ಹಾಸನ

ಕಟ್ಟಡ ತೆರವು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಹಾಸನ ,  ಡಿ 10
ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಟ್ಟಡದ ತಡೆಗೋಡೆ ನೆಲಸಮಗೊಳಿಸಿರುವುದನ್ನು ಹಾಗೂ ರಾತ್ರೋರಾತ್ರಿ ಕಾಂಗ್ರೆಸ್ ಭವನವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾ ರ್ುಕರ್ತರು ಮಂಗಳವಾರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರು ನಗರದ ಕಾಂಗ್ರೆಸ್ ಕಚೇರಿಯ ಮುಂದೆ ಬಿ.ಎಂ.ರಸ್ತೆ ತಡೆ ನಡೆಸಿದ್ದರಿಂದ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.
ರಕ್ಷಣೆ ಮಾಡಲಾಗಿತ್ತು: ಕಾಂಗ್ರೆಸ್ ಭವನಕ್ಕೆ ಸೇರಿದ ಕಟ್ಟಡದ ತಡೆಗೋಡೆಯನ್ನು ಸೋಮವಾರ ತಡರಾತ್ರಿ ನಗರಸಭೆ ಸಿಬ್ಬಂದಿಗಲು ಹೊಡೆದು ಹಾಕಿದ್ದಾರೆ. ಈ ಕಟ್ಟಡ ಜಾಗ ಹಲವು ವರ್ಷಗಳ ಹಿಂದೆಯೇ ಸರ್ಕಾರದ ಮುಖಾಂತರ ಅನುದಾನವಾಗಿ ಕಾಂಗ್ರೆಸ್ ಟ್ರಸ್ಟ್‌ಗೆ ನೀಡಲಾಗಿದೆ. ಅಂದಿನ ಕಾಂಗ್ರೆಸ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ದಿ. ಹಾರನಹಳ್ಳಿ ರಾಮಸ್ವಾಮಿಯವರು ಜೀವಂತವಾಗಿ ಇರುವವರೆಗೂ ನಿವೇಶನಕ್ಕೆ ಹಾಗೂ ಕಟ್ಟಡಕ್ಕೆ ಯಾವುದೇ ತೊಂದರೆ ಇಲ್ಲದೆ ಹಾಗೂ ಸರ್ಕಾರ ವಹಿಸಿಕೊಟ್ಟ ಸುತ್ತಳತೆ ಜಾಗವನ್ನು ರಕ್ಷಿಸಿಕೊಂಡು ಬಂದಿದ್ದರು.
ಆರೋಪ: ಇತ್ತೀಚೆಗೆ ಕೆಲವರು ಕಾಂಗ್ರೆಸ್ ಟ್ರಸ್ಟ್ ಅನ್ನು ಬಿಟ್ಟು ಬಿಜೆಪಿಗೆ ಹೋಗಿರುವುದರಿಂದ ಈ ರೀತಿಯ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯವರ ಕುಮ್ಮಕ್ಕಿನಿಂದ ನಗರಸಭೆ ಅಧಿಕಾರಿಗಳು ರಾತ್ರೋರಾತ್ರಿ ಏಕಾಏಕಿ ಕಟ್ಟಡವನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಕೆಟ್ಟ ಹೆಸರನ್ನು ತರುವ ನಿಟ್ಟಿನಲ್ಲಿ ಈ ರೀತಿಯ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದರು. ನಗರಸಭೆಯ ಮುಖಾಂತರ ಪಕ್ಷದ ಕಟ್ಟಡವನ್ನು ನೆಲಸಮ ಮಾಡಲು ಯತ್ನಿಸಿದ್ದಾರೆ. ನಗರಸಭೆ ವತಿಯಿಂದ ಟ್ರಸ್ಟ್‌ಗೆ ಯಾವುದೇ ನೋಟಿಸ್ ಅನ್ನೂ ನೀಡದೆ ಇತರರಿಗೆ ನೋಟಿಸ್ ನೀಡಿರುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.
ದೂರು: ಅಷ್ಟೇ ಅಲ್ಲದೇ, ಏಕಾಏಕಿ ಈ ರೀತಿ ಕಟ್ಟಡವನ್ನು ನೆಲಸಮ ಮಾಡಿರುವುದು ದುರುದ್ದೇಶದಿಂದ ಕೂಡಿದೆ. ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ 1 ದಿನದಲ್ಲೇ ನೋಟಿಸ್ ನೀಡಿದ್ದಾರೆ. ಕೆಲ ಬಿಜೆಪಿಯವರ ಕುಮ್ಮಕ್ಕಿನಿಂದ ನಗರಸಭೆ ಅಧಿಕಾರಿಗವಳು ಕಟ್ಟಡವನ್ನು ನೆಲಸಮ ಮಾಡಿದ್ದಾರೆ ಎಂದು ದೂರಿದರು.
