ಹೆರಿಗೆಗೂ ಮುನ್ನ ಲಿಂಗ ಪತ್ತೆ ಅಪರಾಧ
ಕ.ಪ್ರ.ವಾರ್ತೆ ಹಾಸನ ಡಿ 6
ಹೆರಿಗೆಗೂ ಮುನ್ನ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅದನ್ನು ತಡೆಗಟ್ಟಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಹೇಳಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯಿದೆಯ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಂಡು ಮತ್ತು ಹೆಣ್ಣಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಹೆರಿಗೆಯ ಮುನ್ನ ಲಿಂಗ ಪತ್ತೆ ಮಾಡುವ ತಂತ್ರ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದರು.
ಪುರುಷ ಮತ್ತು ಮಹಿಳೆಯಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆರಿಗೆ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರ-1994(ದುರ್ಬಳಕೆ ಮತ್ತು ತಡೆ) ಕಾಯಿದೆಯನ್ನು ಜ.1, 1996ರಿಂದ ಜಾರಿಗೆ ತಂದಿದೆ. ಈ ಕಾಯಿದೆ ಬಂದ ಮೇಲೆ ಲಿಂಗಪತ್ತೆ ಮಾಡುವ ಉದ್ದೇಶದಿಂದ ಭ್ರೂಣವನ್ನು ಸ್ಕ್ಯಾನಿಂಗ್ ಮಾಡುವ ಮೂಲಕ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಬೇಕು ಎಂದು ಹೇಳಿದರು.
ಅನಿವಾರ್ಯ ಸಂದರ್ಭಗಳಲ್ಲಿ ಸರಿ: ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಭ್ರೂಣವನ್ನು ಸ್ಕ್ಯಾನಿಂಗ್ ಮಾಡಬಹುದು. ಅಂತಹ ಸಂದರ್ಭಗಳಲ್ಲಿ ಯಾವುದೆಂದರೆ ಕ್ರೋಮೋಸೋಮಲ್ ಅಬ್ ನಾರ್ಮಾಲಿಟೀಸ್, ಸೆಕ್ಸ್ ಲಿಂಕ್ಡ್ ಜೆನೆಟಿಕ್ ಡಿಸೀಸ್, ಹೆಮೋಗ್ಲೋಬಿನೇಥೀಸ್, ಜೆನೆಟಿಕ್ ಮೆಟಬಾಲಿಕ್ ಡಿಸೀಸಸ್, ಕಾಂಜಿನೈಟಲ್ ಅನಾಮಲೀಸ್ಗಳಾಗಿರುತ್ತದೆ. ಈ ಸಂದರ್ಭಗಳನ್ನು ಹೊರತುಪಡಿಸಿ ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗುತ್ತದೆ ಎಂದರು.
ಕಾನೂನು ಉಲ್ಲಂಘಿಸಿ ಹಣದ ಆಸೆ ವೈದ್ಯರು ಭ್ರೂಣ ಪತ್ತೆ ಮಾಡುವುದು ಹಾಗೂ ಮಾಡಿಸುವುದು ಸಹ ಅಪರಾಧವಾಗಿದ್ದು, ಮೊದಲ ಅಪರಾಧಕ್ಕೆ ದಂಡ ಮತ್ತು ಜೈಲು ಶಿಕ್ಷೆ. ಮತ್ತೆ ಎರಡನೇ ಬಾರಿ ಈ ಕಾಯಿದೆಯನ್ನು ಉಲ್ಲಂಘಿಸಿದವರಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗುತ್ತದೆ. ಮಹಿಳೆಯ, ಗಂಡ, ಅತ್ತೆ, ಮಾವ ಹಾಗೂ ಇತರೆ ಸಂಬಂಧಿಕರು ಭ್ರೂಣ ಲಿಂಗ ಪತ್ತೆ ಕ್ರಿಯೆಗೆ ಪ್ರೋತ್ಸಾಹ ನೀಡಿದರೆ ಅಂತವರು ಸಹ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.
ಮಾಹಿತಿ ನೀಡಬೇಕು: ಈ ಕಾಯ್ದೆಯನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆಯನ್ನು ನಾನಾ ಅಧಿಕಾರಿಗಳು ಹೊಂದಿದ್ದಾರೆ. ಜೆನೆಟಿಕ್ ಕ್ಲಿನಿಕ್, ಪ್ರಯೋಗಾಲಯ, ಸಮಾಲೋಚನ ಕೇಂದ್ರಗಳು, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದೆ ಇದ್ದಲ್ಲಿ ಅದು ಕಾನೂನು ಬಾಹಿರವಾಗಲಿದೆ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಲಿಂಗಾನುಪಾತ ಹೆಚ್ಚು: ದೇಶದಲ್ಲಿ 1991ರಲ್ಲಿ 1 ಸಾವಿರ ಪುರುಷರಿಗೆ 972 ಮಹಿಳೆಯರು ಇದ್ದರು. 2001ರಲ್ಲಿ ಮಹಿಳೆಯರ ಪ್ರಮಾಣ 942ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಮಹಿಳೆಯರ ಪ್ರಮಾಣ 963ಕ್ಕೆ ಇಳಿದಿದೆ. ಆದರಲ್ಲೂ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಲಿಂಗಾನುಪಾತ ಹೆಚ್ಚಾಗಿದೆ ಎಂದರು.
ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಈ ಪ್ರವೃತ್ತಿ ದೇಶದ ಇತರೆ ರಾಜ್ಯಗಳಿಗೂ ವ್ಯಾಪಿರಿಸುವುದ್ದು, 2001ರ ಜನಗಣತಿಯಿಂದ ವ್ಯಕ್ತವಾಗಿದ್ದು, ಇದೊಂದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಈ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಸಮಾಜದ ಸುವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಇಂತಹ ಪ್ರವೃತ್ತಿಯನ್ನು ತಡೆಯಲು ವೈದ್ಯರು, ತಂತ್ರಜ್ಞರು ಹಾಗೂ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಎ. ಮುಸ್ತಫ ಹುಸೇನ್, ವೈದ್ಯ ಗುರುರಾಜಜ್ಹೆಬ್ಬಾರ್, ಪಿಸಿ ಮತ್ತು ಪಿಎನ್ ಡಿಟಿ ಉಪನಿರ್ದೇಶಕ ಡಾ.ರಾಹತ್-ಎ-ಜಾನ್ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್.ಶ್ಯಾಮಲದೇವಿ, ಫಾಗ್ಸಿ ಅಧ್ಯಕ್ಷೆ ಡಾ.ಲೀಲಾವತಿ ಜನಾರ್ಧನ್, ರಾಜ್ಯ ಪಿಸಿ ಮತ್ತು ಪಿ ಎನ್ ಡಿ ಟಿ ಕಾನೂನು ಸಲಹೆಗಾರ್ತಿ ರಾಜೇಶ್ವರಿ ದೇವಿ, ಆರ್ಸಿ ಎಚ್ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್, ಜಿಲ್ಲಾ ಪಿಸಿ ಮತ್ತು ಪಿಎನ್ಡಿಟಿ ಸಲಹಾ ಮಂಡಳಿ ಅಧ್ಯಕ್ಷ ಡಾ. ಲಕ್ಷ್ಮೀಕಾಂತ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

