ಲಕ್ಷ ದೀಪೋತ್ಸವ ಜ್ಞಾನದ ಸಂಕೇತ: ಕಾಗಿನೆಲೆ ಶ್ರೀ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 4
ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಎಲ್ಲರನ್ನು ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಸಂಕೇತವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಕಾಗಿನೆಲೆ ಗುರು ಪೀಠದ ನಿರಂಜನಾಂದಪುರಿ ಸ್ವಾಮೀಜಿ ಹೇಳಿದರು.
ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ನಡೆದ ಲಕ್ಷದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಕತ್ತಲೆಯನ್ನು ದೂರಮಾಡುವ ಶಕ್ತಿ ಬೆಳಕಿಗಿದೆ. ಆ ಬೆಳಕನ್ನು ಶ್ರೀಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 12 ನೇ ಶತಮಾನದಲ್ಲಿ ಬಸವಣ್ಣ, ಇವನ್ಯಾರವ, ಇವನ್ಯಾರವ ಇವನಮ್ಮವ ಇವನಮ್ಮವ ಎಂದು ಅಸಮಾನತೆಯನ್ನು ದೂರಮಾಡಲು ಹೋರಾಟ ಮಾಡಿದರೆ, ಕನಕದಾಸರು ಕುಲಕುಲವೆಂದು ಬಡಿದಾಡದಿರಿ ಆ ಕುಲದ ನೆಲೆಯೆನ್ನಾದರೂ ಬಲ್ಲೀರಾ ಎಂದು ಸಮಾಜದಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಲು ಹೋರಾಟ ಮಾಡಿದರು ಎಂದು ಹೇಳಿದರು.
ಕನಕದಾಸರು ಜಾತಿಯ ನೆಲೆಯನ್ನು ಪ್ರಶ್ನಿಸಲಿಲ್ಲ. ಕುಲದ ನೆಲೆಯನ್ನು ಮಾತ್ರ ಪ್ರಶ್ನಿಸಿದರು. ಕುಲ ಎಂದರೆ ರಕ್ತ, ರಕ್ತಕ್ಕೆ ಬೇರೆ ಬೇರೆ ಗುಂಪುಗಳಾದರೂ ಎಲ್ಲರ ರಕ್ತವೂ ಒಂದೇ. ಜಾತಿ-ಧರ್ಮಗಳನ್ನು ದೂರೀಕರಿಸಿ ನಾವೆಲ್ಲರೂ ಒಂದು ಎಂದು ಒಂದಾಗಿ ಬದುಕಿ ಬಾಳಿದಾಗ ಮಾತ್ರ ಶಾಂತಿ ನೆಮ್ಮದಿ ಸಿಗಲು ಸಾಧ್ಯ ಎಂದು ವಿಶ್ಲೇಷಿಸಿದರು.
ಸಕಲೇಶಪುರ ಆನೆಮಹಲ್ನ ಇಬ್ರಾಹಿಂ ಮುಸಲಿಯಾರ್ ಮಾತನಾಡಿ, ಜಗತ್ತಿನಲ್ಲಿ ಮನುಷ್ಯ ಉತ್ತಮನಾಗಿದ್ದಾನೆ. ಅದ್ಭುತಗಳನ್ನು ಸಾಧಿಸುತ್ತಿದ್ದರೂ ಹಣದ ವ್ಯಾಮೋಹಕ್ಕೆ ಒಳಗಾಗಿ ಬದುಕಿನಲ್ಲಿ ಶಾಂತಿ ನೆಮ್ಮದಿಗಳನ್ನು ಕಳೆದು ಕೊಳ್ಳುತ್ತಿದ್ದಾನೆ. ಧಾರ್ಮಿಕತೆಯತ್ತ ಮನಸನ್ನು ಹೊರಳಿಸಿದಾಗ ಮಾತ್ರ ಬದುಕಿನಲ್ಲಿ ನೆಮ್ಮದಿ ಸಿಗಲು ಸಾಧ್ಯ ಎಂದರು.
