ಹಾಸನ

ಗುಂಡಿಮಯ ರಸ್ತೆಗಳು; ತಪ್ಪದ ಗೋಳು

Published On :

ದಯಾಶಂಕರ ಮೈಲಿ
ಕ.ಪ್ರ.ವಾರ್ತೆ     ಹಾಸನ     ಆ.12
ಹಾಸನ ಜಿಲ್ಲೆ ಮತ್ತು ನಗರದಲ್ಲಿ ಎಲ್ಲಾದರೂ ಒಂದೇ ಒಂದು ಉತ್ತಮವಾಗಿರುವ ರಸ್ತೆಯನ್ನು ತೋರಿಸಿದರೇ ಬಹುಮಾನ... ಇಂದೇ ಈಗಲೇ ಪ್ರಯತ್ನಿಸಿ. ಬಹುಮಾನ ಗೆಲ್ಲಿ...
ಹೀಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಮತ್ತು ನಗರದ ಎಲ್ಲಾ ರಸ್ತೆಗಳು ಸಂಚರಿಸಲು ಆಗದಂತೆ ಇರುವ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ವ್ಯಂಗ್ಯ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸಂಪೂರ್ಣ ಗುಂಡಿಮಯ: ಬರೀ ಕಣ್ಣಿನಿಂದ ಮಾತ್ರವೇ ಅಲ್ಲ. ಸೂಕ್ಷ್ಮದರ್ಶಕದಲ್ಲಿ ನೋಡಿದರೂ ಉತ್ತಮ ರಸ್ತೆಗಳು ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ರಸ್ತೆಗಳು ಹದಗೆಟ್ಟಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ರಸ್ತೆಗಳು ಎನ್ನುವ ಬದಲು ಗುಂಡಿಗಳು ಎಂದು ಕರೆದರೇ ಸೂಕ್ತವಾಗುತ್ತದೆ. ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ. ಮಳೆ ಬಂದಾಗ ರಸ್ತೆಯಲ್ಲಿ ಇರುವ ಉದ್ದನೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳತ್ತದೆ. ಇದರಿಂದ ವಾಹನ ಸವಾರರಿಗೆ ಗುಂಡಿಗಳ ಅಳ ತಿಳಿಯದೆ, ಅದರ ಮೇಲೆ ಸಂಚರಿಸಿ ನಡು ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಕಳಪೆ ಕಾಮಗಾರಿಗೆ ಶಿಕ್ಷೆಯಾಗುತ್ತಿಲ್ಲ: ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡದ ಕಾರಣ ಮೂರು ಅಥವಾ ಆರು ತಿಂಗಳಿಗೆ ರಸ್ತೆಗಳು ಗುಂಡಿಗಳಾಗುತ್ತವೆ. ಇದನ್ನು ನಿರ್ಮಿಸಿದ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿಲ್ಲ ಎಂದು ಹೇಳಿ ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಮಳೆ ಮಾತ್ರ ರಸ್ತೆಗಳ ಬಂಡವಾಳವನ್ನು ಬಟಾ ಬಯಲು ಮಾಡುತ್ತವೆ. ಮಳೆ ಲಂಚ ಪಡೆಯುವಂತಿದ್ದರೇ ನೀಡಿ ತಮ್ಮ ಕಳಪೆ ಕಾಮಗಾರಿಯನ್ನು ಸಂಬಂಧಪಟ್ಟವರು ಸಮರ್ಥಿಸಿಕೊಳ್ಳುತ್ತಿದ್ದರು. ಕಳಪೆ ಕಾಮಗಾರಿ ಮಾಡಿದವರಿಗೆ ಶಿಕ್ಷೆ ಆಗುತ್ತಿಲ್ಲ. ಪರಿಣಾಮ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ ಹಾಸನ ಜಿಲ್ಲಾ ನಾಗರಿಕ ವೇದಿಕೆ ಸಂಚಾಲಕ ಮಹೇಶ್.
ರು.18.77 ಕೋಟಿ ಬೇಕು: ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ 480 ರಸ್ತೆಗಳು ಮತ್ತು 107 ಕೆರೆ ಏರಿ ರಸ್ತೆಗಳು ಹದಗೆಟ್ಟಿವೆ. ಅವುಗಳ ಅಭಿವೃದ್ಧಿಗೆ ರು.18.77 ಕೋಟಿ ಬೇಕು ಎಂದು ಜಿಲ್ಲಾ ಪಂಚಾಯ್ತ ಕಾರ್ಯ ನಿರ್ವಾಹಕ ಎಂಜಿನಿಯರ್ ವರದಿ ಸಲ್ಲಿಸಿದ್ದಾರೆ. ಹಾಗೆಯೇ ಲೋಕೋಪಯೋಗಿ ಇಲಾಖೆ ಮತ್ತು ಹಾಸನ ನಗರಸಭೆ ಕೂಡ ಸುಮಾರು 20 ಕೋಟಿ ರು.ಗಳ ಅನುದಾನಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿವೆ.
