪಿಪಿಎಂ ಪ್ರತಿನಿಧಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

