ಕಾಡಾನೆ ಕಾಟ ಕೊನೆಗೊಳಿಸಿ
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ದೊಡ್ಡಬೆಟ್ಟ ಅರಣ್ಯ ಪ್ರದೇಶದ ಕಲ್ಲಾರೆ, ಪುರಭೈರವನಹಳ್ಳಿ, ಅಂಜಳಿಗೆ, ಭರತೂರು, ಮಾಗಡಿಹಳ್ಳಿ, ಕಾಣಗೆರೆ, ಹುಸುಗೂರು ಮುಂತಾದ ಗ್ರಾಮಗಳಲ್ಲಿ ಶನಿವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆನಾಶ ಗೊಳಿಸಿವೆ.
ಕಳೆದ 20 ದಿನಗಳಿಂದ ಈ ಗ್ರಾಮಗಳ ಪಕ್ಕದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು-ಬಿಟ್ಟಿರುವ 15 ಕಾಡಾನೆಗಳ ಹಿಂಡು ಪ್ರತಿದಿನ ಸತತವಾಗಿ ತೋಟ, ಗದ್ದೆಗಳಲ್ಲಿ ದಾಂದಲೆ ನಡೆಸಿ ತೇಗದ ಮರ, ಬತ್ತ, ಅಡಿಕೆ, ಕಾಫಿ, ತಾಳೆ, ಬಾಳೆ, ಸಪೋಟ, ಮೆಣಸು, ಕಿತ್ತಳೆ ಮುಂತಾದ ಬೆಳೆಗಳನ್ನು ನಾಶಗೊಳಿಸಿದ್ದು, ಇದರಿಂದ ರೊಚ್ಚಿಗೆದ್ದ ರೈತರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ, ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಕಲ್ಲಾರೆ ಗ್ರಾಮದಲ್ಲಿ ಬೆಳೆ ನಾಶ: ಕಲ್ಲಾರೆ ಗ್ರಾಮದ ಕೆ.ಪಿ.ವೆಂಕಟೇಶ್, ಕೆ.ಆರ್. ಮಲ್ಲೇಶ್, ಬಾಲರಾಜು, ಕೆ.ಎಚ್.ಸತೀಶ್, ಕೆ.ಮಂಜುನಾಥ್, ದೇವರಾಜ್, ಹೂವಣ್ಣ ಮುಂತಾದವರ ತೋಟ, ಗದ್ದೆಗಳಿಗೆ ನುಗ್ಗಿ ತೋಟದ ಸುತ್ತ ಹಾಕಲಾಗಿದ್ದ ತಂತಿ ಬೇಲಿ ಹಾಗೂ ಗೇಟ್ ಮುರಿದು ಒಳ ನುಗ್ಗಿರುವ ಕಾಡಾನೆಗಳು ಹಲವು ಬೆಳೆಗಳನ್ನು ನಾಶಪಡಿಸಿವೆ.
ಕಳೆದ ರಾತ್ರಿ ಹುಂಬಳ್ಳಿ ಬೆಟ್ಟ ಅರಣ್ಯ ಪ್ರದೇಶದಿಂದ ಹೇಮಾವತಿ ಹಿನ್ನೀರನ್ನು ದಾಟಿಕೊಂಡು ಬಂದ ಕಾಡಾನೆಗಳು ಮೇಲ್ಕಂಡ ಗ್ರಾಮಗಳಲ್ಲಿ ರಾತ್ರಿಯಿಡೀ ದಾಳಿ ನಡೆಸಿವೆ. ಕೆ.ಆರ್. ಮಲ್ಲೇಶ್ ಎಂಬುವರ ಸಪೋಟ ತೋಟಕ್ಕೆ ಅಳವಡಿಸಿದ್ದ ಸೋಲಾರ್ ಬೇಲಿಗೆ ಸಿಲುಕಿ ಮರಿಯಾನೆ ಗೀಳಿಟ್ಟಿದ್ದರಿಂದ ರೊಚ್ಚಿಗೆದ್ದ ಕಾಡಾನೆಗಳ ಹಿಂಡು ಸೋಲಾರ್ ಬೇಲಿ, ಅದಕ್ಕೆ ಅಳವಡಿಸಿದ್ದ ಗೇಟನ್ನು ಒಣ ಮರದಿಂದ ಮುರಿದು ಹಾಕಿವೆ. ನಂತರ ಒಳ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.