ಲೋಕೋಪಯೋಗಿ ಎಂಜಿನಿಯರ್ ಹೇಳುವುದು ಹೀಗೆ: ಮಳೆಗಾಲದಲ್ಲಿ ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಆನೇಕ ರಸ್ತೆಗಳು ಹದಗೆಟ್ಟಿವೆ. ಅವುಗಳ ದುರಸ್ತಿಗೆ ಬೇಕಾದ ಹಣಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವರದಿ ಬಂದರ ನಂತರ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ರುದ್ರಪ್ಪ ಹೇಳುತ್ತಾರೆ.
ಹಣ ಬರೋದು ಯಾವಾಗ: ರಸ್ತೆಗಳು ಜನರು ಮತ್ತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಂತಹ ಪರಿಸ್ಥಿತಿ ಇರುವಾಗ ಹಣ ಬಂದ ನಂತರದ ದಿನಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗುವುದು ಎಂದು ಹೇಳುತ್ತಿರುವುದು ಸರಿಯಲ್ಲ. ಹಣ ಬರುವರೆಗೂ ಕಾಯುತ್ತ ಕುಳಿತರೆ ರಸ್ತೆ ಅಪಘಾತಗಳು ಹೆಚ್ಚಾಗಿ ಸಾವು, ನೋವುಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕಾಗಿದೆ. ಇಲ್ಲದಿದ್ದರೇ ಜನರು ಕಾನೂನನ್ನು ಕೈಗೆತ್ತಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.
ಜಿಲ್ಲಾ ಪಂಚಾಯ್ತಿ, ಲೋಕೋಪಯೋಗಿ ಇಲಾಖೆ ಮಾತ್ರವೇ ಅಲ್ಲ. ನಗರ ಪ್ರದೇಶದಲ್ಲಿ ನಗರಸಭೆ, ಪುರಸಭೆಗಳಿಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾದ ಜವಾಬ್ದಾರಿ ಇದೆ.ಆದರೆ, ಇದನ್ನು ಮರೆತಿರುವುದು ದುರ್ದೈವದ ಸಂಗತಿ.
ಪೌರ ಸಂಸ್ಥೆ ಚುನಾವಣೆಯಾಗಿ ಮೂರು ತಿಂಗಳಾದ್ರೂ: ನಗರಸಭೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿವೆ. ಇನ್ನೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ರಾಜ್ಯ ಸರ್ಕಾರ ನಿಗದಿ ಮಾಡಿಲ್ಲ. ಇದರ ಪರಿಣಾಮ ಜನಪ್ರತಿನಿಧಿಗಳು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅಧಿಕಾರಿಗಳು ಮಾಡಿದ್ದೇ ಕೆಲಸ ಎಂಬಂತಾಗಿದೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ನಗರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಕೆಟ್ಟಿವೆ. ಹಾಗೆಯೇ ಕಸ ತೆಗೆಯುವ ಕಾರ್ಯ ಸುಗಮವಾಗಿ ನಡೆಯುತ್ತಿಲ್ಲ. ಇದರಿಂದ ಡೆಂಘೀ, ಮಲೇರಿಯಾ ಮತ್ತಿತರ ರೋಗಗಳು ಹರಡುತ್ತಿವೆ.
ತಿಂಗಳಿಗೊಮ್ಮೆ ಬರುವೆ ಎಂದವರು ಸುಳಿಯಲಿಲ್ಲ: 2013 ಜುಲೈ 10 ರಂದು ನಡೆದ ಅನ್ನಭಾಗ್ಯ ಉದ್ಘಾಟನೆ ಸಮಾರಂಭಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಮುಂದೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಜಿಲ್ಲೆಗೆ ಬಂದು ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಅಭಿವೃದ್ದಿ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದರು. ಆದರೆ, ತಿಂಗಳು ಕಳೆದರೂ ಜಿಲ್ಲೆಗೆ ಬಂದಿಲ್ಲ. ಮಂಡ್ಯ ಲೋಕಸಭೆ ಉಪ ಚುನಾವಣೆ ಪ್ರಚಾರದಲ್ಲಿ ಸಚಿವರು ಮುಳುಗಿದ್ದಾರೆ.
ತೊಂದರೆ ತಪ್ಪಿಸಬೇಕಾಗಿದೆ: ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ನಗರಸಭೆ ಅಧಿಕಾರಿಗಳು ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಆರಂಭಿಸುವ ಮೂಲಕ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.