ಅನ್ನದಾತರಿಗೆ ಸೂಕ್ತ ಪರಿಹಾರ: ಜಿಲ್ಲಾಧಿಕಾರಿ
ಕ.ಪ್ರ.ವಾರ್ತೆ ಹಾಸನ ಡಿ.2
ಮಂಗಳೂರು-ಮೈಸೂರು- ಮಾರ್ಗಮಧ್ಯೆ ಜಿಲ್ಲೆಯ ಸಕಲೇಶಪುರ, ಬೇಲೂರು, ಹಾಸನ ಮತ್ತು ಆಲೂರು ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧಿಸಿದಂತೆ ಬಳಸಲಾಗುವ ಭೂಮಿಗೆ ಹಾಗೂ ಬೆಳೆ ನಷ್ಟಕ್ಕೆ ರೈತರಿಗೆ ಸೂಕ್ತ ಪರಿಹಾರ ನಿಗದಿಪಡಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಯೋಜನೆಗಾಗಿ ಭೂಮಿ ಬಿಟ್ಟುಕೊಡುವ ರೈತರಿಗೆ ಯಾವ ಮಾನದಂಡಗಳಲ್ಲಿ ಪರಿಹಾರವನ್ನು ದೊರಕಿಸಲು ಅವಕಾಶವಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಅವರು, ರೈತರ ಅಭಿಪ್ರಾಯವನ್ನು ಕೇಳಿ ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿಗೆ ಪರಿಹಾರ ನಿಗದಿಪಡಿಸಲು ಸಭೆ ಕರೆಯಲಾಗಿದ್ದು, ಅತಿ ಶೀಘ್ರದಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕ್ ಅದಾಲತ್ ನಡೆಸಿ ಬಾಕಿ ಉಳಿದಿರುವ ಗೊಂದಲಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ಯೋಜನೆಗಾಗಿ ಮಂಡ್ಯ ಮತ್ತು ತುಮಕೂರು ಜಿಲ್ಲಾಧಿಕಾರಿಗಳು ಭೂಮಿಗೆ ಮಾರುಕಟ್ಟೆ ದರದಲ್ಲಿ ಕ್ರಮವಾಗಿ ನಾಲ್ಕು ಹಾಗೂ ಐದು ಪಟ್ಟು ಅಧಿಕ ಪ್ರಮಾಣದ ದರ ನಿಗದಿಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲೂ ಕಾನೂನಿನ ಮಿತಿಯೊಳಗೆ ರೈತರಿಗೆ ಗರಿಷ್ಠ ಅನುಕೂಲಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಿಗದಿಪಡಿಸುವ ಭೂಮಿಯ ಬೆಲೆಯ ಶೇ.10ರಷ್ಟು ಹಣವನ್ನು ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಅವಕಾಶವಿದೆ ಇದರ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.
ಪೈಪ್ ಲೈನ್ ಅಳವಡಿಕೆ ಪ್ರಕ್ರಿಯೆ ಮುಗಿಯುವವರೆಗೂ ಎಚ್ಪಿಸಿಎಲ್ ಕಂಪನಿ ವತಿಯಿಂದ ಜಿಲ್ಲೆಯಲ್ಲಿ ಒಂದು ಸಹಾಯವಾಣಿ ಕೇಂದ್ರವನ್ನು ಕಡ್ಡಾಯವಾಗಿ ತೆರೆಯಬೇಕು ಮತ್ತು ರೈತರ ಸಮಸ್ಯೆಗಳನ್ನು ಆಲಿಸಿ ನಿಯಮಾನುಸಾರ ಬಗೆಹರಿಸಬೇಕು. ರೈತರ ಭೂಮಿಗೆ ಪರಿಹಾರ ನೀಡದ ಹೊರತು ರೈತರ ಜಮೀನುಗಳಲ್ಲಿ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ಮುಂದಾಗಬಾರದು, ಬೆಳೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ತಾರಮ್ಯ ಮಾಡದೇ ಅನ್ನದಾತರಿಗೆ ಹೆಚ್ಚಿನ ಅನುಕೂಲ ಒದಗಿಸಲು ಪ್ರಯತ್ನಿಸಬೇಕು ಎಂದು ಅನ್ಬುಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿಗಳು ಖುದ್ದಾಗಿ ಎಲ್ಲಾ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಉಪ ವಿಭಾಗಾಧಿಕಾರಿಗಳನ್ನು ಸಹ ಸ್ಥಳ ಪರಿಶೀಲನೆಗೆ ಕಳುಹಿಸಲಾಗುವುದು. ನಿಖರವಾಗಿ ನಷ್ಟ ಅಂದಾಜಿಸಿ ವಶಪಡಿಸಿಕೊಳ್ಳಲಾಗುವ ಜಮೀನಿಗೆ ತಕ್ಕಷ್ಟು ಪರಿಹಾರ ಒದಗಿಸಬೇಕು ಮತ್ತು ದಾಖಲೆಗಳಲ್ಲಿ ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ಗ್ಯಾಸ್ ಪೈಪ್ ಲೈನ್ ಅಳವಡಿಕೆ ಜಮೀನನ್ನು ಬಳಸುವ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ರೈತರ ಭಾವನೆಗಳಿಗೂ ಗೌರವ ಕೊಟ್ಟು ಅಭಿಪ್ರಾಯಗಳನ್ನು ಆಲಿಸಲು ಸಭೆ ಕರೆಯಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಜಮೀನನ್ನು ವಶಪಡಿಸಿಕೊಳ್ಳುವುದು ಅಥವಾ ಬಳಸಿಕೊಳ್ಳುವುದು ಅನಿವಾರ್ಯ. ಆದರೆ ಬಡ ಜನರ ಹೊಟ್ಟೆ ಮೇಲೆ ಹೊಡೆದು ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂಬುದು ಉದ್ದೇಶ ಯಾರಿಗೂ ಇಲ್ಲ. ಎಲ್ಲರಿಗೂ ನ್ಯಾಯ ಸಮ್ಮತ ಪರಿಹಾರ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಬೆಳೆ ಪರಿಹಾರಲ್ಲಿ ಯಾವುದೇ ತಾರತಮ್ಯ ತೋರಬಾರದು. ಮರಗಳಿಗೆ ಅದು ತಂದುಕೊಡುತ್ತಿದ್ದ ಗರಿಷ್ಠ ಆದಾಯವನ್ನು ಪರಿಹಾರವಾಗಿ ವಿತರಿಸಬೇಕು. ಮಾರುಕಟ್ಟೆ ಬೆಲೆಯನ್ನು ನಿಗಧಿಪಡಿಸುವ ಸಂದರ್ಭದಲ್ಲಿ ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ರೈತರು ಮನವಿ ಮಾಡಿದರು.
ಸಕಲೇಶಪುರ ತಾಲ್ಲೂಕು ಸೇರಿದಂತೆ ಮಲೆನಾಡು ಭಾಗದಲ್ಲಿ ಒಮ್ಮೆ ಇಂತಹ ಯೋಜನೆಗಳಿಗೆ ಬಳಸಲಾಗುವ ಜಮೀನಿನಲ್ಲಿ ಕಾಫಿ ಅಥವಾ ಇತರ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಈ ಹಿಂದೆ ವಿದ್ಯುತ್ ಲೈನ್ ಎಳೆಯಲು ಭೂಮಿ ಬಳಸಿದ ಸಂದರ್ಭ ಎಕರೆಗೆ ರು. 15ರಿಂದ 18 ಲಕ್ಷ ಪರಿಹಾರ ನೀಡಲಾಗಿದ್ದು, ಈಗ ಎಕರೆಗೆ ರು. 25 ಲಕ್ಷ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ರೈತರು ಕೋರಿದರು.
ಈ ಹಿಂದೆ ಪೆಟ್ರೋಲ್ ಪೈಪ್ ಲೈನ್ ಎಳೆಯಲು ರೈತರಿಂದ ಪಡೆಯಲಾಗಿದ್ದ ಜಮೀನನ್ನು ರೈತರ ಅನುಮತಿ ಇಲ್ಲದೆ ಎಚ್ಪಿಸಿಎಲ್ ಕಂಪನಿಗೆ ನೀಡಲಾಗಿದೆ ಮತ್ತು ಅದಕ್ಕೂ ಹಾಗೂ ಬೆಳೆಗೂ ಸಹ ಪರಿಹಾರ ಒದಗಿಸಬೇಕು ಎಂದೂ ಸಹ ರೈತರು ಬೇಡಿಕೆ ಇಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದ ನಂತರವಷ್ಟೇ ಮುಂದುವರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಲಿ ಪೈಪ್ ಲೈನ್ ಅಳವಡಿಸುವ ಜಮೀನಿಗೆ ಸಂಬಂಧಿಸಿದಂತೆ ಪಹಣಿಯ ಕಲಂ ನಂ. 11ರಲ್ಲಿ ದಾಖಲಿಸಲಾಗುತ್ತಿದ್ದು, ಇದನ್ನು ಕೈಬಿಡಬೇಕು. ಯೋಜನೆಗೆ ಜಮೀನು ಬಳಸಿದ ನಂತರ 1 ವರ್ಷದ ವರೆಗೆ ಕಂಪನಿಯಲ್ಲಿ 3 ಬಾರಿ ಭೂಮಿ ಸಮತಟ್ಟು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರು ಗ್ಯಾಸ್ ಕಂಪನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಚ್ಪಿಸಿಎಲ್ ಗ್ಯಾಸ್ ಕಂಪನಿಯ ಉಪ ಪ್ರಧಾನ ವ್ಯವಸ್ಥಾಪಕ ಪಿ.ವಿ.ಎಸ್.ಮೂರ್ತಿ, ಮುಖ್ಯ ವ್ಯವಸ್ಥಾಪಕ ರಮೇಶ್, ಸಕ್ಷಮ ಅಧಿಕಾರಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ (ಮಂಗಳೂರು) ಕೃಷ್ಣಮೂರ್ತಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ(ಬೆಂಗಳೂರು) ಆರ್. ಯಶೋಧ ಅವರು, ಯೋಜನೆಗೆ ಬಳಸಲಾಗುವ ಜಮೀನಿಗೆ ಪರಿಹಾರ ಒದಗಿಸಲು ಅನುಸರಿಸುವ ಮಾನದಂಡಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎನ್. ಲಕ್ಷ್ಮಣ್, ತೋಟಗಾರಿಕೆ ಉಪ ನಿರ್ದೇಶಕ ಶಕೀಲ್ ಅಹಮದ್, ತಹಸೀಲ್ದಾರ್ಗಳು, ರೈತರು ಹಾಗೂ ಇತರರು ಇದ್ದರು.
