ಈ ತಿರುವುಗಳಲ್ಲಿ ಅಪಘಾತಗಳ ಸರಮಾಲೆ...
ಹೊಳೆನರಸೀಪುರ: ಅಪಘಾತ ವಲಯ, ನಿಧಾನವಾಗಿ ಚಲಿಸಿ ಎಂದು ಇಲಾಖೆಯೇ ಅಲ್ಲಲ್ಲಿ ಕೆಲವು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ನಾಮಫಲಕ ಹಾಕಿದ್ದರೂ, ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ತಿರುವುಗಳನ್ನು ಸರಿಪಡಿಸದ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ ಹಾಗೂ ಜಾಣಕುರುಡುತನದಿಂದಾಗಿ ಇಲ್ಲಿನ ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಕೆಲವು ತಿರುವುಗಳು ಇಂದಿಗೂ ಅಪಘಾತ ಹಾಗೂ ಸಾವು ನೋವುಗಳಿಗೆ ಕಾರಣವಾಗುತ್ತಿವೆ.
ಅಪಘಾತ ಸಂಭವಿಸುವುದು ಆಕಸ್ಮಿಕವೇ ಆದರೂ, ಎಚ್ಚರಿಕೆ ಅನಿವಾರ್ಯ ಎಂಬ ಮಾತಿದೆ. ಆದರೆ ಈ ಎಚ್ಚರಿಕೆ ಎಂಬುದು ಕೇವಲ ವಾಹನ ಚಾಲಕರಿಗಷ್ಟೆ ಇದ್ದರೆ ಸಾಲದು, ಬದಲಿಗೆ ತೆರಿಗೆಯನ್ನು ಪಾವತಿಸುವ ವಾಹನ ಮಾಲೀಕರು ಹಾಗೂ ನಾಗರಿಕರ ಸುರಕ್ಷಿತ ಪ್ರಯಾಣಕ್ಕೆ ಉತ್ತಮ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡ ಬೇಕಾದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿ ಕೂಡಾ ಆಗಿದೆ.
ಪಟ್ಟಣದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ಕೆಲವು ವರ್ಷಗಳ ಹಿಂದೆಯಷ್ಟೇ ಕಿ.ಮೀಗೆ 1 ಕೋಟಿ ರು.ಗಳ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಅಭಿವೃದ್ಧಿ ಪಡಿಸಿತ್ತು. ರಸ್ತೆಯೇನೋ ಅಭಿವೃದ್ಧಿಯಾಯಿತು. ಆದರೆ ಸಂಬಂಧಿಸಿದ ಇಲಾಖೆ ಈ ಹಿಂದೆ ಇದ್ದ ರಸ್ತೆಯ ಮಾದರಿಯಲ್ಲಿಯೇ ನೂತನ ರಸ್ತೆಯನ್ನೂ ಅಭಿವೃದ್ಧಿ ಪಡಿಸಿತೇ ಹೊರತು, ಮೊದಲಿದ್ದ ಅಪಾಯಕಾರಿ ತಿರುವುಗಳನ್ನು ನೇರಗೊಳಿಸಿ ಅಪಘಾತ
ತಪ್ಪಿಸುವ ನಿಟ್ಟಿನಲ್ಲಿ ತಾಂತ್ರಿಕತೆಯನ್ನು ಬಳಕೆ ಮಾಡಿಕೊಂಡು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಯಿತೆಂದೇ ಹೇಳಬೇಕಾಗುತ್ತದೆ.
ಒಂದು ಕಡೆ ಕೆರೆ, ಮತ್ತೊಂದು ಕಡೆಯಲ್ಲಿ ಆಳ ಹಳ್ಳ: ಹಾಸನ-ಮೈಸೂರು ರಸ್ತೆಯಲ್ಲಿನ ಚನ್ನಾಪುರ ಗ್ರಾಮದ ಇಳಿಜಾರಿನ ಬಳಿಯಲ್ಲಿರುವ ಕೆರೆ ಏರಿ ರಸ್ತೆಯು ಅತ್ಯಂತ ಅಪಾಯಕಾರಿ ತಿರುವಿನ ರಸ್ತೆಯಾಗಿದೆ. ಒಂದು ಕಡೆ ಕೆರೆ - ಮತ್ತೊಂದು ಕಡೆಯಲ್ಲಿ ಆಳವಾದ ಹಳ್ಳದಿಂದ ಕೂಡಿದ್ದು ಇಲ್ಲಿ ಅಪಘಾತ ಸಂಭವಿಸಿದರೆ ಅಪಾರ ನಷ್ಟ ಹಾಗೂ ಸಾವು ಕಟ್ಟಿಟ್ಟ ಬುತ್ತಿ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶವಾಗಿದೆ.
ಇದೇ ಸ್ಥಳದಲ್ಲಿ ಈವರೆಗೆ ನೂರಾರು ಅಪಘಾತಗಳು ಸಂಭವಿಸಿದ್ದು, ಆಗಿರುವ ಸಾವು ನೋವುಗಳಿಗಂತೂ ಲೆಕ್ಕವಿಲ್ಲ. ಚಾಲಕನ ನಿಯಂತ್ರಣ ತಪ್ಪಿದ ವಾಹನಗಳು ಇಲ್ಲಿರುವ ಕಬ್ಬಿಣದ ತಡೆಗೋಡೆ ಮುರಿದುಕೊಂಡು ಹಳ್ಳಕ್ಕೆ ಬಿದ್ದು ಆಗಿರುವ ಅಪಘಾತಗಳ ಸಂಖ್ಯೆ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ದಾಖಲೆಗಳಲ್ಲಿ ಕಣ್ಣಿಗೆ ರಾಚುತ್ತದೆ.