ನಂತರ ಅದೇ ಗ್ರಾಮದ ಕೆ.ಸಿ.ವೆಂಕಟೇಶ್ ಅವರ ತೋಟದ ಗೇಟನ್ನು ಮುರಿದು ಒಳನುಗ್ಗಿ ಬೆಳೆ ನಾಶಪಡಿಸಿವೆ. ನಂತರ ಪ್ರತ್ಯೇಕ ಗುಂಪುಗಳಾಗಿ ಇತರೆ ಭಾಗಗಳಲ್ಲಿ ದಾಳಿ ನಡೆಸಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಗ್ರಾಮಸ್ಥರು ಪ್ರತಿದಿನ ಆನೆಗಳು ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆಯವರು ತಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ, ಇತ್ತೀಚೆಗೆಷ್ಟೇ ಮಾದಿಹಳ್ಳಿ ಗ್ರಾಮದಲ್ಲಿ ಸತತ ಒಂದು ವಾರ ಕಾಡಾನೆ ದಾಳಿಗೀಡಾಗಿದ್ದರಿಂದ ಸ್ಥಳಕ್ಕೆ ಅಧಿಕಾರಿಗಳು ಬಾರದೆ ಬೇಜವಾಬ್ದಾರಿ ಪ್ರದರ್ಶಿಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹಿಡಿದು ದಿಗ್ಬಂಧನ ಹಾಕಿದ್ದರು. ಆ ಸಂದರ್ಭದಲ್ಲಿ ಆರ್ಎಫ್ಓ ದೇವರಾಜ್ ಅವರು ಕಾಡಾನೆಗಳನ್ನು ಹೇಮಾವತಿ ಹಿನ್ನೀರಿನಿಂದ ಬೇರೆಡೆಗೆ ಓಡಿಸುವುದಾಗಿ ಭರವಸೆ ನೀಡಿ ಅವರನ್ನು ಬಂಧಮುಕ್ತರನ್ನಾಗಿದರು. ಆದರೆ ಆನೆಗಳು ಈವರೆಗೂ ಅದೇ ಸ್ಥಳಗಳಲ್ಲಿ ಬೀಡು ಬಿಟ್ಟಿರುವುದು ಗ್ರಾಮಸ್ಥರ ಕೋಪನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಈ ಬಾರಿ ತಮ್ಮ ಗ್ರಾಮಕ್ಕೆ ಅರಣ್ಯ ಇಲಾಖೆಯವರು ಬಂದರೆ ಅವರ ವಾಹನಗಳಿಗೆ ಬೆಂಕಿಹಚ್ಚಿ, ಅವರ ಬಟ್ಟೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕುತ್ತೇವೆ. ಆನೆ ಹಿಡಿಯುವವರೆಗೂ ಅವರನ್ನು ಬಿಡುವುದಿಲ್ಲ. ಎಂದ ಅವರು ಕೇವಲ ಒಂದು ಮರಿ ಆನೆಯನ್ನು ಹಿಡಿದು ಜಾಗ ಖಾಲಿ ಮಾಡಿರುವ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ, ಆಗ ಮಾತ್ರ ಇವರೆಲ್ಲ ಎಚ್ಚೆತ್ತುಕೊಳ್ಳುತ್ತಾರೆ. ಈಗಾಗಲೇ ಆನೆ ಹಾವಳಿ ಪೀಡಿತ ಗ್ರಾಮಗಳ ಪ್ರತಿ ಮನೆಯಿಂದ ಒಬ್ಬರಂತೆ ವಿಧಾನ ಸೌಧದ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಸರ್ಸಾರ ಶೀಘ್ರ ಎಚ್ಚೆತ್ತು ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸದಿದ್ದರೆ, ನಾವು ರಾಜ್ಯದ ಅಧಿಕಾರದ ಶಕ್ತಿಸೌಧ ವಿಧಾನಸೌಧದ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತೊಮ್ಮೆ ಎಚ್ಚರಿಸಿದ್ದಾರೆ.
-ಎಚ್.ವಿ. ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