ಈ ನಾಡಿನಲ್ಲಿ ಜಾತಿಯ ವಿಷಬೀಜವನ್ನು ಹುಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಇದನ್ನು ಕಾಪಾಡಿಕೊಂಡು ಹೋಗಲು ಮಹಾರುಷಿಗಳು, ತಪಸ್ವಿಗಳು, ಸಿದ್ದಪುರುಷರು, ಮಹಾಮಹಿಮರು ಹುಟ್ಟಿದಂತ ಈ ಪುಣ್ಯಭೂಮಿಯಲ್ಲಿ ಮಾತ್ರ ಜಾತ್ಯತೀತತೆಯನ್ನು ಕಾಣಲು ಸಾಧ್ಯ ಎಂದರು
ಭಯೋತ್ಪಾದಕರಿಗೆ ಯಾವುದೇ ಜಾತಿಯಿಲ್ಲ: ಇಂತಹ ಪುಣ್ಯಭೂಮಿಯಲ್ಲಿ ಅಮಾಯಕರ ಮೇಲೆ ಬಾಂಬ್ದಾಳಿ ನಡೆಸಿ ರಕ್ತ ಹರಿಸುತ್ತಿಎರುವ ಭಯೋತ್ಪಾದಕರಿಗೆ ಯಾವುದೇ ಜಾತಿಯಿಲ್ಲ. ಯಾವುದೇ ಧರ್ಮವಿಲ್ಲ, ಅವರು ಇಸ್ಲಾಂ ಧರ್ಮದವರಲ್ಲ. ಅವರು ಭಯೋತ್ಪಾದಕ ಜಾತಿ ಇಂತಹವರು ಮಾಡುವ ಹೀನಕೃತ್ಯಗಳಿಗೆ ದೇವರು ಕೂಡಾ ಕ್ಷಮಿಸಲಾರ ಎಂದ ಅವರು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುವಂತಹ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಕಂಡುವರುತ್ತಿದ್ದು ಮಾತಾಪಿತರುಗಳಿಗೆ ಬೇಕಿರುವುದು ಅನ್ನ ಅಲ್ಲ. ನಿಮ್ಮ ಪ್ರೀತಿ ವಿಶ್ವಾಸ ಅದನ್ನು ನೀಡುವ ಮೂಲಕ ನಿಮ್ಮ ತಂದೆ ತಾಯಿ ಋಣ ತೀರಿಸಬೇಕು ಎಂದರು.
ಬ್ರಹ್ಮಕುಮಾರಿ ಸಮಾಜದ ಭಾರತಿ ಅಕ್ಕ ಆಶೀರ್ವಚನ ನೀಡಿ ಬಸವಾದಿ ಶಿವಶರಣರು, ಕನಕದಾಸ, ಪುರಂದರ ದಾಸರು ಮಾನವಕುಲದ ಲೇಸನ್ನೆ ಬಯಸಿದ್ದಾರೆ. ಆದರೆ ಮನುಷ್ಯ ಇಂದು ಜಾತಿ ಸಂಕೋಲೆಗಳ ನಡುವೆ ಸಿಕ್ಕು ನರಳುತ್ತಿರುವುದು ವಿಷಾದನೀಯ ಸಂಗತಿ. ಇದರಿಂದ ಪ್ರತಿಯೊಬ್ಬರು ಹೊರ ಬಂದಾಗ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದು ನುಡಿದರು.
ಆಖಿಲ ಭಾರತ ಏಕತಾ ಆಂದೋಲನದ ಅಧ್ಯಕ್ಷ ಮಾಹದೇವ್ ಹೊರಟ್ಟಿ, ಮಾತನಾಡಿದರು. ಶ್ರೀಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಬೂದಿಹಾಳ್ ಮಠದ ರಾಜಶೇಖರಸ್ವಾಮೀಜಿ, ಹೊನವಳ್ಳಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಸ ಮಠದ ಜ್ಷಾನ ಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಕೇದಿಗೆಮಠ ಕೋಳಗುಂದದ ಜಯಚಂದ್ರಶೇಖರ ಸ್ವಾಮೀಜಿ, ಮಾಡಾಳಿನ ರುದ್ರಮುನಿ ಸ್ವಾಮೀಜಿ, ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.
ಇದೇ ವೇಳೆ ಸಮಾಜ ಸೇವಕರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಎಚ್.ಪಿ.ಬಸವಲಿಂಗಪ್ಪ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

