ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆಗೆ ಒತ್ತು ನೀಡಿ
ಕ.ಪ್ರ.ವಾರ್ತೆ ಹಾಸನ ಡಿ.4
ಹಾಸನ -ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ, ಸುರಕ್ಷತಾ ಕ್ರಮಗಳು ಮತ್ತು ಸರ್ವೀಸ್ ರಸ್ತೆಗಳ ನಿರ್ಮಾಣದ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಶೀಘ್ರವೇ ಲೋಪಗಳನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿರುವ ಮೂಲ ಸೌಕರ್ಯಗಳ ಕೊರತೆ ಅಡಚಣೆ ಬಗ್ಗೆ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಟೋಲ್ ಸಂಗ್ರಹಕ್ಕೆ ಮುನ್ನ ಕೆಲವೊಂದು ಸಾರ್ವಜನಿಕ ಬದ್ಧತೆಗಳನ್ನು ಪ್ರದರ್ಶಿಸಬೇಕು. ಸುರಕ್ಷತೆಗೆ ಆದ್ಯತೆ ನೀಡಿ ಕ್ರಮ ವಹಿಸಬೇಕು. ಸ್ಥಳೀಯ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಸರಿಪಡಿಸಬೇಕಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಸರ್ವೀಸ್ ರೋಡ್ಗಳ ಕೊರತೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ತಾಂತ್ರಿಕ ಸಮಸ್ಯೆಗಳಿಂದ ಜನಸಾಮಾನ್ಯರ ಜೀವಕ್ಕೆ ಹಾನಿ ಆಗಬಾರದು. ಸರ್ವೀಸ್ ರೋಡ್ಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಪ್ರಾಧಿಕಾರ ಮತ್ತು ಗುತ್ತಿಗೆ ಪಡೆದಿರುವ ಸಂಸ್ಥೆ ಹೊಣೆ ಹೊರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತಪ್ಪುಗಳನ್ನು ಸರಿಪಡಿಸಿ ಎಂದು ಡಿಸಿ ನಿರ್ದೇಶನ ನೀಡಿದರು.
ಸಣ್ಣಪುಟ್ಟ ವಿಚಾರಗಳ ಬಗ್ಗೆಯೂ ಗಮನ: ಯಾವುದೇ ಒಂದು ಯೋಜನೆ ರೂಪಿಸುವುದು ಸಾರ್ವಜನಿಕರ ಅನುಕೂಲಕ್ಕಾಗಿ. ಅದರ ಅನುಷ್ಠಾನಕ್ಕೆ ಮುನ್ನವೇ ಎಲ್ಲಾ ಅವಶ್ಯಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲಾಗುತ್ತಿದೆ. ರಸ್ತೆಗಳು ಮಾತ್ರ ಗುಣಮಟ್ಟದಿಂದ ಕೂಡಿದ್ದರೆ ಸಾಲದು. ಇತರ ಸಣ್ಣಪುಟ್ಟ ವಿಚಾರಗಳ ಬಗ್ಗೆಯೂ ಗಮನ ಹರಿಸಿ ಬಗೆಹರಿಸಬೇಕು ಎಂದರು. ವಿಸ್ತೃತಾ ಯೋಜನಾ ವರದಿ, ಕರಾರು ಪತ್ರ, ಟೆಂಡರ್ ಸೂಚನೆಗಳಲ್ಲಿ ಇರುವಂತೆ ಯೋಜನೆ ಅನುಷ್ಠಾನವಾಗಬೇಕು. ರಸ್ತೆ ಶೇಕಡ 77ರಷ್ಟು ಉದ್ದ ಮುಕ್ತಾಯಗೊಂಡಷ್ಟೇ ಪ್ರಮುಖವಾಗಿ ಎಲ್ಲಾ ಅಗತ್ಯ ಪೂರಕ ಸೌಕರ್ಯಗಳೂ ಪೂರೈಕೆಯಾಗಬೇಕು ಎಂದು ಅವರು ತಾಕೀತು ಮಾಡಿದರು.
ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಕೆಗೆ ನಿಯೋಜಿಸಿರುವ ಆಂಬುಲೆನ್ಸ್ ಸಮರ್ಪಕವಾಗಿ ಸೇವೆಗೆ ಲಭ್ಯವಾಗಬೇಕು. ಭದ್ರತಾ ಸಿಬ್ಬಂದಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತೆ ವರ್ತಿಸಬಾರದು. ಅಗತ್ಯವಿರುವೆಡೆಗಳಲ್ಲಿ ಸಂವಹನ ಮಾಡುವ, ಮಾಹಿತಿ ನೀಡುವ ಸೂಚನೆಗಳನ್ನು ತಿಳಿಸುವ ಫಲಕಗಳನ್ನು ಅಳವಡಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಎಲ್.ಅಂಡ್.ಟಿ.ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು.
ಹ್ಯಾಂಡ್ಪೋಸ್ಟ್ ಬಳಿ ಅಂಡರ್ಪಾಸ್: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸುರೇಂದ್ರ ಕುಮಾರ್ ಮಾತನಾಡಿ, ಜಿಲ್ಲೆಯ ನುಗ್ಗೇಹಳ್ಳಿ ಕ್ರಾಸ್ ಹಾಗೂ ಬಾಗೂರು ಹ್ಯಾಂಡ್ಪೋಸ್ಟ್ ಬಳಿ ಅಂಡರ್ಪಾಸ್ ನಿರ್ಮಾಣ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಜಿಲ್ಲಾಧಿಕಾರಿ ನೇಮಿಸುವ ಪರಿಶೀಲನಾ ತಂಡದೊಂದಿಗೆ ಮಾರ್ಗದಲ್ಲಿ ಸಮೀಕ್ಷೆ ನಡೆಸಿ ಸೂಚಿಸಲಾಗುವ ಮಾರ್ಪಾಡುಗಳನ್ನು ಮಾಡಲು ಗುತ್ತಿಗೆ ಪಡೆದಿರುವ ಸಂಸ್ಥೆಗೆ ನಿರ್ದೇಶನ ನೀಡಲಾಗುವುದು ಎಂದು ನುಡಿದರು.
ಶಾಂತಿಗ್ರಾಮದ ಬಳಿ ಚೆಕ್ಪೋಸ್ಟ್ನಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿಗೆ ತರಬೇತಿ ಅಗತ್ಯವಿದೆ ಅದಕ್ಕೆ ಸೂಕ್ತ ಕ್ರಮ ವಹಿಸಲು ಸಹ ತಿಳಿಸಲಾಗುವುದು ಎಂದು ಅವರು ಹೇಳಿದರು
ಎರಡು ತಿಂಗಳಲ್ಲಿ ಮುಕ್ತಾಯ: ಎಲ್.ಅಂಡ್ ಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಶೀಥಲ್ಲ್ಯಾನ್ ಭಾಗ್ ಸಭೆಗೆ ಮಾಹಿತಿ ನೀಡಿ ಹಾಸನ ಜಿಲ್ಲೆ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾಡಳಿತ ಸೂಚಿಸುವ ಅಗತ್ಯ ಮಾರ್ಪಾಡುಗಳನ್ನು ಶೀಘ್ರವೇ ಮಾಡಲಾಗುವುದು. ಮಾರ್ಗಮಧ್ಯೆ-72 ಸರ್ವೀಸ್ ರಸ್ತೆಗಳ ನಿರ್ಮಾಣಕ್ಕೆ ಯೋಜಿಸಲಾಗಿದ್ದು ಅದರಲ್ಲಿ ಈಗಾಗಲೇ 42 ರಸ್ತೆಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದವುಗಳನ್ನು 2 ತಿಂಗಳಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ರಾಮಚಂದ್ರ, ತಹಸೀಲ್ದಾರ್ ಮಂಜುನಾಥ್, ವಿಶೇಷ ಭೂ ಸ್ವಾಧೀನಾಧಿಕಾರಿ ಮಲ್ಲೇಶಯ್ಯ ಯೋಜನಾ ವ್ಯವಸ್ಥಾಪಕ ಶಿರಿಶ್ ಗಂಗಾಧರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