ಯೋಜನಾ ವಿವರ
ಈ ಯೋಜನೆಯಡಿ ಜಿಲ್ಲೆಯಲ್ಲಿ 145.384 ಕಿಮೀ ಪೈಪ್ ಲೈನ್ ಅಳವಡಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ನೆರಿಯಾ-ಯಡಿಯೂರು ಮೈನ್ಲೈನ್ಪೈಪು ಅಳವಡಿಕೆಗಾಗಿ ಸಕಲೇಶಪುರ ತಾಲ್ಲೂಕಿನ 8 ಗ್ರಾಮಗಳಲ್ಲಿ 179 ಮಂದಿಗೆ ಸೇರಿದ 17.33 ಎಕರೆ ಜಮೀನಿನಲ್ಲಿ 11.45 ಕಿಮೀ. ಪೈಪ್ ಲೈನ್, ಬೇಲೂರಿನ 10 ಗ್ರಾಮಗಳಲ್ಲಿ 149 ರೈತರ 18.31 ಎಕರೆ ಜಮೀನಿನಲ್ಲಿ 12.13 ಕಿಮೀ ಪೈಪ್ ಲೈನ್, ಆಲೂರು ತಾಲ್ಲೂಕಿನ 10 ಗ್ರಾಮಗಳಲ್ಲಿ 355 ರೈತರಿಗೆ ಸೇರಿದ 24.32 ಎಕರೆ ಜಮೀನಿನಲ್ಲಿ 15.166 ಕಿಮೀ. ಪೈಪ್ ಲೈನ್, ಹಾಸನ ತಾಲ್ಲೂಕಿನ 27 ಗ್ರಾಮಗಳಲ್ಲಿ 748 ರೈತರ 46.12 ಎಕರೆ ಜಮೀನಿನಲ್ಲಿ 28.739 ಕಿಮೀ ಪೈಪ್ ಲೈನ್, ಚನ್ನರಾಯಪಟ್ಟಣ ತಾಲ್ಲೂಕಿನ 29 ಗ್ರಾಮಗಳಲ್ಲಿ 647 ರೈತರಿಗೆ ಸೇರಿದ 54.04 ಎಕರೆ ಜಮೀನಿನಲ್ಲಿ 36.816 ಕಿಮೀ ಪೈಪ್ ಲೈನ್ ಅಳವಡಿಸಲಾಗುತ್ತದೆ..
ಇದೇ ರೀತಿ ಹಾಸನ-ಮೈಸೂರು ನಡುವಿನ ಪೈಪ್ ಅಳವಡಿಕೆ ಕಾರ್ಯಕ್ಕಾಗಿ ಹಾಸನ ತಾಲ್ಲೂಕಿನ 15 ಗ್ರಾಮಗಳ 358 ರೈತರ 72.10 ಎಕರೆ ಜಮೀನಿನಲ್ಲಿ 19.385 ಕಿ.ಮೀ ಪೈಪ್ ಲೈನ್ ಹಾಗೂ ಅರಕಲಗೂಡು ತಾಲ್ಲೂಕಿನ 3 ಗ್ರಾಮಗಳ 127 ರೈತರಿಗೆ ಸೇರಿದ 19.21 ಎಕರೆ ಜಮೀನಿನಲ್ಲಿ 4.335 ಕಿ.ಮೀ ಹಾಗೂ ಹೊಳೆನರಸೀಪುರ ತಾಲ್ಲೂಕಿನ 14 ಗ್ರಾಮಗಳಲ್ಲಿ 356 ರೈತರ 76.04 ಎಕರೆ ಜಮೀನಿನಲ್ಲಿ 17.354 ಕಿ.ಮೀ ಪೈಪ್ ಲೈನ್ ಅಳವಡಿಕೆಗೆ ಉದ್ದೇಶಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

