ಹಂದಿಗಳ ಉಪಟಳ ತಡೆಗೆ ಆಗ್ರಹ
ಕ.ಪ್ರ.ವಾರ್ತೆ , ಅರಕಲಗೂಡು , ಡಿ.10
ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ರಾಮನಾಥಪುರದಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ಗ್ರಾಮದ ಪರಿಸರ ಹಾಳಾಗುತ್ತಿದೆ. ಆದ್ದರಿಂದ ಕೂಡಲೇ ಇಲ್ಲಿನ ಗ್ರಾಮ ಪಂಚಾಯಿತಿ ಹಂದಿಗಳ ಉಪಟಳ ನಿಯಂತ್ರಿಸುವಂತೆ ಇಲ್ಲಿನ ನಾಗರಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಆಗ್ರಹಿಸಿವೆ.
ಬೀದಿಬೀದಿಗಳಲ್ಲಿ ಕಾಟ: ಗ್ರಾಮದ ಬೀದಿ ಬೀದಿಗಳಲ್ಲಿ ಬೀಡು ಬಿಟ್ಟಿರುವ ಹಂದಿಗಳು ಹಗಲು-ಇರುಳು ಎನ್ನದೇ ಅಡ್ಡಾದಿಡ್ಡಿ ಓಡಾಡುತ್ತಿರುತ್ತವೆ. ನಡು ರಸ್ತೆಯಲ್ಲಿಯೇ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುವುದಲ್ಲದೇ ಸಾರ್ವಜನಿಕರಿಗೆ ಅನಗತ್ಯವಾಗಿ ಕಿರಿ ಕಿರಿ ಉಂಟು ಮಾಡುತ್ತಿವೆ. ಕೊಳಚೆ ನೀರಿನಲ್ಲಿ ಬಿದ್ದು ಹೊರಳಾಡುವುದರಿಂದ ಆಸುಪಾಸಿನ ತುಂಬೆಲ್ಲಾ ಗಬ್ಬುನಾತ ಹರಡಿರುತ್ತದೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ ಎಂದು ದೂಷಿಸಿದ್ದಾರೆ.
ಪ್ರವಾಸಿಗಳಿಗೆ ತೊಂದರೆ: ಪ್ರಮುಖ ಪ್ರವಾಸಿ ಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿರುವ ಇಲ್ಲಿನ ಐತಿಹಾಸಿಕ ದೇಗುಲಗಳ ವೀಕ್ಷಣೆಗೆ ಪ್ರತಿನಿತ್ಯ ರಾಜ್ಯದ ವಿವಿಧೆಡೆಯಿಂದ ನೂರಾರು ಭಕ್ತಾದಿಗಳು, ಪ್ರವಾಸಿಗರು ಭೇಟಿ ನೀಡುತ್ತಾರೆ. ಚಾತುಯುರ್ಗ ಮೂರ್ತಿ ರಾಮೇಶ್ವರಸ್ವಾಮಿ, ಪ್ರಸನ್ನ ಸುಬ್ರಹ್ಮಣೇಶ್ವರಸ್ವಾಮಿ, ಪಟ್ಟಾಭಿರಾಮ, ಅಗಸ್ತ್ಯೇಶ್ವರ ಮುಂತಾದ ದೇವಸ್ಥಾನಗಳ ಬಳಿ ಸುಳಿಯುವ ಹಂದಿಗಳ ಉಪಟಳದಿಂದಾಗಿ ಭಕ್ತರ ಧಾರ್ಮಿಕ ಭಾವನೆಗೂ ಧಕ್ಕೆ ತರುತ್ತಿವೆ.
ನೀರು ಕಲುಷಿತ: ಕೆಲವೊಮ್ಮೆ ಕಾವೇರಿ ನದಿ ತಟದಲ್ಲಿರುವ ಪಂಪ್ ಹೌಸ್ ಬಳಿ ಕೇಸರಿನ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ.
ಎಚ್ಚರಿಕೆ: ಶ್ರೀ ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಕಾವೇರಿ ನದಿ ದಂಡೆ, ಶಾಲಾ- ಕಾಲೇಜು ಸುತ್ತಮುತ್ತ ಮನೆಯ ಹಿತ್ತಲು ಹೀಗೆ ಎಲ್ಲೆಂದರಲ್ಲಿ ಹಂದಿಗಳು ಸಂಚರಿಸುತ್ತಿದ್ದು, ಹೆಚ್ಚುತ್ತಿರುವ ಅವುಗಳ ಸಂತತಿಯಿಂದ ಊರಿನಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ತಾಲ್ಲೂಕು ಅಡಳಿತ ಹಾಗೂ ಗ್ರಾಮ ಪಂಚಾಯ್ತಿ ಕೂಡಲೇ ಕ್ರಮ ಕೈಗೊಂಡು ಹಂದಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಒತ್ತಾಯಿಸಿರುವ ಸಂಘಟನೆಗಳು ಇಲ್ಲವಾದಲ್ಲಿ ಹೋರಾಟ ರೂಪಿಸಬೇಕಾದೀತು ಎಂದು ಎಚ್ಚರಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