ನಗರಸಭೆ ಅಧಿಕಾರಿಗಳು ಒಂದು ನೋಟಿಸ್ ಅನ್ನು ನೀಡಿ, ಮತ್ತೊಂದು ನೋಟಿಸ್ ನೀಡಬೇಕಾದರೆ 7 ದಿನಗಳ ಕಾಲಾವಕಾಶ ನೀಡಬೇಕು. ಅದರೆ ಅಧಿಕಾರಿಗಳು 7 ದಿನಗಳ ಕಳೆಯುವ ಮುನ್ನವೇ ನೋಟಿಸ್ ನೀಡಲು ಎಲ್ಲ ತಯಾರಿ ನಡೆಸಿ ಮೂರು ಬಾರಿ ನೋಟಿಸ್ ನೀಡಿದ್ದಾರೆ. ಇದು ದುರದ್ದೇಶಪೂರ್ವಕದಿಂದ ಕೂಡಿದೆ. ಅಧಿಕಾರಿಗಳು ಹೇಳುವಂತೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎನ್ನುವುದಾದರೇ ಪಕ್ಕದಲ್ಲಿ ಇರುವ ಡಿಸಿಸಿ ಬ್ಯಾಂಕ್ ಹಾಗೂ ತಾಲೂಕು ಪಂಚಾಯ್ತಿಯ ಕಚೇರಿಗಳು ಸಹ ಇದ್ದು, ಅದರ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಅಧಿಕಾರಿಗಳು ಕೇವಲ ಒಂದುವರೆ ತಿಂಗಳ ಕಾಲವಕಾಶದಲ್ಲಿ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತಹವರು ನಗರದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವಂತಹ ಕಟ್ಟಡಗಳನ್ನು ತೆರವುಗೊಳಿಸಬೇಕು. ನಗರದ ಎನ್.ಆರ್. ವೃತ್ತದಿಂದ ಡೈರಿ ವೃತ್ತದವರೆಗೆ ಸಾಕಷ್ಟು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಅದನ್ನು ಮೊದಲು ತೆರವುಗೊಳಿಸಬೇಕು. ಆದನ್ನು ಬಿಟ್ಟು ಏಕಾಏಕಿ ಈರೀತಿ ಕಾಂಗ್ರೆಸ್ ಕಚೇರಿಯ ಕಟ್ಟಡವನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಟ್ಟಡವನ್ನು ತೆರವುಗೊಳಿಸುವ ಮೂಲಕ ಪಕ್ಷಕ್ಕೆ ಅಪಮಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ನಿರ್ಣಾಮ ಮಾಡುವ ಉದ್ದೇಶದಿಂದ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳೊಂದಿಗೆ ಕೈಜೋಡಿಸಿದ್ದು, ಈ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಎಸ್. ಪ್ರಸನ್ನ ಕುಮಾರ್, ಸಿ.ಆರ್. ವಿನೋದ್, ಕೆ.ಬಿ. ಲೋಹಿತ್, ಮಹೇಶ್, ಮಂಜುನಾಥ್ ಹಾಗೂ ಇತರರು ಇದ್ದರು.
ಆಯುಕ್ತರ ಸ್ಪಷ್ಟನೆ
ಅಕ್ರಮವಾಗಿ ಕಾಂಪೌಂಡ್ ಮತ್ತು ಶೆಲ್ಟರ್ ನಿರ್ಮಾಣ ಮಾಡಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೇಲ್ನೋಟಕ್ಕೆ ಅತಿಕ್ರಮ ಮಾಡಿರುವುದು ಕಂಡು ಬಂದಿದೆ. ಟ್ರಸ್ಟ್ ಹೆಸರಿನ ಜಾಗದಲ್ಲಿ ಹೋಟೆಲ್ ನಿರ್ಮಿಸಲು ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ತೆರವುಗೊಳಿಸಲಾಗಿದೆ. ಏಕಾಏಕಿ ನಾವು ಕಟ್ಟಡವನ್ನು ತೆರವುಗೊಳಿಸಿಲ್ಲ. ಅ.31, ನ.12 ಮತ್ತು ನ.18ರಂದು ಮೂರು ಬಾರಿ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ಗಳಿಗೆ ಪ್ರತಿಕ್ರಿಯೆ ಬರದ ಕಾರಣ ಕಟ್ಟಡವನ್ನು ತೆರವುಗೊಳಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.