ಮುಂದುವರಿದ ಕಾಡಾನೆಗಳ ಉಪಟಳ
ಆಲೂರು: ತಾಲೂಕಿನಲ್ಲಿ ದಿನೇ ದಿನೇ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಕಲ್ಲಾರೆ ಹಾಗೂ ಕಾಣಿಗೆರೆ ಗ್ರಾಮಗಳಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆಯವರೆಗೆ ಕಾಡಾನೆಗಳು ದಾಳಿ ನಡೆಸಿ 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದ ಗದ್ದೆಯನ್ನು ಭಾಗಶಃ ನಾಶಗೊಳಿಸಿದ್ದು, ಲಕ್ಷಾಂತರ ರು. ಮೌಲ್ಯದ ನಷ್ಟವಾಗಿದೆ.
ಕಲ್ಲಾರೆ ಗ್ರಾಮದ ಕೆ.ಎಂ. ಮಲ್ಲಿಕಾರ್ಜುನ್, ಎ. ಮಂಜುನಾಥ್, ಕೆ.ಆರ್. ರಂಗಸ್ವಾಮಿ, ಕಾಣಿಗೆರೆ ಗ್ರಾಮದ ಶೇಖರ್, ರಾಮೇಗೌಡ ಸೇರಿದಂತೆ ಇನ್ನು ಹಲವಾರು ಗ್ರಾಮಸ್ಥರು ಬೆಳೆದಿದ್ದ ಭತ್ತದ ಬೆಳೆಯನ್ನು ತಿಂದು ನಾಶಗೊಳಿಸಿರುವ ಕಾಡಾನೆಗಳು ಗುರುವಾರ ಸಹ ಹೇಮಾವತಿ ಹಿನ್ನೀರಿನ ಪ್ರದೇಶದಲ್ಲಿ ಸಂಜೆ 4ರಲ್ಲಿ ಜನರಿಗೆ ಕಾಣುವಂತೆ ಪುನಃ ದಾಳಿ ನಡೆಸಲು ಸನ್ನದ್ದವಾಗದಂತೆ ಗ್ರಾಮಸ್ಥರಿಗೆ ಕಂಡ ಬಂದಿದ್ದು, ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಹೇಮಾವತಿ ಹಿನ್ನೀರಿನ ಆಚೆ ಬದಿಯ ಕೊಡಗು ಜಿಲ್ಲೆಯ ಉಂಬಳಿಬೆಟ್ಟ ಅರಣ್ಯಪ್ರದೇಶದಲ್ಲಿ 4 ಮರಿ ಆನೆಗಳೊಂದಿಗೆ ಬೀಡು ಬಿಟ್ಟಿರುವ 20 ಆನೆಗಳ ಹಿಂಡು ಕಳೆದ ರಾತ್ರಿ ಇಡೀ ಗ್ರಾಮಗಳಲ್ಲಿ ದಾಳಿ ನಡೆಸಿದ್ದು, ಕಲ್ಲಾರೆ ಗ್ರಾಮದ ರಂಗಸ್ವಾಮಿ ಅವರು 7 ಎಕರೆ, ಮಲ್ಲಿಕಾರ್ಜುನ್ ಅವರ 2 ಎಕರೆ, ಮಂಜುನಾಥ್ ಅವರ 4 ಎಕರೆ, ಕಾಣಿಗೆರೆ ಗ್ರಾಮದ ಶೇಖರ್ ಅವರಿಗೆ ಸೇರಿದ 2 ಎಕರೆ, ರಾಮೇಗೌಡರ 3 ಎಕರೆ ಸೇರಿದಂತೆ ಒಟ್ಟು 20 ಎಕರೆ ಹೆಚ್ಚು ಪ್ರದೇಶದಲ್ಲಿ ದಾಳಿ ನಡೆಸಿವೆ.
