ಹಾಸನ

ಹದಗೆಟ್ಟ ರಸ್ತೆ, ಸಂಚಾರ ಅವ್ಯವಸ್ಥೆ

Published On :

ಆಲೂರು ಪಟ್ಟಣದ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಾರುದ್ದದ  ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರ ಹದಗೆಟ್ಟಿದೆ. ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಕಾಂಕ್ರಿಟ್ ರಸ್ತೆ ಅಂದಿನಿಂದ ಇಂದಿನವರೆಗೂ ಯಾವುದೇ ರೀತಿಯ  ದುರಸ್ತಿ ಕಾಣದೆ ಹದಗೆಟ್ಟಿದ್ದು, ಕೇವಲ ತೋರಿಕೆಗೆ ಮಾತ್ರ ಡಾಂಬರೀಕರಣ ನಡೆಸಿದ್ದು, ಒಂದೆರಡು ದಿನಗಳಲ್ಲಿ ಡಾಂಬರೀಕರಣಗೊಂಡ ಗುಂಡಿಗಳ ಬದಿಯಿಂದ ಡಾಂಬರ್ ಮಾಯವಾಗಿ ಕೇವಲ ಕಲ್ಲು ಮಾತ್ರ ಉಳಿದಿದ್ದು, ಇದರಿಂದಾಗಿ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳ ಜೇಬು ತುಂಬಿತೇ ಹೊರತು, ಗುಂಡಿಗಳು ತುಂಬಲಿಲ್ಲ. ಹಲವಾರು ಬಾರಿ ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ರಸ್ತೆ ಬದಿಯಲ್ಲಿ ನೀರಿನ ಪೈಪುಗಳು ಒಡೆದು ನೀರು ರಸ್ತೆಯಲ್ಲಿ ಹರಿದಾಡಿ ರಸ್ತೆಯೆಲ್ಲಾ ಕೆಸರು ಮಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ವಾಹನಗಳು ಸಂಚರಿಸಿದಾಗ ಕೆಸರು ಹಾರಿ ಕಿರಿಕಿರಿಯುಂಟು ಮಾಡುತ್ತಿದೆ, ಅಪಾರ ಪ್ರಮಾಣದ ಧೂಳು ಏರ್ಪಟ್ಟು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿರುವವರ ಪಾಡು ಹೇಳ ತೀರದಂತಾಗಿದೆ ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಶೀಘ್ರ ಇತ್ತ ಗಮನ ಹರಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು.
- ರಾಘವೇಂದ್ರ, ವೆಂಕಟೇಶ್, ಗೀತಾ,
 ರಮೇಶಕುಮಾರ್, ಸಂಜಯ್
ಕುಡಿವ ನೀರಿಗೆ ತತ್ವಾರ
ಅರಸೀಕೆರೆ ತಾಲೂಕು ಜಾವಗಲ್ ಹೋಬಳಿಯ ಜಾವಗಲ್ ಹಳ್ಳಿಗಳು ಸೇರಿದಂತೆ ಅರಸೀಕೆರೆ ತಾಲೂಕಿನ 58 ಗ್ರಾಮಗಳಿಗೆ ಯಗಚಿ ನೀರು ಸರಬರಾಜು ನಿಲ್ಲಿಸಿದ್ದು, ಇದರಿಂದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಯಗಚಿ ಜಲಾಶಯದಿಂದ ಬೇಲೂರು-ಹಳೇಬೀಡು-ಜಾವಗಲ್ ್ಗಮಾರ್ಗವಾಗಿ ಅರಸೀಕೆರೆ ತಾಲೂಕಿನ 58 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ.
8-10 ದಿನಗಳ ಹಿಂದೆ ಹಳೇಬೀಡು ಜಾವಗಲ್, ಮಾರ್ಗವಾಗಿ ಹಾದು ಬಂದಿರುವ ಕುಡಿಯುವ ನೀರು ಸರಬರಾಜು ಮಾರ್ಗ ಮಧ್ಯೆ ಬರುವ ಕುರುಬರ ಬೂದಿಹಾಳ್ ಗ್ರಾಮದಲ್ಲಿ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಮುಖ್ಯ ಕೊಳವೆಯನ್ನು ಅಕ್ರಮವಾಗಿ  ತೆಗೆದು ನೀರು ಸಂಪರ್ಕ ಕಲ್ಪಿಸಿಕೊಂಡಿರುವುದರಿಂದ ಮುಂದಿನ ಹಳ್ಳಿಗಳಿಗೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದೆ. ಹಂದ್ರಾಳು ಗ್ರಾಮದಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ವಸತಿ ನಿಲಯದ ಸಿಬ್ಬಂದಿ ತಿಳಿಸಿರುತ್ತಾರೆ.
