ಹಾಸನ

ಚರಂಡಿಗೆ ಕಬ್ಬಿಣದ ತಡೆ: ಸಾರ್ವಜನಿಕರ ವಿರೋಧ

Published On :

ಕ.ಪ್ರ.ವಾರ್ತೆ    ಅರಸೀಕೆರ್ಣೆ ಡಿ.2
ಪಟ್ಟಣದ ಹಾಸನ ರಸ್ತೆ ಬಲ ಮತ್ತು ಎಡ ಭಾಗದಲ್ಲಿರುವ ದೊಡ್ಡ ಚರಂಡಿಗಳ ಒಳಗೆ ಅವೈಜ್ಞಾನಿಕವಾಗಿ ರೇಲ್ವೆ ಇಲಾಖೆಯು ಕಬ್ಬಿಣದ ತಡೆಗಳನ್ನು ಸ್ಥಾಪಿಸಿರುವುದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪ್ರಮುಖ ಸಂಚಾರಿ ರಸ್ತೆಗಳನ್ನು  ಮುಚ್ಚುವುದರ ಮೂಲಕ ರೈಲ್ವೆ ಇಲಾಖೆ ತನ್ನ ದರ್ಪವನ್ನು ತೋರ್ಪಡಿಸಿದ ಬೆನ್ನ  ಹಿಂದೆಯೇ ಮತ್ತೊಂದು ಅವಘಡಕ್ಕೆ ಕೈ ಹಾಕಿದೆ. ಪಟ್ಟಣದ ಹಾಸನ ರಸ್ತೆ ಬಲ ಮತ್ತು ಎಡಭಾಗದ ಪ್ರದೇಶಗಳಲ್ಲಿರುವ ವಸತಿ ಗೃಹಗಳಿಂದ ಕೊಳಚೆ ನೀರು ಹಾದು ಹೋಗುವ ಮತ್ತು ನೂರಾರು ವರ್ಷಗಳಿಂದ ಇದ್ದಂತಹ ದೊಡ್ಡ ಚರಂಡಿಯಲ್ಲಿ ರೇಲ್ವೆ ಇಲಾಖೆಯು ಪುರಸಭೆ ಪೂರ್ವಾನುಮತಿ ಇಲ್ಲದೇ ಈ ಚರಂಡಿಯನ್ನು ದ್ವಂಸಗೊಳಿಸಿ ಬೃಹತ್ ಕಬ್ಬಿಣದ ತಡೆಗೋಡೆಗಳನ್ನು ಸ್ಥಾಪಿಸುವುದರ ಮೂಲಕ ಚರಂಡಿ ನೀರು ರಸ್ತೆಯ ಮೇಲೆ ಹರಿಯುವಂತೆ ಕಾಮಗಾರಿ ನಡೆಸಿದ್ದಾರೆ.
ಈ ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳೇ ಕಳೆದಿದ್ದು, ಈ ಚರಂಡಿಯಲ್ಲಿ ಬೃಹತ್ ಮಟ್ಟದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿ, ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಸಾವಿರಾರು ಕುಟುಂಬಗಳು ವಾಸವಾಗಿರುವ ಹಾಸನ ರಸ್ತೆ ಬಲ ಮತ್ತು ಎಡಭಾಗದ ಪ್ರದೇಶಗಳ ಕೊಳಚೆ ಮತ್ತು ಮಳೆ ನೀರು ಸರಾಗವಾಗಿ ಹರಿಯಲು ಇದೊಂದೇ ಚರಂಡಿ ಈವರೆಗೆ ಇತ್ತು. ಆದರೆ, ಈಗ ಈ ಚರಂಡಿ ಮುಚ್ಚಿರುವುದರಿಂದ ಕೊಳಚೆ ನೀರು ಹರಿಯಲು ಪರ್ಯಾಯ ಅವಕಾಶವಿಲ್ಲದಂತಾಗಿದೆ.
 ಹೀಗಾಗಿ, ಚರಂಡಿ ನೀರು ರಸ್ತೆಯ ಮೇಲೆ ಹರಿಯುವ ಪ್ರಮೇಯ ಉದ್ಭವವಾಗಿದೆ.
ಈಗಾಗಲೇ ಸಾಂಕ್ರಾಮಿಕ ರೋಗಗಳು ಮತ್ತು ಪರಿಸರ ಸ್ವಚ್ಛತೆಯಿಲ್ಲದೇ ನರಳುತ್ತಿರುವ ಈ ಪ್ರದೇಶಗಳು ಮತ್ತೊಮ್ಮೆ ಡೆಂಗ್ಯೂ ಮತ್ತು ಅಪಾಯಕಾರಿ ರೋಗ ರುಜಿನಗಳ ಭಯದಿಂದ ತತ್ತರಿಸುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಒಟ್ಟಿನಲ್ಲಿ ರೇಲ್ವೆ ಇಲಾಖೆಯು ತನ್ನ ದರ್ಪದ ಅಧಿಕಾರ ಮುಂದುವರೆಸಿರುವುದಕ್ಕೆ ಈ ಕಾಮಗಾರಿ ಕಾರಣವಾಗಿದ್ದು ಈ ಅವೈಜ್ಞಾನಿಕ ಕಾಮಗಾರಿಯನ್ನು ತಡೆಹಿಡಿಯುವವರು ಯಾರು ಮತ್ತು ಇವರ ವಿರುದ್ಧ ಕ್ರಮ ತೆಗೆದುಕೊಂಡು ಈ ಕಬ್ಬಿಣದ ತಡೆ ಗೋಡೆಗಳನ್ನು ತೆರವುಗೊಳಿಸುವವರು ಯಾರು ಎಂದು ಪಟ್ಟಣದ ನಾಗರಿಕರು ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.



ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮತ್ತು ಇತರೆ ಅಧಿಕಾರಿಗಳು ಭೇಟಿ ಮಾಡುವುದರ ಮೂಲಕ ಕಾಮಗಾರಿ ಸ್ಥಗಿತಗೊಳಿಸುವುದಕ್ಕೆ ಮತ್ತು ಯಥಾ ಸ್ಥಿತಿ ಚರಂಡಿಯನ್ನು ನಿರ್ಮಾಣ ಮಾಡಿಕೊಡಬೇಕು ಎಂದು ರೇಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರೇಲ್ವೆ ಎಂಜಿನಿಯರ್ ತಿರುಮಲಸ್ವಾಮಿ ಮಾತನಾಡಿ, ಈಗಿರುವ ಕಾಮಗಾರಿಯನ್ನು ಮಾರ್ಪಾಡು ಮಾಡುವುದರ ಮೂಲಕ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಾತನಾಡಿ ಒಂದು ವೇಳೆ ಚರಂಡಿ ನೀರು ಸರಾಗವಾಗಿ ಹರಿಯಲು ರೇಲ್ವೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪುರಸಭೆಯಿಂದ ಕ್ರಮ ತೆಗೆದುಕೊಂಡು ಈಗಾಗಲೇ ಹಾಕಿರುವ ಕಬ್ಬಿಣದ ತಡೆಗೋಡೆಗಳನ್ನು  ತೆರವುಗೊಳಿಸಲಾಗುವುದು ಎಂದರು.
ಪುರಸಭೆ ಕಿರಿಯ ಅಭಿಯಂತರ ಚನ್ನಕೇಶವ, ಆರೋಗ್ಯಾಧಿಕಾರಿ ರಮೇಶ್, ಕೃಷ್ಣಮೂರ್ತಿ ಇನ್ನಿತರ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.