ಹಾಸನ

ಗೋಮಾಳ ತೆರವಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಹಾಸನ   ಡಿ 5
ತಾಲೂಕಿನ ದೊಡ್ಡಬಸವನಹಳ್ಳಿ ಗ್ರಾಮದ ಗೋಮಾಳ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದು ಖಂಡನೀಯ, ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ 12 ಗ್ರಾಮಗಳ ಗ್ರಾಮಸ್ಥರು ಗುರುವಾರ ಜಾನುವಾರಗೊಳಿಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಿಡುವಂತೆ ಗ್ರಾಮಸ್ಥರು ಪಟ್ಟು ಹಿಡಿದು, ನಂತರ ಒಳ ಪ್ರವೇಶಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಗ್ರಾಮಸ್ಥರನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಜೊತೆಗೆ ತಹಸೀಲ್ದಾರ್ಮ್‌ಂಜುನಾಥಥ್ವಿರುದ್ಧ ವಾಗ್ವಾದ ಇಳಿದರು.
ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ನಗರದ ಹೊರವಲಯದ ದೊಡ್ಡಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ.105ರಲ್ಲಿ 12.29 ಎಕರೆ ಕೆರೆ ಹಾಗೂ ಶ್ರೀರಂಗನಾಥಸ್ವಾಮಿಯ ದೇವಸ್ಥಾನವಿದ್ದು, ಇದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯೋಗವಾಗಿತ್ತು. ಜಾನುವಾರು ನೀರು ಕುಡಿಯಲು ಈ ಕೆರೆಯನ್ನೇ ಅವಲಂಭಿಸಿದ್ದವು. ಇಲ್ಲಿರುವ ದೇವಸ್ಥಾನ 300 ವರ್ಷಗಳಷ್ಟು ಹಳೆಯದಾಗಿದ್ದು, ಇತಿಹಾಸ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವಾಲಯದಲ್ಲಿ ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು.
ಈ ಸರ್ವೆ ನಂ.105ರಲ್ಲಿ 54.34 ಎಕರೆ ಜಾಗದಲ್ಲಿ ಕೆಐಎಡಿಬಿ 49.26 ಎಕರೆ ಭೂಮಿಯನ್ನು ನಾನಾ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಂಡಿದ್ದಾರೆ. 1.8 ಎಕರೆ ಜಾಗ ಆ ಸ್ಥಳದಲ್ಲಿರುವ ಪುರಾತನ ರಂಗನಾಥಸ್ವಾಮಿ ದೇವಾಯಕ್ಕೆ ಸೇರಿದ್ದಾಗಿದ್ದಾಗಿದೆ. ಆದರೆ ಪವನ ಪುತ್ರ ರೆಸಾರ್ಟ್ ನವರು ಉಳಿದ 12.29 ಎಕರೆ ಗೋಮಾಳ ಜಾಗವನ್ನು ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಜಾನುವಾರುಗಳನ್ನು ಮೇಯಿಸಲು ಜಾಗವಿಲ್ಲದೇ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾವಾಗಿದೆ. ವಿಶಾಲವಾದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಿಗೆ ವಂಚನೆ: ಹಲವಾರು ವರ್ಷಗಳಿಂದ ಗ್ರಾಮದ ಜಾನುವಾರುಗಳಿಗೆ ಮೇವಿಗೆ ಅನುಕೂಲವಾಗಿತ್ತು. ಅಲ್ಲದೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷವು ಜಾತ್ರೆ ನಡೆಸಲಾಗುತ್ತಿದೆ. ಸಾವಿರಾರು ಜನ ಜಾತ್ರೆಯಲ್ಲಿ ಭಾಗವಹಿಸಿ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ 12.20 ಎಕರೆ ಪ್ರದೇಶದ ಗ್ರಾಮಸ್ಥರ ಉಪಯೋಗಕ್ಕೆ ಇತ್ತು. ಆದರೆ ಪವನಪುತ್ರ ರೆಸಾರ್ಟ್ ನ ಸಿ.