ಬೆಂ'ಬೆಲೆ'ಯಲ್ಲಿ ಬತ್ತ, ರಾಗಿಯನ್ನೂ ಖರೀದಿಸಿ
ಕನ್ನಡಪ್ರಭ ವಾರ್ತೆ ಹಾಸನ ಡಿ.4
ಜಿಲ್ಲೆಯಲ್ಲಿ ತಕ್ಷಣದಿಂದಲೇ ಮೆಕ್ಕೆಜೋಳದ ಜೊತೆಗೆ ಬೆಂಬಲ ಬೆಲೆಯಲ್ಲಿ ಬತ್ತ ಮತ್ತು ರಾಗಿಯನ್ನೂ ರೈತರಿಂದ ನೇರವಾಗಿ ಖರೀದಿಸಲು ಕ್ರಮ ಕೈಗೊಳ್ಳುವಂತೆ ಖರೀದಿ ಎಜೆನ್ಸಿಗಳಿಗೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಮಂಗಳವಾರ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ, ಬತ್ತ, ರಾಗಿ ಖರೀದಿಸುವ ಕುರಿತಂತೆ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದ ಅವರು ಈಗಾಗಲೇ 1310 ರು. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಪ್ರಾರಂಭಿಸಲಾಗಿದ್ದು, ಅದಕ್ಕಾಗಿ ಏಳು ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ರೀತಿ ಭತ್ತವನ್ನು 290 ರು. ಪ್ರೋತ್ಸಾಹ ಧನದೊಂದಿಗೆ ಪ್ರತಿ ಕ್ವಿಂಟಾಲ್ಗೆ 1600 ರು. ನಂತೆ ಹಾಗೂ ರಾಗಿಯನ್ನು 300 ರು. ಪ್ರೋತ್ಸಾಹ ಧನದೊಂದಿಗೆ ಪ್ರತಿ ಕ್ವಿಂಟಾಲ್ಗೆ 1800 ರು.ಗಳಂತೆ ಖರೀದಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಬತ್ತವನ್ನು ಹಾಸನ, ಸಕಲೇಶಪುರ, ಹೊಳೆನರಸೀಪುರ, ಬೇಲೂರು ಮತ್ತು ಅರಕಲಗೂಡು ತಾಲೂಕುಗಳಲ್ಲಿ ಹಾಗೂ ರಾಗಿಯನ್ನು ಹಾಸನ, ಗಂಡಸಿ, ಜಾವಗಲ್, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುಗಳಲ್ಲಿರುವ ಕೃಷಿ ಉತ್ಪನ್ನ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ತೆರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಲ್ಲಾ ಖರೀದಿ ಕೇಂದ್ರಗಳ ಮೇಲ್ವಿಚಾರಣೆಯನ್ನು ನೋಡಿಕೊಂಡು ಕಾಲಕಾಲಕ್ಕೆ ತಮಗೆ ವರದಿ ಮಾಡುವಂತೆ ತಹಸೀಲ್ದಾರರಿಗೆ ಜಿಲಾಧಿಕಾರಿ ಸೂಚಿಸಿದರು. ಅಲ್ಲದೆ ಖರೀದಿ ಕೇಂದ್ರಗಳ ಪ್ರಾರಂಭದ ಬಗ್ಗೆ ಆಯಾಯ ಶಾಸಕರ ಗಮನಕ್ಕೆ ತರಲು ತಿಳಿಸಲಾಯಿತು.
ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಕೆಎಂಎಫ್ ಅಧಿಕಾರಿ ವಿವೇಕ್ ಮಾತನಾಡಿ, ಕೆಎಂಎಫ್ ಪ್ರತಿ ಕ್ವಿಂಟಾಲ್ಗೆ 1310 ರು. ನಂತೆ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈಗಾಗಲೇ ಜಿಲಾಡಳಿತ ವತಿಯಿಂದ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಕೆಎಂಎಫ್ ಸಿಬ್ಬಂದಿ ನಿಯೋಜಿಸಿ ಅಲ್ಲಿಂದಲೂ ಮೆಕ್ಕೆಜೋಳ ಪಡೆಯಬಹುದು ಎಂದರು.
ಬೆಂಬಲ ಬೆಲೆಯಲ್ಲಿ ಖರೀದಿಸಿದ ಉತ್ಪನ್ನಗಳಿಗೆ ಹಣ ನೀಡುವಾಗ ಅಲೆದಾಡಿಸದೇ ಶೀಘ್ರವಾಗಿ ಲಭ್ಯವಾಗುವಂತೆ ಮತ್ತು ಯಾವುದೇ ಸಂದರ್ಭದಲ್ಲೂ ಹಣ ದುರುಪಯೋಗವಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಶರತ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವರಾಜ್, ಆಹಾರ ಇಲಾಖೆಯ ಉಪ ನಿರ್ದೇಶಕ ಮಹದೇವಯ್ಯ, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಕೆ.ಎಂ.ನಾಗೇಶ್, ಮಾರ್ಕಫೆಡ್ ಅಧಿಕಾರಿ ರಂಗಸ್ವಾಮಿ, ತಹಶೀಲ್ದಾರ್, ಎಪಿಎಂಸಿ ಕಾರ್ಯದರ್ಶಿಗಳು ಮತ್ತಿತರು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

