ಅಕ್ಕಿ ಗಿರಣಿ ಮಾಲೀಕರ ಪ್ರತಿಭಟನೆ
ಹೊಳೆನರಸೀಪುರ: ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಗಾಗಿ ರಾಜ್ಯದಲ್ಲಿನ ಅಕ್ಕಿಗಿರಣಿಗಳಿಂದ ವಸೂಲು ಮಾಡಲು ಮುಂದಾಗಿರುವ ಲೆವಿ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸುವಂತೆ ಹಾಗೂ ಸರ್ಕಾರ ನಿಗದಿಗೊಳಿಸಿರುವ ಕ್ವಿಂಟಲ್ಗೆ 2400 ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಿನ ಅಕ್ಕಿ ಗಿರಣಿಗಳ ಮಾಲೀಕರು ಎರಡು ದಿನ ರೈಸ್ಮಿಲ್ಗಳನ್ನು ಮುಚ್ಚುವ ನಿರ್ಧಾರ ಕೈಗೊಂಡು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರ ನಿಗದಿಗೊಳಿಸಿರುವ 1600 ದರದಲ್ಲಿ ರಾಜ್ಯದಲ್ಲಿನ ಯಾವುದೇ ರೈತರೂ ಕ್ವಿಂಟಲ್ ಬತ್ತ ನೀಡಲು ಮುಂದಾಗುತ್ತಿಲ್ಲ. ಹೀಗಿರುವಾಗ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಏನಿಲ್ಲವೆಂದರೂ ಪ್ರತಿ ಕ್ವಿಂಟಲ್ಗೆ 2800 ವೆಚ್ಚ ತಗಲುತ್ತಿದೆ. ಸರ್ಕಾರ ಅವೈಜ್ಞಾನಿಕವಾಗಿ ದರ ನಿಗದಿಗೊಳಿಸಿದ್ದು, ಕೂಡಲೇ ಈ ದರ ಹೆಚ್ಚಿಸುವಂತೆ ಆಗ್ರಹಿಸಿದರು.
ಸರ್ಕಾರ ಪ್ರತಿ ವರ್ಷವೂ ಲೆವಿ ಪ್ರಮಾಣವನ್ನು 2 ಲಕ್ಷ ಟನ್ಗೆ ನಿಗದಿಗೊಳಿಸಿದ್ದು, ರಾಜ್ಯದಲ್ಲಿನ ಎಲ್ಲ ರೈಸ್ಮಿಲ್ಗಳೂ ಸೇರಿ ಸುಮಾರು 1.50 ಲಕ್ಷ ಟನ್ವರೆಗೂ ಲೆವಿ ಅಕ್ಕಿ ಸಂಗ್ರಹವಾಗುತ್ತಿತ್ತು.
ಆದರೆ ಸರ್ಕಾರ ತನ್ನ ಯೋಜನೆಗಾಗಿ ದಿಢೀರನೆ ಪ್ರಸಕ್ತ ವರ್ಷದಿಂದ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಲೆವಿಯ ಮೂಲಕ ನೀಡುವಂತೆ ರೈಸ್ಮಿಲ್ಗಳ ಮೇಲೆ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಜ್ಯ ಸರ್ಕಾರವೇ ಪುನರ್ವಿಮರ್ಶಿಸಲಿ. ಸರ್ಕಾರದ ಈ ಅವೈಜ್ಞಾನಿಕ ನೀತಿಯಿಂದಾಗಿ ರೈಸ್ಮಿಲ್ಗಳು ನಷ್ಟದಿಂದ ಮುಚ್ಚುವ ಸ್ಥಿತಿ ತಲುಪುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ ಅನ್ನಭಾಗ್ಯ ಯೋಜನೆಗಾಗಿ ಛತ್ತೀಸ್ಗಡದಿಂದ ಪ್ರತಿ ಕೆಜಿಗೆ 28 ನೀಡಿ ಅಕ್ಕಿ ಖರೀದಿಸುತ್ತಿದ್ದರೂ, ರಾಜ್ಯದಲ್ಲಿನ ರೈತರು ಹಾಗೂ ಅಕ್ಕಿ ಗಿರಣಿಗಳ ಮಾಲೀಕರಿಗೆ ಮಾತ್ರ ಕೇವಲ 24 ನೀಡಲು ಮುಂದಾಗಿರುವುದು ಅನ್ಯಾಯ. ಸರ್ಕಾರದ ನೀತಿಯು ರೈಸ್ಮಿಲ್ಗಳ ಉಳಿವಿಗೆ ಮಾರಕವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ತನ್ನ ಆದೇಶ ಹಿಂಪಡೆದು ಪುನರ್ಪರಿಶೀಲಿಸುವಂತೆ ಆಗ್ರಹಿಸಿದರು.
ಮೊದಲ ಹಂತವಾಗಿ ಎರಡು ದಿನಗಳ ರೈಸ್ಮಿಲ್ ಬಂದ್ಗೆ ಕರೆ ನೀಡಿದ್ದು, ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದಲ್ಲಿ ರೈಸ್ಮಿಲ್ಗಳನ್ನು ಅನಿರ್ದಿಷ್ಟ ಅವಧಿವರೆಗೆ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದಲ್ಲಿನ ರೈಸ್ಮಿಲ್ಗಳ ಮಾಲೀಕರ ಸಂಘದ ಅಧ್ಯಕ್ಷ ಎಚ್.ಆರ್.ಮುಕುಂದೇಗೌಡ, ಎಚ್.ಎಸ್.ಸುದರ್ಶನ್, ಸುಬ್ಬಣ್ಣಿ, ಸಚಿನ್, ಜಯಕುಮಾರ್, ಜಯಶಂಕರಪ್ಪ, ಹಳ್ಳಿಮೈಸೂರು ದೇವರಾಜು, ನಾಗರಾಜು, ಕೃಷ್ಣಕಾಂತ್, ಕುಮಾರ್ ಇತರರು ಪ್ರತಿಭಟನಾ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