ಪಿ. ದಿವಾಕರ್ ಅವರು ಕಾನೂನು ಬಾಹಿರವಾಗಿ ಕೆಐಎಡಿಬಿಯಿಂದ ಈ ಜಮೀನನ್ನು ನೀಡಿದೆ ಎಂದು ಹೇಳಿ ಈ ಭಾಗದ ಗ್ರಾಮಸ್ಥರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕ್ರಮಕೈಗೊಳ್ಳಿ: ಮಾ. 8, 2012ರಲ್ಲಿ ರೆಸಾರ್ಟ್‌ನವರು ಏಕಾಏಕಿ ಬಂದು ಜೆಸಿಬಿ ಯಂತ್ರದ ಮೂಲಕ ಇಲ್ಲಿದ್ದ ಕೆರೆಯನ್ನು ಹೊಡೆದು ಹಾಕಿ ಹಾಳುಮಾಡಿದ್ದಾರೆ. ಜೊತೆಗೆ ಇಲ್ಲಿದ್ದಂತಹ ಮರಗಳು ನಾಶವಾಗಿವೆ. ರೆಸಾರ್ಟ್ ನ ಮಾಲೀಕರು ಇಲ್ಲಿ ರೆಸಾರ್ಟ್ ನಿರ್ಮಿಸುವುದಾಗಿ ಹೇಳಿ ಕಾನೂನು ಬಾಹೀರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ರೀತಿಯ ಕಾನೂನು ಬಾಹಿರ ಕೃತ್ಯ ಎಸಗುತ್ತಿವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒತ್ತುವರಿ ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವುದ್ದರು, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ಭೂಮಿಯ ಪಹಣಿ ಪಡೆದಾಗ ಗೋಮಾಳದ ಹೆಸರಿನಲ್ಲಿ 12.29 ಎಕರೆ ಜಾಗ ಇರುವುದಾಗಿ ತಿಳಿದು ಬಂದಿದ್ದು, ಕೆಐಎಡಿಬಿ ಯ ಕೆಲವು ಅಧಿಕಾರಿಗಳು ರೆಸಾರ್ ಮಾಲೀಕರೊಂದಿಗೆ ಶಾಮೀಲಾಗಿ ಭೂಮಾಫಿಯ ನಡೆಸುತ್ತಿದ್ದಾರೆ. ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಭರವಸೆಗಳನ್ನು ಮಾತ್ರ ನೀಡಿ, ಗ್ರಾಮಸ್ಥರಿಗೆ ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಿಗಳು ಹಾಗೂ ಕೆಐಎಡಿಬಿ ಅವರು ಗ್ರಾಮಸ್ಥರ ಅಭಿಪ್ರಾಯವನ್ನು ಪಡೆಯದೇ ಗ್ರಾಮದ ಉಪಯೋಗಕ್ಕೆ ಮೀಸಲಾಗಿರುವ ಈ ಜಾಗದ ಮೂಲ ದಾಖಲಾತಿಗಳನ್ನು ತಿದ್ದುಪಡಿ ಮಾಡಿದ್ದಾರೆ. ಈ ಕೃತ್ಯದಿಂದ ಗ್ರಾಮದ ಜಾಗ ನಾಶವಾಗಿದ್ದು, ಇದರಿಂದ ತೊಂದರೆ ಉಂಟಾಗಿದೆ. ಜೊತೆಗೆ ಪವನಪುತ್ರ ರೆಸಾರ್ಟ್ ಮಾಲೀಕರು ಹಿಂದು ಸಂಸ್ಕೃತಿಗೆ ವಿರೋಧವಾದಂತಹ ಪ್ಯಾಷನೆ ಶೋ ನಡೆಸಿದ್ದು, ಇದನ್ನು ಗ್ರಾಮಸ್ಥರೆಲ್ಲ ತಡೆದಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಗ್ರಾಮಸ್ಥರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ದೂರಿದರು.
