ಕಾಂಗ್ರೆಸ್ ಕಾರ್ಯಕರ್ತರ ರಸ್ತೆ ತಡೆ
ಕನ್ನಡಪ್ರಭ ವಾರ್ತೆ , ಅರಸೀಕೆರೆ , ಆ. 26
ತಾಲೂಕಿನ ಬಾಣಾವರ ಮಾರ್ಗದ ಹುಳಿಯಾರ್ ರಸ್ತೆಯ ಡಾಂಬರೀಕರಣ ಕಾಮಗಾರಿಯು ನೆನಗುದಿಗೆ ಬಿದ್ದಿರುವ ಕಾರಣ ತಾಲೂಕಿನ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ಆಕ್ರೋಶಗೊಂಡು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೆಳಗ್ಗೆ ತಾಲೂಕಿನ ಎ.ಮಲ್ಲಾಪುರ ಗ್ರಾಮದಲ್ಲಿ ರಸ್ತೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ತಾಲೂಕಿನ ಬಾಣಾವರ ಸಮೀಪದಲ್ಲಿನ ಎ.ಮಲ್ಲಾಪುರ ಗ್ರಾಮದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಸೇರಿ ವಾಹನಗಳನ್ನು ತಡೆದು ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಪಟೇಲ್ ಶಿವಪ್ಪ ಅವರು ಮಾತನಾಡಿ ಇದೇ ರಾಷ್ಟ್ರೀಯ ಹೆದ್ದಾರಿಯ ಬೇಲೂರು ಅರಕೆರೆ ಮಾರ್ಗದಲ್ಲಿ ಕಾಮಾಗಾರಿ ತ್ವರಿತವಾಗಿ ನಡೆಯುತ್ತಿದೆ. ಆದರೆ ಬಾಣಾವರ ಮಾರ್ಗದ ಹುಳಿಯಾರ್ ಸಂಪರ್ಕಿಸುವ ಕಾಮಗಾರಿ ಯಾಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು. ಟೆಂಡರ್ ರದ್ದಾಗಬೇಕಾಗಿದ್ದ ಗುತ್ತಿಗೆ ಕಾಮಗಾರಿಯನ್ನು ಪುನ: ಒಳಗುತ್ತಿಗೆ ನೀಡಿರುವ ಔಚಿತ್ಯವಾದರೂ ಏನೆಂದು ಪ್ರಶ್ನಿಸಿದರು.
ತಾಲೂಕಿನ ಸೋಮಶೆಟ್ಟಿಹಳ್ಳಿ ಸಮೀಪವಿರುವ ಜಲ್ಲಿಕಲ್ಲಿನ ಗಣಿಗಾರಿಕೆ ಮೂಲಕ ಈ ರಸ್ತೆ ಕಾಮಗಾರಿಗೆ ಜಲ್ಲಿಕಲ್ಲು ಪೂರೈಕೆ ಆಗಬೇಕಾಗಿದ್ದು, ಈ ಕಲ್ಲು ಗಣಿಗಾರಿಕೆ ಶಾಸಕರ ಪತ್ನಿಯ ಹೆಸರಿನಲ್ಲಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಪ್ರತಿನಿತ್ಯ ಓಡಾಡುವ ನೂರಾರು ವಾಹನಗಳಿಗೆ ತೊಂದರೆ ಆಗುತ್ತಿದ್ದು, ಗ್ರಾಮೀಣಾ ಭಾಗದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅಪಾದಿಸಿದರು.
ಆದರೆ ಕಣಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆಯ ಕಾಮಗಾರಿ ಮಾತ್ರ ನಡೆಯುತ್ತಿದ್ದು, ಈ ಕಾಮಾಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವ ಕಾರಣ ತಾವು ಬೆಂಗಳೂರಿನಿಂದ ಗುಣನಿಯಂತ್ರಣ ಅಧಿಕಾರಿಗಳನ್ನು ಕರೆತಂದು ಗುಣಮಟ್ಟದ ಪರೀಕ್ಷೆಯನ್ನು ಮಾಡಿಸುವ ಮೂಲಕ ಕ್ಷೇತ್ರದ ಜನತೆ ಮುಂದೆ ವರದಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಹಾಡಿದರು.
ಮುಖಂಡರಾದ ಟಿ.ಆರ್.ಕೃಷ್ಣಮೂರ್ತಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ದೊರೆತು 2 ವರ್ಷವಾದರೂ ಕಾಮಗಾರಿ ಮುಗಿದಿಲ್ಲ, ರಸ್ತೆಯ ಅಗಲೀಕರಣದಿಂದ ಸುವ್ಯವಸ್ಥಿತ ರಸ್ತೆ ನಿರ್ಮಾಣದ ಕನಸು ಕಂಡಿದ ಈ ಭಾಗದ ಗ್ರಾಮೀಣಾ ಜನರ ನನಸಾಗಲು ಸಾಧ್ಯವಾಗದೆ ಅನೇಕ ಸಂಕಷ್ಟಗಳನ್ನು ಇಲ್ಲಿನ ಜನರು ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ರಸ್ತೆಯನ್ನು ಅಗೆದು ಸಂಪೂರ್ಣವಾಗಿ ಹದಗೆಡಿಸಿ ಹೋದಂತಹ ಗುತ್ತಿಗೆದಾರರು ಇಂದಿಗೂ ನಾಪತ್ತೆಯಾಗಿದ್ದಾರೆ. ಗುತ್ತಿಗೆ ಪಡೆದಿರುವ ಹೈದರಬಾದ್ ಮೂಲದ ಎ.ಎಸ್.ಐ.ಪಿ. ಕಂಪನಿ ಕಾಮಗಾರಿ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದಕಾರಣ ಈ ಗುತ್ತಿಗೆಯನ್ನು ಅಧಿಕಾರಿಗಳು ರದ್ದುಪಡಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಿದರೆ ಮಾತ್ರ ಡಾಂಬರೀಕರಣದ ಕಾಮಾಗಾರಿ ಪೂರ್ಣಗೊಳ್ಳು ಸಾಧ್ಯ ಎಂದು ಹೇಳಿದರು. ಈ ಕ್ಷೇತ್ರದ ಶಾಸಕರು ಸತ್ಯಾಂಶವನ್ನು ಮುಚಿಟ್ಟು ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ ಟೀಕಿಸಿದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯಕುಮಾರ್, ಮುಖಂಡ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಮಿವುಲ್ಲಾ ಷರೀಫ್, ಬಾಣಾವರ ಗ್ರಾ.ಪಂ. ಅಧ್ಯಕ್ಷೆ ಅಂಬಿಕಾ ರಮೇಶ್, ಶ್ಯಾನೇಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಜಿ. ಚಂದ್ರಪ್ಪ, ಜಯರಾಂ, ಪ್ಯಾರೇಜಾನ್, ಎಂ.ಆರ್. ರಂಗನಾಥ್, ಕೆ.ಟಿ. ಧರ್ಮಪ್ಪ ಹಾಗೂ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾಗ್ಯಮ್ಮ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

