ಅಕ್ರಮ ಸಾಮಿಲ್ ಮೇಲೆ ದಾಳಿ: ಇಬ್ಬರ ಬಂಧನ
ಕ.ಪ್ರ.ವಾರ್ತೆ , ಹಾಸನ , ಡಿ. 14
ಅಕ್ರಮವಾಗಿ ನಡೆಸುತ್ತಿದ್ದ ಸಾಮಿಲ್ನ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಸಾಮೀಲ್ಗೆ ಬೀಗ ಜಡಿದ ಘಟನೆ ಶನಿವಾರ ನಡೆದಿದೆ.
ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪುರಾವ್ ಅವರ ನೇತೃತ್ವದ ತಂಡ ಅಕ್ರಮ ಸಾಮಿಲ್ ಮೇಲೆ ದಿಢೀರ್ ದಾಳಿ ನಡೆಸಿ ಸರ್ಕಾರಕ್ಕೆ ನಷ್ಟವಾಗುತ್ತಿದ್ದ ಅಪಾರ ಮರ ಸಂಪತ್ತನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀಗಮುದ್ರೆ: ತಾಲೂಕಿನ ಕಟ್ಟಾಯ ಹೋಬಳಿಯ ಮಲ್ಲಪ್ಪನಹಳ್ಳಿಯಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಸಾಮಿಲ್ನ ದೀಪಕ್ ಮತ್ತು ರಣಜಿತ್ ಎಂಬುವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಕೆಲಸವನ್ನು ಸ್ಥಗಿತಗೊಳಿಸಿ ಸಾಮಿಲ್ಗೆ ಬೀಗಮುದ್ರೆ ಜಡಿದಿದ್ದಾರೆ.
ಉತ್ತರ ಭಾರತದವರು: ಕಳೆದ ಒಂದೂವರೆ ವರ್ಷದಿಂದ ಪ್ರಾರಂಭವಾಗಿರುವ ಈ ಸಾಮಿಲ್ನಲ್ಲಿ ಸುಮಾರು 35ರಿಂದ 40 ಮಂದಿ ಉತ್ತರ ಭಾರತದ ಕಾರ್ಮಿಕರು ಕೆಲಸವನ್ನು ಮಾಡುತ್ತಿದ್ದರು. ಇದರ ಮಾಲೀಕರು ಮೂಲತಃ ಉತ್ತರ ಭಾರತದವರು ಎನ್ನಲಾಗಿದೆ.
ಪ್ಲೈವುಡ್ ತಯಾರಿಕೆ: ರಮೇಶ್ ಅಗ್ರವಾಲ್ ಎಂಬವರ ಮಾಲೀಕತ್ವದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸಾಮಿಲ್ನಲ್ಲಿ ಕಳಪೆ ಗುಣಮಟ್ಟದ ಪ್ಲೈವುಡ್ಗಳನ್ನು ತಯಾರಿಸಿ ರಫ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ. ಅದಕ್ಕಾಗಿ ಸಕಲೇಶಪುರ, ಆಲೂರು ಸೇರಿದಂತೆ ಜಿಲ್ಲೆಯ ಇತರೆ ಕಡೆಗಳಿಂದ ಮರಗಳನ್ನು ಅಕ್ರಮವಾಗಿ ತಂದು ಇಲ್ಲಿ ಸಣ್ಣ ಸಣ್ಣದಾಗಿ ತುಂಡಾಗಿಸಿ, ಅದರಿಂದ ಪ್ಲೈವುಡ್ ಅನ್ನು ತಯಾರಿಸಿ ಹೊರಗಡೆಗೆ ಮಾರಾಟ ಮಾಡಲಾಗುತ್ತಿತ್ತು.
ಬೆಲೆಬಾಳುವ ಮರ ದಾಸ್ತಾನು: ಪರವಾನಗಿ ಇಲ್ಲದೆ ನಡೆಯುತ್ತಿದ್ದಂತಹ ಈ ಸಾಮಿಲ್ನಲ್ಲಿ ಅಕ್ರಮವಾಗಿ ಚುಂಗ, ಮಾವು, ಗರಿಗೆ, ಅವಳಿಗೆ, ನೇರಳೆ, ಹಲಸು, ಹಾಲವಾಣಿಪುರ ಮರಗಳನ್ನು ತರಿಸಿಕೊಂಡು ಇಲ್ಲಿ ಪ್ಲೈವುಡ್ಗಳನ್ನು ತಯಾರಿಸಲಾಗುತ್ತಿತ್ತು. ಸುಮಾರು 20 ಲೋಡ್ಗಳಿಗೆ ಹೆಚ್ಚಿನ ಸುಮಾರು 5ರಿಂದ 10 ಲಕ್ಷದವರೆಗೆ ಬೆಲೆ ಬಾಳುವಂತಹ ಮರಗಳನ್ನು ತಂದು ಸಾಮಿಲ್ನಲ್ಲಿ ಶೇಖರಣೆ ಮಾಡಲಾಗಿತ್ತು.