ಬೇಜವಾಬ್ದಾರಿತನ: ಮಲ್ಲಿಕಾರ್ಜುನ, ಮಂಜನಾಥ್ರವರು ಗುರುವಾರ ಬೆಳಗ್ಗೆ ಭತ್ತವನ್ನು ಕಟಾವು ಮಾಡಲು ಮುಯ್ಯಾಳುಗಳೊಂದಿಗೆ ಗದ್ದೆ ಕುಯ್ಯಲು ಹೋದಾಗ ಗದ್ದೆ ಸಂಪೂರ್ಣ ನಾಶಗೊಂಡಿರುವುದನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯ ಆರ್ಎಫ್ಓ ಗೆ ದೂರವಾಣಿ ಮೂಲಕ ಕರೆ ಮಾಡಿದರೆ ಕರೆ ಸ್ವೀಕರಿಸದೇ ಬೇಜವಾಬ್ದಾರಿತನ ತೋರಿದರೆಂದು ಅವರು ದೂರಿದ್ದಾರೆ.
ನಂತರ ಫಾರೆಸ್ಟರ್ ಅವರಿಂದ ಹಿಡಿದು ಗಾರ್ಡ್ಗಳ ವರೆಗೆ ಯಾರೊಬ್ಬರಿಗೂ ಪೋನ್ ಮಾಡಿದರೂ, ಇದರತ್ತ ಸುಳಿಯದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದರಿಂದ ಕುಪಿತರಾದ ಗ್ರಾಮಸ್ಥರು ಡಿಎಫ್ಓ ಲಕ್ಷ್ಮಣ್ರವರಿಗೆ ದೂರವಾಣಿ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಸ್ಥಳಕ್ಕಾಗಿಸುವುದಾಗಿ ಭರವಸೆ ನೀಡಿದ ಅವರು ಅತ್ತ ಸುಳಿಯದೇ ತಮಗೆ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಎಚ್ಚರಿಕೆ: ಇದರಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಇನ್ನು ಮುಂದೆ ಇತ್ತ ಸುಳಿದರೆ ಅವರ ಬಟ್ಟೆ ಬಿಟ್ಟಿ ಗ್ರಾಮದಲ್ಲಿ ಇರುವ ಮರಕ್ಕೆ ಕಟ್ಟಿ ಹಾಕುತ್ತೇವೆ. ಅವರ ವಾಹನಗಳು ಇಲ್ಲಿಂದ ಕದಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಎ.ಎಂ.ಮಲ್ಲಿಕಾರ್ಜುನ್ ಮಾತನಾಡಿ, ಕಳೆದ 22 ದಿನಗಳಿಂದ ಕಾಡಾನೆಗಳು ದೊಡ್ಡ ಬೆಟ್ಟ ಹಾಗೂ ಉಂಬಳಿಬೆಟ್ಟ ಪ್ರದೇಶದಿಂದ ಮಾದಿಹಳ್ಳಿ, ಅಂಜಳಿಗೆ, ಅಡಿಬಯಲು, ಕಾಣಗೆರೆ, ಕಲ್ಲಾರೆ, ಹೆಮ್ಮಿಗೆ, ಕಾಗನೂರು, ನಾಗಾವಾರ ಸೇರಿದಂತೆ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿದಿನ ಎಡಬಿಡದೆ ದಾಳಿ ನಡೆಸುತ್ತಿದ್ದು, ಕಳೆದ ವಾರವಷ್ಟೇ ಮಾದಿಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೊಳಗಾಗಿ ಅಪಾರ ಬೆಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಸ್ಥಳಕ್ಕಾಗಮಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಗ್ರಾಮಸ್ಥರು ಹಿಡಿದು ತಂದು ಕೂಡಿ ದಿಗ್ಬಂಧನ ಹಾಕಿದ್ದಾರೆ.
