ಹಾಸನ

ಮೂಲಭೂತ ಸೌಕರ್ಯಕ್ಕೆ ಕೊಳೆಗೇರಿ ನಿವಾಸಿಗಳ ಆಗ್ರಹ

Published On :

ಕ.ಪ್ರ.ವಾರ್ತೆ ,  ಹಾಸನ ,  ಡಿ. 10
ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನಗರಸಭೆ 34ನೇ ವಾರ್ಡ್‌ನ ಶ್ರೀನಗರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಪರಿಸರ ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದು, ಇವರಿಗೆ ವಸತಿ ಯೋಜನೆ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಕಳೆದ 30 ವರ್ಷಗಳಿಂದ ಶ್ರೀನಗರ ಕೊಳಚೆ ನಿವಾಸಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇಲ್ಲಿ ಸುಮಾರು 800 ಕುಟುಂಬಗಳು ವಾಸವಾಗಿದ್ದು, ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಗುಡಿಸಲು ಹಾಕಿಕೊಂಡು ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಉಸಿರಾಡಲು ಪರಿಶುದ್ಧ ಗಾಳಿ ಇಲ್ಲದೆ ರೋಗ- ರುಜಿನಗಳು ಹರಡುತ್ತಿವೆ. ಈ ಬಗ್ಗೆ ನಗರಸಭೆ ಆಯುಕ್ತರ ಗಮನಕ್ಕೆ ತರಲಾಗಿದ್ದು, ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಗರ ಎರಡನೇ ಹಂತವನ್ನು ಪ್ರಾಮಾಣಿಕವಾಗಿ ಮನೆಗಳ ಸರ್ವೆ ಮಾಡಿಸಿ, ರಾಜೀವ್ ಅವಾಜ್ ಯೋಜನೆಯಡಿಯಲ್ಲಿ ವಸತಿಯನ್ನು ಕಲ್ಪಿಸಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ವಿಸ್ತಾರ, ಚರಂಡಿ, ಶೌಚಾಲಯ, ಬೀದಿ ದೀಪ, ಮತ್ತಿತರ ಸೌಕರ್ಯವನ್ನು ನೀಡುವುದರ ಮೂಲಕ ಸುಸಜ್ಜಿತ ಬಡಾವಣೆಯನ್ನಾಗಿ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಕೆಎನ್‌ಎಸ್‌ಎಸ್ ರಾಜ್ಯ ಸಂಚಾಲಕ ಎಚ್.ಟಿ.ರಾಮೇಗೌಡ, ಮಹಿಳಾ ಅಧ್ಯಕ್ಷ ಎಚ್.ಬಿ. ಯಶೋದಮ್ಮ, ಗೌರವಾಧ್ಯಕ್ಷ ಶಕೀರಾಬಿ, ಕಾರ್ಯದರ್ಶಿ ತಾಸಿರ್ ಹಾಗೂ ನಿವಾಸಿಗಳಾದ ಸುಧಾ, ಮಣಿ, ಕಾಳಯ್ಯ, ರಾಜು, ಶಾರಧಾಂಭ, ಲಲಿತಮ್ಮ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.