ಹಾಸನ

'ಮೂಢ' ಕಾಯ್ದೆ ಜಾರಿಗೆ ಆಗ್ರಹಿಸಿ ಧರಣಿ

Published On :

ಹಾಸನ: ಮಡೆಸ್ನಾನ, ಪಂಕ್ತಿಭೇದ, ಅಸ್ಪೃಶ್ಯತೆ ಮತ್ತಿತರ, ಸಾಮಾಜಿಕ ತಾರತಮ್ಯಗಳ ವಿರುದ್ಧ ಹಾಗೂ ಅನಾಗರಿಕ ಮೌಡ್ಯಾಚರಣೆಗಳ ನಿಷೇಧಕ್ಕೆ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಆಗ್ರಹಿಸಿ ಭಾನುವಾರ ಪ್ರಗತಿ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ನಗರಗ ಹೇಮಾವತಿ ಪ್ರತಿಮೆ ಬಳಿ ಸಾಮೂಹಿಕ ಪ್ರತಿಭಟನಾ ಧರಣಿ ನಡೆಸಿದರು.
ಮೌಢನಂಬಿಕೆಗಳ ಆಚರಣೆ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಇದೇ ವೇಳೆ ನೆಲ್ಸನ್ ಮಂಡೇಲಾ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಾಹಿತಿ ಜ.ಹೊ.ನಾರಾಯಣಸ್ವಾಮಿ, ಸಿಪಿಎಂ ಮುಖಂಡರಾದ ನಿತ್ಯಾನಂದಸ್ವಾಮಿ, ಸುಕುಮಾರನ್, ಧರ್ಮೇಶ್ ಮತ್ತಿತರರು ಮಾತನಾಡಿ,  ಶಿಕ್ಷಣ ಹೆಚ್ಚಾದಂತೆ ಮೌಢ ನಂಬಿಕೆಗಳು ಹೆಚ್ಚಾಗುತ್ತಿರುವುದು ದುರಂತ. ಇದನ್ನು ತಪ್ಪಿಸದಿದ್ದರೇ ಮುಗ್ದ ಜನರು ಶೋಷಣೆಗೆ ಈಡಾಗುತ್ತದೆ. ಕೂಡಲೇ ಸರ್ಕಾರ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಅಂಧಶ್ರದ್ಧೆ ಹಾಗೂ ಜಾತಿ ತಾರತಮ್ಯಗಳ ಆಚರಣೆಗಳಾದ ಪಂಕ್ತಿಬೇಧ ಮತ್ತು ಮಡೆಸ್ನಾನದಂತಹ ಅನಿಷ್ಟ ಪದ್ದತಿಗಳು ಇನ್ನೂ ಜೀವಂತವಾಗಿವೆ. ಇಂತಹ ಅನಾಗರಿಕ ಆಚರಣೆಗಳನ್ನು ತೊಡೆದು ಹಾಕಬೇಕೆಂದು ಚಳವಳಿ ನಡೆಯುತ್ತಿದ್ದರೂ, ಅಂತಹ ಜಾತಿ ತಾರತಮ್ಯದ ಆಚರಣೆಗಳನ್ನು ತಾತ್ವಿಕವಾಗಿ ಸಮರ್ಥಿಸಿಕೊಂಡು ಅವುಗಳ ಮುಂದುವರಿಕೆಗೆ ಕೆಲವು ಶಕ್ತಿಗಳು ಪ್ರೋತ್ಸಾಹ ನೀಡುತ್ತಿರುವುದು ವಿಷಾದದ ಸಂಗತಿಯಾಗಿದೆ  ಎಂದು ಖಂಡಿಸಿದರು.
ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಎಸ್‌ಎಫ್‌ಐ ವತಿಯಿಂದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಕುರಿತು ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೊತೆಗೆ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಸಲಾಯಿತು.
ಸಿಪಿಎಂ ಮುಖಂಡರಾದ ವಿ, ಸುಕುಮಾರನ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯ್‌ಕುಮಾರ್, ದಲಿತ ಮುಖಂಡ ಎಚ್.ಕೆ.ಸಂದೇಶ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಡಿವೈಎಫ್‌ಐ ಬಿ.ಜಿ.ಗಿರೀಶ್, ದಲಿತ ಹಕ್ಕುಗಳ ಸಮಿತಿಯ ಕೆ.ಎಸ್.ಮಂಜುನಾಥ್ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.