ಹಾಸನ

ಮಹಿಳೆಯರಿಂದ ಮಹಿಳೆಯರ ಮೇಲೆ ದೌರ್ಜನ್ಯ: ಜಯಶ್ರೀ

Published On :

ಹಾಸನ: ಕೇವಲ ಪುರುಷರು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಮಾತ್ರವಲ್ಲದೆ ಮಹಿಳೆಯರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯಗಳು ಕಂಡು ಬರುತ್ತಿವೆ ಎಂದು ಅನನ್ಯ ಟ್ರಸ್ಟಿನ ಅಧ್ಯಕ್ಷೆ ಕೆ.ಟಿ. ಜಯಶ್ರೀ ವಿಷಾದಿಸಿದ್ದಾರೆ.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಮಹಿಳಾ ದೌರ್ಜನ್ಯ ತಡೆಗಟ್ಟುವ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಕ್ಷಿಣೆ ಕಿರುಕುಳ ಮತ್ತು ಹೆಣ್ಣು ಭ್ರೂಣ ಹತ್ಯೆ ಮಹಿಳೆಯರ ನಡುವಿನ ಶೋಷಣೆಗೆ ಉದಾಹರಣೆಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿನಿತ್ಯ 11ರಿಂದ 12 ಲೈಂಗಿಕ ದೌರ್ಜನ್ಯ: ಹಿಂದೆ ಅವಿಭಕ್ತ ಕುಟುಂಬದಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಅದು ಬೆಳಕಿಗೆ ಬರದೆ ಮುಚ್ಚಿ ಹೋಗುತ್ತಿತ್ತು. ಆದರೆ ಇಂದು ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಲವಾರು ದೌರ್ಜನ್ಯಗಳು ಬೆಳಕಿಗೆ ಬರುತ್ತಿವೆ ಎಂದರು.
ಪ್ರೇಮ ಪ್ರಕರಣಗಳಲ್ಲಿಯೂ ಮಾನಸಿಕ ದೌರ್ಜನ್ಯಗಳು ಕಂಡುಬರುತ್ತಿದ್ದು, ಹಾಸನದಂತಹ ನಗರಗಳಲ್ಲಿಯೂ ಪ್ರತಿನಿತ್ಯ 11ರಿಂದ 12 ಲೈಂಗಿಕ ದೌರ್ಜನ್ಯ ಆಗುತ್ತಿರುವುದು ಶೋಚನೀಯವಾಗಿದೆ ಎಂದರು.
ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಹಾಗೂ ಬಾಲಕಿಯರನ್ನು ತಪ್ಪಿತಸ್ಥೆಯಂತೆ ಕಾಣದತೆ, ಅನುಕಂಪ ತೋರದೆ ಆತ್ಮವಿಶ್ವಾಸ ತುಂಬಿ ಸಾಂತ್ವನ ಹೇಳುವುದರ ಮೂಲಕ ಮೊದಲ ಸ್ಥಿತಿಗೆ ತರುವ ಪ್ರಯತ್ನ ಮಾಡಬೇಕಾಗಿದೆ. ಪುರುಷ ಮತ್ತು ಸ್ತ್ರೀಯರು ಒಬ್ಬರಿಗೊಬ್ಬರು  ಪೂರಕವಾಗಿದ್ದು, ಸಮಾನ ಮನೋಭಾವ ಹೊಂದಿರಬೇಕು ಎಂದರು.
ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸಿ: ತಂತ್ರಜ್ಞಾನ ಪ್ರಭಾವದಿಂದ ಮಹಿಳೆಯರು ಇಂದು ಕುಟುಂಬವನ್ನು ಅಭದ್ರಗೊಳಿಸುತ್ತಿದ್ದಾರೆ. ಕಾನೂನುಗಳು ಮಹಿಳೆಯರ ಪರ ಇರುವುದರಿಂದ ಕಾನೂನುಗಳು ದುರುಪಯೋಗವಾಗುತ್ತಿವೆ ಎಂದು ದೂರಿದರು.
ಪಾಶ್ಚಾತ್ಯ ಸಂಸ್ಕೃತಿ ಪಾಲಿಸುವುದು ತಪ್ಪಲ್ಲ. ಆದರೆ ಸಕಾರಾತ್ಮಕ ಅಂಶಗಳಾದ ಶಿಸ್ತು, ಸ್ವಚ್ಛತೆ ಮತ್ತು ಸಮಯ ಪ್ರಜ್ಞೆಯಂತಹ ಅನೇಕ ಅಂಶವನ್ನು ಪಾಲಿಸುವುದು ಒಳಿತು. ಇದು ಪ್ರಾಥಮಿಕ ಘಟಕವಾದ ಕುಟುಂಬದಿಂದಲೇ ಪ್ರಾರಂಭವಾಗಬೇಕು. ಆದರೆ ಕುಟುಂಬದಿಂದಲೇ ಲಿಂಗ ತಾರತಮ್ಯವು ಏರ್ಪಡುತ್ತಿದೆ. ಆದ್ದರಿಂದ ಪೋಷಕರಿಗೆ ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ಕೊಟ್ಟಿರುವ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು ಎಂದು ಹೇಳಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿ. ಸುನಿತಾ ಮಾತನಾಡಿ, ಇಂದು ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ ಕಂಡುಬರುತ್ತಿದ್ದು, ಇದರ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ಲೈಂಗಿಕ, ದೈಹಿಕ ಹಾಗೂ ಮಾನಸಿಕವಾಗಿ ದೌರ್ಜನ್ಯ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಿದಾರೆ. ದೌರ್ಜನ್ಯ ತಡೆಗಟ್ಟುವುದರ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಇಂತಹ ದೌರ್ಜನ್ಯಕ್ಕೆ ಒಳಗಾಗದಿರುವಂತೆ ತಡೆಯಬೇಕು ಎಂದು ಹೇಳಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಶಿವಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಡಿ.ಜಿ. ಕೃಷ್ಣೇಗೌಡ, ಡಾ. ಎಂ.ಕೆ. ದೇವಪ್ಪ, ಡಿ. ವನಿತಾ, ಮನ್ಸೂರ್ ಪಾಷಾ ಇತರರು ಇದ್ದರು. ಸಂವಾದದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಪೂರ್ಣಿಮಾ ಪ್ರಾರ್ಥಿಸಿದರು. ಕಾವ್ಯಾ ಸ್ವಾಗತಿದರು. ಪ್ರೀತಿ ವಂದಿಸಿದರು. ಹೀನಾ ಕೌಸರ್ ನಿರೂಪಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.