ಹೊಂಡ-ಗುಂಡಿಗೆ ಮುಕ್ತಿ ಯಾವಾಗ?
ಬೇಲೂರು: ಜನಪ್ರತಿನಿಧಿಗಳೇ, ರಸ್ತೆ ಅಗಲೀಕರಣ ಆಗುವುದು ಯಾವಾಗ? ಹೊಂಡ ಗುಂಡಿ ಧೂಳಿನಿಂದ ನಮಗೆ ಮುಕ್ತಿ ದೊರಕಿಸಿ ಕೊಡುವುದು ಯಾವಾಗ? ಎಂದು ಕಳೆದ 5 ವರ್ಷದಿಂದ ಸ್ಥಳೀಯ ನಾಗರಿಕರು ಪ್ರಶ್ನಿಸುತ್ತಿದ್ದು ಉತ್ತರ ಮಾತ್ರ ಶೂನ್ಯವಾಗಿದೆ.
ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರು ಪಟ್ಟಣದ ನೆಹರೂ ನಗರದಿಂದ ಮೂಡಿಗೆರೆ ರಸ್ತೆಯ ಜೆ.ಪಿ ನಗರದ 2 ಕಿಮೀ ಉದ್ದದ ವರೆಗೆ ಪ್ರಯಾಣ ಮಾಡಿದರೆ ವಾಹನ ಚಾಲನೆಯ ನರಕ ಯಾತನೆ ಎಂತಹದು ಎಂಬುದು ಮನದಟ್ಟಾಗುತ್ತದೆ.
ಒಂದು ಕಡೆ ಗುಂಡಿ ತಪ್ಪಿಸಿದರೆ ಮತ್ತೊಂದು ಗುಂಡಿ ಬಾಯಿ ತೆರೆದು ಕಾಯುತ್ತಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಅಂತರ ರಾಷ್ಟ್ರೀಯ ಪ್ರವಾಸಿಕೇಂದ್ರದ ಮುಖ್ಯ ರಸ್ತೆ ಹೇಗಿರಬೇಕೋ ಅದಕ್ಕೆ ಅಪವಾದ ಎಂಬಂತೆ ಈ ರಸ್ತೆ ಅತ್ಯಂತ ಕೆಟ್ಟದಾಗಿದೆ. ವೆಲ್ಲುಪುರಂನಿಂದ ಬಿ.ಸಿರೋಡ್ ವರೆಗಿನ ರಾಷ್ಟೀಯ ಹೆದ್ದಾರಿ 234 ಬೇಲೂರು ಪಟ್ಟಣವನ್ನು ಹಾದು ಹೋಗಲಿದ್ದು ಹೆದ್ದಾರಿ ಪ್ರಾಧಿಕಾರ ಈಗಾಲೆ ಪಟ್ಟಣದಲ್ಲಿ ಸರ್ವೆ ನಡೆಸಿ ವರ್ಷ ಕಳೆಯುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಹೆದ್ದಾರಿ ಪ್ರಾಧಿಕಾರದವರ ಈಗಿನ ಕಾರ್ಯವೈಖರಿ ನೋಡಿದರೆ ಕನಿಷ್ಠ ಇನ್ನೂ 2 ವರ್ಷ ರಸ್ತೆ ಅಗಲೀಕರಣ ಕಾರ್ಯಕ್ಕೆ ಕೈ ಹಾಕುವ ಲಕ್ಷಣ ಕಾಣುತ್ತಿಲ್ಲ, ಏಕೆಂದರೆ ರಸ್ತೆ ಅಗಲೀಕರಣಕ್ಕೆ ಮುಂದಾದರೆ ಕೆಲವರಿಗೆ ಪರಿಹಾರ ನೀಡುವ ಅವಶ್ಯಕತೆಯಿದ್ದು ಪರಿಹಾರದ ಹಣ ಇಲಾಖೆಯಲ್ಲಿ ಇಲ್ಲ ಎಂಬ ಮಾತೂ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಹೆದ್ದಾರಿ ಕಾರ್ಯ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜಾಗ ಬಿಡಲು ಸಿದ್ಧ: ಕಳೆದ ವರ್ಷ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಪಟ್ಟಣದ ನೆಹರು ನಗರದಿಂದ ಜೆ.ಪಿ.ನಗರದವರೆವಿಗೆ ಮುಖ್ಯ ರಸ್ತೆ ಎರಡು ಬದಿಯಲ್ಲಿ ಅಳತೆ ಮಾಡಿ ಹಸಿರು ಮತ್ತು ಕೆಂಪು ಬಣ್ಣದ ಗುರುತು ಹಾಕಿರುವುದು ಬಿಟ್ಟರೆ ಇನ್ನಾವುದೇ ಕಾಮಗಾರಿ ನಡೆದಿಲ್ಲ. ರಾಜ್ಯದ ಇತರೆಡೆ ರಸ್ತೆ ಅಗಲೀಕರಣಕ್ಕೆ ವರ್ತಕರು ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಉದಾಹರಣೆಯಿದೆ. ಆದರೆ ಇಲ್ಲಿನ ಮುಖ್ಯರಸ್ತೆಯ ವರ್ತಕರು ಮತ್ತು ನಿವಾಸಿಗಳು ಹೆದ್ದಾರಿ ಫ್ರಾಧಿಕಾರದ ಅಳತೆ ಬಿಟ್ಟು ಕೊಡಲು ಸಿದ್ದರಾಗಿದ್ದಾರೆ.
