ಹಾಸನ

ಗೋಮಾಳಕ್ಕೆ ರಸ್ತೆ ತಡೆ ಎಚ್ಚರಿಕೆ

Published On :

ಕನ್ನಡಪ್ರಭ ವಾರ್ತೆ, ಹಾಸನ, ಡಿ 7
ಜಿಲ್ಲಾಧಿಕಾರಿಗಳು 10 ದಿನದೊಳಗೆ ಬಂದು ಸ್ಥಳ ವೀಕ್ಷಣೆ ಮಾಡಿ ಸರ್ಕಾರಿ ಗೋಮಾಳವನ್ನು ಗ್ರಾಮಕ್ಕೆ ಉಳಿಸಿಕೊಡದಿದ್ದರೆ ಕೆಐಎಡಿಬಿ ಕಚೇರಿ ಮುಂದೆ ಜಾನುವಾರೊಂದಿಗೆ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸುವುದಾಗಿ ದೊಡ್ಡಬಸವನಹಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾಗನೆಕೆರೆ ಹೇಮಂತ್, ನಗರದ ಕೈಗಾರಿಕಾ ಪ್ರದೇಶವಾದ ದೊಡ್ಡಬಸವನಹಳ್ಳಿಗೆ ಸೇರಿಕೊಂಡಿರುವ ಸರ್ವೆ ನಂ.105ರಲ್ಲಿ ಇರುವ 12.29 ಎಕರೆ ಗೋಮಾಳ ಜಾಗಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಆ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ಗ್ರಾಮಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ನಾವು ರೆಸಾರ್ಟ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಮೂಲ ದಾಖಲೆಯಲ್ಲಿ ಇರುವಂತೆ 12.29 ಎಕರೆ ಜಾಗ ಗೋಮಾಳಕ್ಕೆ ಸೇರಿದ್ದು, ಅದನ್ನು ಬಿಟ್ಟುಕೊಡುವಂತೆ ಕೆಐಎಡಿಬಿಗೆ ಒತ್ತಾಯಿಸುತ್ತಿದ್ದೇವೆ. ಕೆಐಎಡಿಬಿ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕೆಲವರು ಜಾಗವನ್ನು ತೆಗೆದುಕೊಂಡು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಸಾಕಷ್ಟು ಮಂದಿ 50 ಸಾವಿರಕ್ಕೆ ಎಕರೆ ಜಾಗಗಳನ್ನು ಖರೀದಿಸಿ 20 ವರ್ಷ ಕಳೆದರೂ ಕೈಗಾರಿಕಾ ಅಭಿವೃದ್ಧಿಯನ್ನು ಮಾಡಿಲ್ಲ. ಇವರ ವಿರುದ್ಧ ಕೆಐಎಡಿಬಿ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸುಳ್ಳು ಆರೋಪ; ನಾವು ದತ್ತಮಾಲೆ ಅಭಿಯಾನಕ್ಕೆ ಅಂತ ಜಿಲ್ಲಾದ್ಯಂತ ಭಕ್ತಾಧಿಗಳಿಂದ ಹಣ ಸಂಗ್ರಹಿಸಿದ್ದೇವೆ. ಅದೇ ರೀತಿ ರೆಸಾರ್ಟ್ ಮಾಲೀಕರ ಹತ್ತಿರ ಹಣವನ್ನು ವಿನಯಪೂರ್ವಕವಾಗಿ ಕೇಳಿದ್ದೇವೆ. ಅದನ್ನು ಬಿಟ್ಟು ನಾವು ಯಾವುದೇ ಕಾರಣಕ್ಕೂ ಅವರ ಮೇಲೆ ಹಣ ನೀಡಲೇಬೇಕು ಎಂಬ ಒತ್ತಡ ಹಾಕಿಲ್ಲ. ನಗರದ ಪ್ರತಿಷ್ಠಿತ ಮಂದಿಗಳು ಹಣ ನೀಡಿದ್ದಾರೆ. ಹಾಗಂತ ಅವರು ತಪ್ಪು ಎಸಗಿದರೆ ಅನ್ಯಾಯ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದರು.
ಗ್ರಾಮಸ್ಥರಾದ ಮಧುಚಂದ್ರ, ನಿಂಗೇಗೌಡ, ಮಂಜೇಗೌಡ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.