ಮಾಹಿತಿ ಮೇರೆಗೆ ದಾಳಿ: ಮಲ್ಲಪ್ಪನಹಳ್ಳಿಯಲ್ಲಿ ನಡೆಯುತ್ತಿರುವ ಸಾಮೀಲ್ ಪರವಾನಗಿ ಇಲ್ಲದೆ ನಡೆಯುತ್ತಿತ್ತು. ಇದರ ಮಾಲೀಕರು ಮಂಗಳೂರಿನಿಂದ ಇಲ್ಲಿ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿಸಲ್ಲಿಸಿರುವುದನ್ನು ಬಿಟ್ಟರೆ, ಇದಕ್ಕೆ ಅಧಿಕೃತವಾದ ಯಾವುದೇ ದಾಖಲೆಗಳು ಇಲ್ಲ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಮೀಲ್ ಘಟಕಗಳನ್ನು ಇಲ್ಲಿಗೆ ವರ್ಗಾವಣೆ ಆಗುವ ಮುನ್ನವೆ ಇಲ್ಲಿ ಮರಗಳನ್ನು ಅಕ್ರಮವಾಗಿ ತಂದು ಅದರಿಂದ ಪ್ಲೈವುಡ್ಗಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಸಾಮೀಲ್ಗೂ ಬೀಗಮುದ್ರೆ ಜಡಿದಿದ್ದಾರೆ.
ಚೆಕ್ಪೋಸ್ಟ್ಗಳ ಕಣ್ತಪ್ಪಿಸಿ...
ಸಕಲೇಶಪುರ, ಆಲೂರು ಸೇರಿದಂತೆ ನಾನಾ ಭಾಗಗಳಿಂದ ತಮಗೆ ಬೇಕಾದಂತಹ ಮರಗಳನ್ನು ಅಕ್ರಮವಾಗಿ ಕಟಾವು ಮಾಡಿಕೊಂಡು, ಲಾರಿಯ ಒಳಭಾಗದಲ್ಲಿ ಆ ಮರದ ತುಂಡುಗಳನ್ನು ಹಾಕಿಕೊಂಡು ಮೇಲ್ಭಾಗದಲ್ಲಿ ಕಟ್ಟಿಗೆ ಸೌಧೆಗಳಿಂದ ಮುಚ್ಚಿ ಅರಣ್ಯ ಹಾಗೂ ಪೊಲೀಸ್ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಈ ಅಕ್ರಮವನ್ನು ಎಸಗಲಾಗಿದೆ. ಸುಮಾರು 20 ಲೋಡ್ಗೂ ಹೆಚ್ಚು ಮರಗಳಿದ್ದು, ಲಕ್ಷಾಂತರ ರು. ಬೆಲೆ ಬಾಳಲಿವೆ. ಮತ್ತೆ ಕೆಲವು ಲಾರಿಗಳಲ್ಲಿ ಅಡ್ಡ ದಾರಿಗಳಿಂದ ಹಾದು ಮರಗಳನ್ನು ಇಲ್ಲಿ ಶೇಖರಣೆ ಮಾಡಲಾಗಿದೆ. ಒಟ್ಟಿನಲ್ಲಿ ಅಕ್ರಮವಾಗಿ ಮರಗಳನ್ನು ತಂದು ಪ್ಲೈವುಡ್ಗಳನ್ನು ತಯಾರಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಅರಣ್ಯಾಧಿಕಾರಿಗಳು ಇತರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಸೀಮಾ ಹಾಗೂ ಇತರರು ಸಿಬ್ಬಂದಿ ಇದ್ದರು.
ಮರಗಳ ಸಾಗಣೆಗೂ ಪರವಾನಗಿ ಇಲ್ಲ
ಮರಗಳನ್ನು ಕಟಾವಿಗೆ ಅನುಮತಿ ನೀಡಂತಹ ಮರಗಳನ್ನೇ ಹೆಚ್ಚಾಗಿ ಸಾಮಿಲ್ನಲ್ಲಿ ಶೇಖರಣೆ ಮಾಡಲಾಗಿದೆ. ಕಟ್ಟಿಕೆಗೆ ಎಂದು ಸುಳ್ಳು ಹೇಳಿಕೊಂಡು ಚುಂಗ, ಅವಳಿಗೆ, ಗರಿಗೆ, ನೇರಳೆ, ಹಲಸು ಮರಗಳನ್ನು ಕಟಾವಿಗೆ ಅನುಮಿತಿ ನೀಡುವುದಿಲ್ಲ. ಈ ಸಾಮಿಲ್ನವರು ಚೆಕ್ಪೋಸ್ಟ್ಗಳಲ್ಲಿ ಕಟ್ಟಿಗೆ, ಸೌದೆ ಎಂದು ತೋರಿಸಿ, ಲಾರಿಯ ಒಳಗೆ 4 ಅಡಿಗಳಷ್ಟು ಮರಗಳನ್ನು ತುಂಡು ತುಂಡಾಗಿಸಿ ಸಾಗಣೆ ಮಾಡಿದ್ದಾರೆ.
ಕಟ್ಟಿಗೆ ಸೌಧೆಯನ್ನು 4 ಅಡಿಗಳಷ್ಟು ಕಟಾವು ಮಾಡುವಂತಿಲ್ಲ. ಆದರೆ ಇಲ್ಲಿ ಲಭ್ಯವಾಗಿರುವಂತಹ ಮರಗಳು 4 ಅಡಿಗಳ ಮರದ ತುಂಡುಗಳಿದ್ದು, ಅದನ್ನು ಪ್ಲೈವುಡ್ಗಳನ್ನು ತಯಾರಿಕೆಗೆ ಬಳಸಲಾಗುತ್ತಿದೆ.
ಇಲ್ಲಿ ಅಕ್ರಮವಾಗಿ ತಲೆ ಎದ್ದಿರುವಂತಹ ಸಾಮಿಲ್ ಕೋಟ್ಯಂತರ ರು. ಬೆಲೆ ಬಾಳಲಿದ್ದು, ಅಕ್ರಮವಾಗಿ ಇಲ್ಲಿ ಯಂತ್ರಗಳನ್ನು ಅಳವಡಿಸಿ ಪ್ಲೈವುಡ್ ತಯಾರಿಕೆಯ ಜಾಲವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