ರಸ್ತೆಯ ಮಧ್ಯ ಭಾಗದಿಂದ ಎರಡೂ ಬದಿ 40 ಅಡಿ ಎಂದು ಹೆದ್ದಾರಿ ಇಲಾಖೆ ಎಲ್ಲೂ ನಿರ್ದಿಷ್ಠವಾಗಿ ಹೇಳಿಲ್ಲ. ನಾವು ಜಾಗ ಬಿಡಲು ಯಾವಗಲೂ ಸಿದ್ಧರಿದ್ದೇವೆ, ಆದರೆ ಹೆದ್ದಾರಿ ಪ್ರಾಧಿಕಾರ ಇಲಾಖೆಯವರು ನಿರ್ದಿಷ್ಟವಾಗಿ ಇಷ್ಟು ಅಡಿ ಎಂದು ಆದೇಶ ಹೊರಡಿಸಬೇಕು ಮತ್ತು ಕೆಲಸ ಯಾವಾಗ ಆರಂಭಿಸುತ್ತೇವೆ ಎಂಬುದನ್ನು ತಿಳಿಸಬೇಕು. ಅದು ಬಿಟ್ಟು ಹೆದ್ದಾರಿ ಇಲಾಖೆಯವರು ಮನಸ್ಸಿಗೆ ತೋಚಿದ ಅಳತೆ ಹೇಳುವುದು, ಕಾಮಗಾರಿ ಆರಂಭದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಮಾಡುತ್ತಿರುವುದು ಇಲಾಖೆಯ ನಡವಳಿಕೆ ಮೇಲೆ ಇಲ್ಲಿನ ನಾಗರಿಕರಿಗೆ ಅನುಮಾನ ಮೂಡುವಂತೆ ಮಾಡಿದೆ.
ಪಟ್ಟಣದ ಕೆಲ ವರ್ತಕರು ಮುಖ್ಯರಸ್ತೆಯಲ್ಲಿ ಹೆದ್ದಾರಿ ಮಾಡದೆ ಪರ್ಯಾಯ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದರು ಅದಕ್ಕೆ ಇನ್ನಿತರ ವರ್ತಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ರಿಂಗ್ರ್ಸ್ತೆ ಮಾಡಿದ ಪಕ್ಷದಲ್ಲಿ ಪಟ್ಟಣದ ಮುಖ್ಯರಸ್ತೆಯ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಹಿಂದುಳಿಯುತ್ತವೆ ಅದರ ಬದಲು ಮುಖ್ಯರಸ್ತೆ ಅಗಲೀಕರಣ ಮಾಡಲಿ ಎನ್ನುತ್ತಾರೆ. ಒಂದೋ ಮುಖ್ಯರಸ್ತೆ ಅಗಲ ಮಾಡಲಿ, ಇಲ್ಲಾವಾದಲ್ಲಿ ರಿಂಗ್ರಸ್ತೆ ಮಾಡಿಸಿ, ಅದಕ್ಕೂ ಮೊದಲು ಈಗ ಗುಂಡಿ ಬಿದ್ದಿರುವ ರಸ್ತೆಗೆ ಡಾಂಬರ್ ಹಾಕಿಸಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಆದರೆ ನಾಗರಿಕರ, ಪ್ರವಾಸಿಗರ ಮನವಿಗೆ ಇದುವರೆಗೂ ಈ ಬಗ್ಗೆ ಜಿಲ್ಲಾಧಿಕಾರಿಗಳಾಗಲಿ ಸ್ಥಳಿಯ ಜನಪ್ರತಿನಿಧಿಗಳಾಗಲಿ ಗಮನಹರಿಸಿಲ್ಲ ಎಂಬುದೇ ವಿಪರ್ಯಾಸವಾಗಿದೆ.
-ಎ.ರಾಘವೇಂದ್ರ ಹೊಳ್ಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