ಕಿಡಿ: ಸರ್ಕಾರ ಕೆರೆ ಕಟ್ಟೆಗಳನ್ನು ಉಳಿಸಿ ಅಭಿವೃದ್ಧಿ ಪಡಿಸುತ್ತಿರುವ ಸಂದರ್ಭದಲ್ಲಿ ಇಲ್ಲಿ ಕೆರೆಗಳನ್ನು ನಾಶಪಡಿಸಲಾಗುತ್ತಿದೆ. ಕೆರೆಕಟ್ಟೆಗಳನ್ನು ನಾಶಪಡಿಸದಂತೆ ನಿರ್ದೇಶನವಿದ್ದರೂ ಕೂಡ ಅದನ್ನೆಲ್ಲ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕೆಐಎಡಿಬಿ ಮತ್ತು ರೆಸಾರ್ಟ್ ಮಾಲೀಕರು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಆದ್ದರಿಂದ ಪವನಪುತ್ರ ರೆಸಾರ್ಟ್ ಮತ್ತು ಕೆಐಎಡಿಬಿ ವಿರುದ್ದ ದೂರನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಜಮೀನನ್ನು ಗ್ರಾಮಕ್ಕೆ ಉಳಿಸಿಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ದೇವೇಗೌಡ, ಪಟೇಲಲ್ಶಾಮಣ್ಣ, ಮಧುಚಂದ್ರ, ಸ್ವಾಮಿ, ಮಂಜೇಗೌಡ, ಕೆಂಕೇಗೌಡ, ಗಿಡ್ಡಮ್ಮ, ಲಕ್ಷ್ಮಮ್ಮ, ಜಯಮ್ಮ, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್, ರಂಗನಾಥಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಮಧುಚಂದ್ರ, ಬಸವನಹಳ್ಳಿ ಗ್ರಾಮಸ್ಥರಾದ ಬಾಬು, ಧರ್ಮಶೇಖರ್, ಮಂಜುನಾಥ್, ಸೋಮಶೇಖರ್, ರಂಗಣ್ಣ, ರಾಜು, ಗೌರಮ್ಮ, ನಾಗಮ್ಮ, ಲಕ್ಷ್ಮಮ್ಮ, ಸರೋಜ ಹಾಗೂ ಇತರರು ಇದ್ದರು.
ಪೊಲೀಸರೊಂದಿಗೆ ವಾಗ್ವಾದ
ಗ್ರಾಮಸ್ಥರು ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯನ್ನು ಪ್ರವೇಶಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲಿ ಒದಗಿಸಿದ್ದ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಪೊಲೀಸರು ಜಾನುವಾರುಗಳ ಸಮೇತ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸದ ಕಾರಣ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸಲು ಮೂರು ಕಡೆಯಿಂದ ಪ್ರವೇಶ ದ್ವಾರದಿಂದ ನುಗ್ಗಲು ಯತ್ನಿಸಿದರೂ ಸಹ ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಜೊತೆಗೆ ಗ್ರಾಮದ ಗೋಮಾಳದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿರುವಂತವರು ಬೇಲಿ ಹಾಗೂ ಬೋರ್ಡ್‌ಗಳನ್ನು ಹಾಕಿಕೊಂಡಿದ್ದು, ಈ ಕೂಡಲೇ ಅದನ್ನು ತೆರೆವುಗೊಳಿಸಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು. ಅಲ್ಲಿವರೆಗೂ ನಾವು ಜಿಲ್ಲಾಧಿಕಾರಿ ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಹೊಡೆಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳದಲ್ಲಿ ಡಿವೈಎಸ್ಪಿ ಸೇರಿದಂತೆ ಇನ್ಸ್ಪೆಕ್ಟರ್, ಕೆ.ಆರ್.ಪುರಂ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆಯ ಪಿಎಸ್‌ಐ ಗಳು ವಾತಾವರಣವನ್ನು ತಿಳಿಸಿದರು.
ಜಿಲ್ಲಾಧಿಕಾರಿ ಅನ್ಬುಕುಮಾರ್ ಭರವಸೆ

ಜಾಗ ಒತ್ತುವರಿ ಆಗಿರುವ ಬಗ್ಗೆ 2 ದಿನಗಳಿಂದ ಮಾಹಿತಿ ತಿಳಿದಿದ್ದು, ಈಕೂಡಲೇ ಒತ್ತುವರಿ ಮಾಡುವವರಿಗೆ ನೋಟಿಸ್ ನೀಡಿ, ಮುಂದಿನ ವಾರ ಅಧಿಕಾರಿಗಳೊಂದಿಗೆ ಅಲ್ಲಿಗೆ ಬಂದು ಪರಿಶೀಲನೆ ನಡೆಸಲಾಗುತ್ತದೆ. ಈ ಹಿಂದೆ ಮಾಡಿರುವ ಸರ್ವೇ ಸರಿಯಾಗಿದೆಯೇ ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸಲಾಗುತ್ತದೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.