ಆಷ್ಟೇ ಅಲ್ಲದೆ ಅವರ ವಾಹನಗಳನ್ನು ಸುಟ್ಟುಹಾಕಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿ ಆನೆಗಳನ್ನು ಬೇರೆಡೆಗೆ ಓಡಿಸುವುದಾಗಿ ಹೇಳಿ ಸಿಬ್ಬಂದಿಗಳನ್ನು ಬಿಡಿಸಿಕೊಂಡು ಹೋಗಿದ್ದ ಆರ್ಎಫ್ಓ ಅವರು, ಪುನಃ ಅದೇ ಚಾಳಿಯನ್ನು ಪುನಾರಾವರ್ತಿಸಿದ್ದು, ಇದು ಗ್ರಾಮಸ್ಥರನ್ನು ರೊಚ್ಚಿಗೆಳಿಸಿದೆ. ಕನಿಷ್ಟ ಅರಣ್ಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಈ ರಾತ್ರಿಯೂ ಸಹ ದಾಳಿ ಮಾಡಲು ಸಿದ್ದವಾಗಿ ನಿಂತಿರುವ ಕಾಡಾನೆಗಳನ್ನು ಬೇರೆಡೆಗೆ ಓಡಿಸುವ ಪ್ರಯತ್ನವನ್ನು ಮಾಡದರೆ ಇರುವ ಈ ಆಧಿಕಾರಿಗಳು ಕನಿಷ್ಟು ದೂರವಾಣಿಯಲ್ಲಿ ಮಾತನಾಡುವ ಸೌಜನ್ಯ ತೋರಿಲ್ಲ.
ಈ ರಾತ್ರಿಯೂ ಸಹ ಆನೆಗಳು ಪುನಃ ದಾಳಿ ನಡೆಸುತ್ತವೆ. ಕನಿಷ್ಟ ಪಕ್ಷ ನಮಗೆ ಆನೆಗಳನ್ನು ಬೆದರಿಸಿ ಓಡಿಸಲು ಪಟಾಕಿಯನ್ನು ನೀಡಿದ್ದರು. ನಾವು ಆನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದೆವು. ಆದರೆ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು ಮೋಜು ಮಾಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಅಳಲನ್ನು ಕೇಳುತ್ತಿಲ್ಲ ಎಂದರು.
ಕಲ್ಲಾರೆ ಗ್ರಾಮದಲ್ಲಿ ಅರಣ್ಯ ಇಲಾಖೆಯವರ ಕ್ವಾರ್ಟ್ರಸ್ ಇದ್ದು, ಇಲ್ಲಿರುವುದು ಬಿಟ್ಟು ಪಟ್ಟಣಗಳಲ್ಲಿ ಸರ್ಕಾರಿ ವೇತನ ಪಡೆದು ತಮ್ಮ ಸಂಸಾರದೊಂದಿಗೆ ಆರಾಮ ಜೀವನ ನಡೆಸುತ್ತಿರುವ ಅಧಿಕಾರಿಗಳು ತಮಗೆ ಯಾವುದೇ ಪ್ರಯೋಜನವಿಲ್ಲ ಎಂಬುದು ಅರಿವಾಗಿದೆ.
ಏಕೆಂದರೆ, ಕಳೆದ 2 ವರ್ಷದಿಂದಲೂ ನಾವು ಬೆಳೆದ ಬೆಳೆ ಆನೆಗೆ ಆಹುತಿಯಾಗಿದ್ದು, ನಾವೇ ವಿಡಿಯೋ ಸಮೇತ ಅರ್ಜಿ ಸಲ್ಲಿಸಿದ್ದರು ಈವರೆಗೂ ನಯಾ ಪೈಸ ಹಣ ಬಂದಿಲ್ಲ. ಕಳೆದ 3 ವರ್ಷಗಳಿಂದಲೂ ಬೆಳೆ ಕಳೆದುಕೊಂಡಿದ್ದು, ತುತ್ತು ಅನ್ನಕ್ಕು ಪರದಾಡುವಂತಾಗಿದೆ. ತಮಗೆ ಯಾರು ಮೇಲು ವಿಶ್ವಾಸವಿಲ್ಲದಂತಾಗಿದ್ದು, ಇಂತವರಿಗೆ ನಾವೇ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
--ಎಚ್.ವಿ. ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

