ಹಾಸನ

ಜನರ ಪರ ಕೆಲಸ ಮಾಡದಿದ್ದರೆ ಹೋರಾಟ

Published On :

ಕ.ಪ್ರ.ವಾರ್ತೆ ,  ಹಾಸನ ,  ಡಿ. 10
ನಗರಸಭೆಯ ಆಡಳಿತ ರೂಢ ಜೆಡಿಎಸ್‌ನವರು ಸಾರ್ವಜನಿಕರ ಪರ ಕೆಲಸ ನಿರ್ವಹಸದಿದ್ದರೆ ಈ ವಿರುದ್ಧ ಹೋರಾಟ ನಡೆಸುವುದಾಗಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಆರೋಪ: ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆಯ ಕಾಂಗ್ರೆಸ್ ಸದಸ್ಯ ಯಶವಂತ್, ಕಳೆದ 2 ತಿಂಗಳಿನಿಂದ ನಗರಸಭೆಯ ಸಾಮಾನ್ಯ ಸಭೆ ಕರೆದಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾರ ವಿಚಾರಗಲು ಚರ್ಚೆ ಆಗಬೇಕಾಗಿದೆ. ನಗರಸಭೆಯ ಅಧ್ಯಕ್ಷರು ಸಾಮಾನ್ಯ ಸಭೆ ಕರೆಯಲು ಹಾಗೂ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಜೆಡಿಎಸ್‌ನ ಪ್ರಭಾವಿ ಸದಸ್ಯರಾದ ಎಚ್.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷ ಇರ್ಷಾದ್ ಪಾಷ, ವಿಜಯ್ ಕುಮಾರ್ ಹಾಗೂ ಇತರರು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಖಜಾನೆ ಖಾಲಿ: ನಗರಸಭೆಯ ಖಜಾನೆ ಖಾಲಿಯಾಗಿದ್ದು, ನಗರಸಭೆಯು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ನಗರಸಭೆಯ ಕಂದಾಯದ ಆದಾಯದಿಂದ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ ಮತ್ತು ನೀರು ಸರಬರಾಜು ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ರು. 1 ಕೋಟಿ ತೆರಿಗೆ ಬಾಕಿ ಹಣ ಬರಬೇಕಿದ್ದು, 20 ಮಳಿಗೆಗಳಿಂದ ಈ ತೆರಿಗೆಯನ್ನು ಇನ್ನೂ ವಸೂಲಿ ಮಾಡಿಲ್ಲ. ಈ ರೀತಿಯಲ್ಲಿ ಸಾಕಷ್ಟು ಹಣ ನಗರಸಭೆಗೆ ಸರಿಯಾಗಿ ಬರದೇ ವಂಚನೆಯಾಗುತ್ತಿದೆ ಎಂದು ದೂರಿದರು.
ಆಯುಕ್ತರ ದಿಟ್ಟಕ್ರಮ: ಮುಖ್ಯಮಂತ್ರಿ ನಿಧಿ, ಎಸ್‌ಎಫ್‌ಸಿ ನಿಧಿ, 13ನೇ ಹಣಕಾಸು ಯೋಜನೆಗಳು ಪ್ರಗತಿಯಲ್ಲಿದೆ. ಈಗಾಗಲೇ 30 ಕೋಟಿ ರು. ಮುಖ್ಯಮಂತ್ರಿ ಕಾಮಗಾರಿಗಳು ಪ್ರಾರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ಕಳೆದ 15ದಿನಗಳ ಹಿಂದೆ ನೂತನವಾಗಿ ಆಗಮಿಸಿರುವ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದು, ಕಂದಾಯ ವಸೂಲಾತಿಯಲ್ಲಿ ಕೈಗೊಂಡಿರುವ ದಿಟ್ಟಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸಾರ್ವಜನಿಕರ ಕೆಲಸದ ದೈನಂದಿನ ಅವಧಿಯಲ್ಲಿ ನೌಕರರು ಮತ್ತು ಅಧಿಕಾರಿಗಳು ನಗರಸಭೆಯಲ್ಲಿ ಸ್ಪಂದಿಸುವಂತೆ ಮಾಡಿದ್ದಾರೆ.