ಈಗಾಗಲೇ ಮಳೆಯ ಅಭಾವದಿಂದಾಗಿ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ಅಂತರ್ಜಲ ಕುಸಿದಿದ್ದು, ಹಳ್ಳಿಗಳಿಗೆ ನೀರಿನ ಆಸರೆಯಾಗಿದ್ದ ಯಗಚಿ ನೀರು ಸೌಲಭ್ಯವನ್ನು ಸ್ಥಗಿತಗೊಳಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು  ಈ ಬಗ್ಗೆ ಗಮನಹರಿಸಿ, ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು  ತ್ವರಿತವಾಗಿ ನೀರು ಸರಬರಾಜು ವ್ಯವಸ್ಥೆಯನ್ನು ಒದಗಿಸಬೇಕು.
- ಜಾವಗಲ್ ಹೋಬಳಿ ಗ್ರಾಮಸ್ಥರು.
ಅಕ್ರಮ ನಿವಾಸಿಗಳನ್ನು ನಿವಾರಿಸಿ
ಸರ್ಕಾರಿ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಲು ಹಕ್ಕುಪತ್ರ ವಿತರಣೆ ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಗೆ ಒಳಪಡುವ ಅಗ್ರಹಾರ ರಸ್ತೆಯಿಂದ ದೊಡ್ಡಮ್ಮದೇವಿ ದೇವಸ್ಥಾನದ ಮಧ್ಯಭಾಗಕ್ಕೆ ಸೇರಿಕೊಂಡಂತೆ ಕೊಳದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದಂತೆ ಈ ಜಾಗಗಳು ಸರ್ಕಾರಿ ನಕ್ಷೆಯಲ್ಲಿ 40 ಅಡಿಯ ರಸ್ತೆ ಇದೆ. ಆದರೆ ಪುರಸಭೆಯವರು ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆದ್ದರಿಂದ ಈ ಸ್ಥಳದಲ್ಲಿ ಸಂಚರಿಸಲು ವಾಹನಗಳು ಹಾಗೂ ಜನ ಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಪುರಸಭೆಯಿಂದ ಇಂತಹ ಕೊಳಚೆ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ 1982ರಲ್ಲಿ ವಳಗೇರಮ್ಮ ದೇವಾಲಯದ 12ಎಕರೆ 32 ಕುಂಟೆ ಜಾಗವನ್ನು ಅಕ್ರಮಿಸಿಕೊಳ್ಳಲಾಯಿತು. ಆದರೆ ಈ ಜಾಗದಲ್ಲಿ ಕೊಳಚೆ ನಿರ್ಮೂಲನಾ ನಿವಾಸಿಗಳಿಗೆ ಸ್ಥಳ ಸಿಗಲಿಲ್ಲ ಈ ಸ್ಥಳ ಉಳ್ಳವರ ಪಾಲಾಯಿತು.   ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಕಣ್ಣು ಮುಚ್ಚಿ ಕುಳಿತ್ತಿದ್ದು, ಇಂತಹ  ಕೊಳಚೆ ನಿವಾಸಿಗಳ ಗಮನ ಹರಿಸುತ್ತಿಲ್ಲ. ಈ ಭಾಗದಿಂದ ಹೊಲ ಗದ್ದೆಗಳಿಗೆ ಕೆರೆಗೆ ತೆರಳುವ ಸ್ಥಳವಾಗಿದ್ದು, ಖುದ್ದಾಗಿ ಈ ನಿವಾಸಿಗಳನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸಂಚಾರಿಸಲು ಶಾಸಕರು ಹಾಗೂ ಪುರಸಭೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಅಮಾಸೇಗೌಡ ಮತ್ತು ಇತರರು.
ಪ್ರಯೋಜನಕ್ಕೆ ಬಾರದ ದೀಪ  
ರಾಮನಾಥಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪ್ರಖರ ಬೆಳಕಿನ ವಿದ್ಯುತ್ ದೀಪ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಿದೆ. ಕೆಲವು ದಿನಗಳಿಂದ ಬಲ್ಬ್‌ಗಳು ಕೆಟ್ಟು ಹೋಗಿದ್ದು, ರಾತ್ರಿ ವೇಳೆ ಸಂಪೂರ್ಣ ಕತ್ತಲಾವರಿಸಿ ಯಾವ ಪ್ರಯೋಜನಕ್ಕೂ ಬಾರದಂತಾಗಿದೆ. ಇಲ್ಲಿನ ಬಸವೇಶ್ವರ ವೃತ್ತ, ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಆವರಣ, ಬಸ್‌ನಿಲ್ದಾಣ, ಬಿಳಗೂಲಿ ರಸ್ತೆ, ಇನ್ನಿತರ ಕಡೆಗಳವರೆಗೂ ಬೆಳಕು ಚೆಲ್ಲುತ್ತಿದ್ದ ಪ್ರಖರ ಬೆಳಕಿನ ವಿದ್ಯುತ್ ದೀಪ ಈಗ ಉಪಯೋಗಕ್ಕೆ ಬಾರದಂತಾಗಿದೆ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.  
- ರಾಮನಾಥಪುರ ಗ್ರಾಮಸ್ಥರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.