ಅಪಘಾತಗಳ ಸರಮಾಲೆ: ಅಲ್ಲದೇ ಪಟ್ಟಣದಿಂದ ಮೈಸೂರು ಕಡೆಗಿನ ರಾಜ್ಯ ಹೆದ್ದಾರಿಯಲ್ಲಿನ ಯಡೇಗೌಡನಹಳ್ಳಿ (ದೊಡ್ಡಹಳ್ಳಿ) ಬಳಿಯಲ್ಲಿನ ಅರಣ್ಯ ಪ್ರದೇಶದೊಳಗಿರುವ ಒಂದು ಅಪಾಯಕಾರಿ ತಿರುವು ಕೂಡಾ ಅನೇಕ ಅಪಘಾತಗಳಿಗೆ ಕಾರಣವಾಗಿದೆ. ಇಲ್ಲಿಯೂ ಕೂಡ ಸಂಬಂಧಿಸಿದ ಇಲಾಖೆ ತೀವ್ರ ತಿರುವಿನಿಂದ ಕೂಡಿರುವ ರಸ್ತೆಯನ್ನು ನೇರಗೊಳಿಸದ ಕಾರಣ ಇಲ್ಲಿ ಅಪಘಾತಗಳ ಸರಮಾಲೆಯೇ ಸಂಭವಿಸುತ್ತಲೇ ಇರುವುದು ಸಾಮಾನ್ಯ ಸಂಗತಿಯಾಗಿದೆ.
ಬಹು ಮುಖ್ಯವಾಗಿ ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿರುವ ಈ ಸ್ಥಳಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಈ ಸ್ಥಳದ ಅಕ್ಕಪಕ್ಕದಲ್ಲಿನ ಸರ್ಕಾರಿ ಜಾಗವನ್ನು ಬಳಸಿಕೊಂಡು ರಸ್ತೆಯನ್ನು ನೇರಗೊಳಿಸುವುದು ಕಷ್ಟಸಾಧ್ಯವಾದ ಕೆಲಸವೇನಲ್ಲ. ಆದರೆ ಇದಕ್ಕೆ ಬೇಕಾಗಿರುವುದು ಸ್ವಲ್ಪ ಮುತುವರ್ಜಿ ಹಾಗೂ ಒಂದಿಷ್ಟು ಕಾಳಜಿ ಅಷ್ಟೇ.
ಪ್ರಸ್ತುತ ಇಡೀ ದೇಶಕ್ಕೆ ದೇಶವೆ ತಾಂತ್ರಿಕತೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ, ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಮಾತ್ರ ಮುಂದಾಗದಿರುವುದು ಶೋಚನೀಯ ಸಂಗತಿ.
ಇದರೊಂದಿಗೆ ಅಭಿವೃದ್ಧಿ ವಿಷಯದಲ್ಲಿ ಸದಾ ಮುಂದೆ ನಿಲ್ಲುವ ಸ್ಥಳೀಯ ಶಾಸಕರು ಹಾಗೂ ಈ ಹಿಂದೆ ಲೋಕೋಪಯೋಗಿ ಸಚಿವರೇ ಆಗಿದ್ದ ಎಚ್.ಡಿ.ರೇವಣ್ಣ ಕೂಡಾ ಈ ಹಿಂದೆ ಈ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಸ್ವಲ್ಪವಾದರೂ ಕಾಳಜಿ ವಹಿಸಿದ್ದಲ್ಲಿ ಈ ರಸ್ತೆಗಳಲ್ಲಿನ ತಿರುವು ಅಂದೇ ಮಾಯವಾಗಿ ಹಾಸನದಿಂದ ಮೈಸೂರಿನವರೆಗೂ ಅಪಾಯವಿಲ್ಲದ ಉತ್ತಮ ರಸ್ತೆ ಸಾರ್ವಜನಿಕರಿಗೆ ಒದಗಿರುತ್ತಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಬೇಲೂರಿನ ವಿಷ್ಣುಸಮುದ್ರ ಕೆರೆ ಏರಿಯಿಂದ ಸಾರಿಗೆ ಬಸ್ವೊಂದು ಉರುಳಿ ಅಪಾರ ಸಾವು ನೋವು ಸಂಭವಿಸಿದಾಗ, ಅಪಘಾತಕ್ಕೆ ಕಾರಣರನ್ನಾಗಿ ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡಿ ತೋರಿಸುತ್ತ ನಡೆದ ದುರಂತಕ್ಕೆ ಯಾರನ್ನು ಹೊಣೆ ಮಾಡುವುದು ಎಂಬಂತೆ ನಡೆದುಕೊಳ್ಳಲಾಯಿತು.
ಆದರೆ ತಾಲೂಕಿನ ಈ ಸ್ಥಳಗಳಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಮುಂದಿನ ದಿನಗಳಲ್ಲಾದರೂ ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಹಾಗೂ ಸರಿಪಡಿಸುವ ಕ್ರಮವನ್ನು ಈಗಲಾದರೂ ಕೈಗೊಂಡಲ್ಲಿ ಇಲಾಖೆಯು ತನ್ನ ಪಾಲಿನ ಕಾಳಜಿಯನ್ನು ಪ್ರದರ್ಶಿಸಿದಂತಾಗುತ್ತದೆ. ಆನಂತರ ಎಚ್ಚರಿಕೆ ವಾಹನ ಚಾಲಕರ ಪಾಲಿನ ಜವಾಬ್ದಾರಿಯಾಗುತ್ತದೆಯಲ್ಲವೇ...
-ಎಚ್.ಡಿ.ಗುರುಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