ಅಲ್ಲದೇ, ಸಿಬ್ಬಂದಿಗಳಿಗೆ ಬಯೋವುಟ್ರಿಕ್ ವ್ಯವಸ್ಥೆಯ ಹಾಜರಾತಿ, ಸಿಸಿ ಕ್ಯಾಮೆರಾ ಹಾಗೂ ಕಾಲ ಕಾಲಕ್ಕೆ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರಿಗೆ ಸ್ಪಂಧಿಸುವ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ನಿರ್ವಹಿಸುವ ಆಯುಕ್ತರ ವಿರುದ್ಧ ಜೆಡಿಎಸ್‌ನ ಸದಸ್ಯರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಕೆಲಸ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ ಎಂಬ ಕಾರಣಕ್ಕೆ ಆಯುಕ್ತರ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಹಾಸ್ಯಾಸ್ಪದ: ಕೆಲ ಸದಸ್ಯರ ವಯಕ್ತಿಕ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ಕಾರಣಕ್ಕೆ ಆಯುಕ್ತರ ಮೇಲೆ ಸರ್ವಾಧಿಕಾರಿ ಎಂದು ಹೇಳಿದ್ದಾರೆ. ಅಧಿಕಾರಿ ನಡೆಸುತ್ತಿರುವ ಆಡಳಿತ ಸದಸ್ಯರೇ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ. ಹಿಂದಿನ ಆಯುಕ್ತರು ಶರೀಫ್ ಕಾಲೋನಿಯಲ್ಲಿ ಹಂದಿ ಮಾಂಸದ ಅಂಗಡಿಗೆ ಅನುಮತಿ ನೀಡಲು ಜೆಡಿಎಸ್ ಸದಸ್ಯರೇ ಕಾರಣರಾಗಿದ್ದಾರೆ. ಈಗ ಹೊಸ ಆಯುಕ್ತರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಸ ವಿಲೇವಾರಿ ಮಾಡದಿದ್ದರೆ ಪ್ರತಿಭಟನೆ
ನಗರಸಭೆಯ ಹಿಂದೆ ಕಸದ ರಾಶಿ ನಿರ್ಮಾಣವಾಗಿದ್ದು, ಇದರಿಂದ ಸಾಕಷ್ಟು ದುರ್ವಾಸನೆ ಹಾಗೂ ಅನೈರ್ಮಲ್ಯ ಉಂಟಾಗಿದೆ. ಗೊರೂರು ರಸ್ತೆಯ ಅಗಿಲೆ ಸಮೀಪ ಕಸ ಹಾಕಲು ಸ್ದಳ ನಿಗದಿ ಮಾಡಿ ಬೇಕಾದ ಅಗತ್ಯ ಸಿದ್ಧತೆ ಮಾಡಿದ್ದರೂ ಸಹ ಕಸವನ್ನು ನಗರದಲ್ಲಿಯೇ ಹಾಕಲಾಗುತ್ತಿದೆ. ಆದರೆ ಸ್ವಚ್ಛತೆಯ ಗುತ್ತಿಗೆದಾರರಿಗೆ ಕಸವನ್ನು ಅಗಿಲೆಯ ಪ್ರದೇಶದಲ್ಲಿ ವಿಲೇವಾರಿ ಮಾಡುವಂತೆ ಒಪ್ಪಂದ ಮಾಡಿಕೊಂಡರು ಸಹ ಕಸ ವಿಲೇವಾರಿ ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಇಲ್ಲಿಂದ ಕಸದ ರಾಶಿಯನ್ನು ವಿಲೇವಾರಿ ಮಾಡದಿದ್ದರೆ ಈ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಕುಮಾರ್, ಆರಿಫ್ ಖಾನ್, ಅಬ್ದುಲ್ ಕೈಯುಮ್, ಸಿ.ಟಿ. ಕುಮಾರ್, ರಮೇಶ್ ಬಾಬು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.