ನೇರವಾಗಿ ಮೆಕ್ಕೆಜೋಳ ಮಾರಾಟ ಮಾಡಿ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ. 6
ರೈತರು ತಾವು ಬೆಲೆದ ಮುಸುಕಿನ ಜೋಳದ ಮಾರಾಟಕ್ಕೆ ಯಾವುದೇ ಮದ್ಯವರ್ತಿಗಳನ್ನು ಬಳಸಿಕೊಳ್ಳದೆ ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕೆಂದು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಚ್.ಎಸ್. ಸುದರ್ಶನ್ ಅವರು ತಾಲೂಕಿನ ರೈತರಿಗೆ ಮನವಿ ಮಾಡಿದರು.
ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮುಸುಕಿನ ಜೋಳ ಖರೀದಿ ಕೇಂದ್ರ ಸಮಾರಂಭವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಮುಸುಕಿನ ಜೋಳಕ್ಕೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ದೊರಕದೆ ಹೋಗಿರುವುದನ್ನು ಪರಿಗಣಿಸಿದ ರಾಜ್ಯ ಸರಕಾರ ರೈತರು ಬೆಳೆದ ಮುಸುಕಿನ ಜೋಳವನ್ನು ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಿರುವುದು ರೈತರು ಬದುಕಿಗೆ ಆಸರೆಯಾಗಲಿದೆ ಎಂದು ನುಡಿದರು.
ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರವನ್ನು ಒಂದು ತಿಂಗಳು ಮುಂಚೆಯೇ ಆರಂಭಿಸಿದ್ದಲ್ಲಿ ರೈತರಿಗೆ ಅಲ್ಪಸ್ವಲ್ಪ ಬೆಂಬಲ ದೊರಕುತ್ತಿತ್ತೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಯೋಜನೆ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೀಸಲಾಗಿದ್ದು ಮುಸುಕಿನ ಜೋಳವನ್ನು ಬೆಂಬಲ ಬೆಲೆಗೆ ಮಾರಾಟ ಮಾಡುವ ಪ್ರತಿ ರೈತ ತಾವು ತರುವ ಗೋಣಿ ಚೀಲ ಉತ್ತಮ ಗುಣಮಟ್ಟದಲ್ಲಿ ತುಂಬಿ ತರಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಹಾಜರಿದ್ದ ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ಅವರು ಮಾತನಾಡಿ, ರಾಜ್ಯ ಸರ್ಕಾರ ಪ್ರಸಕ್ತ ಮುಸುಕಿನ ಜೋಳ ಮುಂಗಾರು ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಮುಸುಕಿನ ಜೋಳವನ್ನು ರೈತರಿಂದ ಪ್ರತಿ ಕ್ವಿಂಟಾಲ್ಗೆ ರು. 1310 ಘೋಷಿಸಿದೆ. ರೈತರು ತರುವ ಮುಸುಕಿನ ಜೋಳವನ್ನು ಖರೀದಿಸುವ ಸಲುವಾಗಿ ಅಧಿಕಾರಿಗಳು ಸಂತೆ ದಿನ ಮತ್ತು ಭಾನುವಾರವನ್ನು ಹೊರತು ಪಡಿಸಿದ ವಾರದ ಐದು ದಿನಗಳ ಕಾಲ ರೈತರಿಂದ ಜೋಳವನ್ನು ನೇರವಾಗಿ ಖರೀದಿಸಲಾಗುವುದು ಎಂದರಲ್ಲದೇ, ಖರೀದಿಸಿದ ಜೋಳದ ಹಣವನ್ನು ರೈತರ ಬ್ಯಾಂಕಿನ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುವುದು ಎಂದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಮುಸುಕಿನಜೋಳದ ಬೆಳೆ 950 ರು ನಿಂದ 1 ಸಾವಿರದಷ್ಟಿದೆ. ಆದರೆ ರಾಜ್ಯ ಸರ್ಕಾರಿ ಬೆಂಬಲ ಬೆಲೆಯನ್ನು 1310ರೂ ಘೋಷಣೆ ಮಾಡಿರುವುದರಿಂದ ಮುಸುಕಿನ ಜೋಳವನ್ನು ಬೆಳೆದ ರೈತನಿಗೆ ಪ್ರತಿ ಕ್ವಿಂಟಾಲ್ಗೆ ಸುಮಾರು ರು. 300 ಅಧಿಕ ಬೆಲೆ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಮಹೇಶ್ ಮಾಹಿತಿ ನೀಡಿ, ರೈತರು ಮೊದಲು ತಾವು ಬೆಳೆದ ಜೋಳವನ್ನು ಖರೀದಿ ಸ್ಥಾನಕ್ಕೆ ತಂದು ಆಲ್ಲಿನ ಅಧಿಕಾರಿಗಳಿಗೆ ಗುಣಮಟ್ಟದ ರಸೀದಿಯನ್ನು ನೀಡಲಾಗುವುದು. ತಾವು ಪಡೆದ ಟೋಕನ್ ಅಥವಾ ರಸೀದಿಯನ್ನು ನಿಗದಿತ ದಿನಾಂಕದಂದು ಕೃಷಿ ಮಾರುಕಟ್ಟೆಯಲ್ಲಿ ನೀಡುವಂತೆ ಕೋರಿದರು.
ಈ ಖರೀದಿಯನ್ನು ಜಿಲ್ಲಾ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಈ ಕೇಂದ್ರವನ್ನು ಡಿಸೆಂಬರ್ 1 ರಿಂದ ಮುಂದಿನ ಮಾ. 30ರವರೆಗೆ ಖರೀದಿಸಲು ರಾಜ್ಯ ಸರ್ಕಾರ ನಿಗದಿಗೊಳಿಸಿದೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ, ಸಹಕಾರ ಮಹಾಮಂಡಲದ ಅಧಿಕಾರಿ ಹನುಮಂತನಾಯಕ್, ಟಿಎಪಿಸಿಎಂಎಸ್ನ ಮಂಜುನಾಥ್, ಕೃಷಿ ಇಲಾಖೆಯ ಎಸ್.ಡಿ. ದೇವರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

