ವಿದ್ಯುತ್ ಇಲಾಖೆಯಿಂದ ರೈತ ವಿರೋಧಿ ನೀತಿ; ಪ್ರತಿಭಟನೆ
ಹೊಳೆನರಸೀಪುರ: ಬೆಳೆ ಹಾಗೂ ಬೆಲೆ ನಷ್ಟದಿಂದ ಸಂಕಷ್ಟಗೊಳಗಾಗಿರುವ ತೆಂಗು ಹಾಗೂ ಅಡಿಕೆ ಬೆಳೆದ ರೈತರ ಸಮಸ್ಯೆ ಬಗೆಹರಿಸುವಂತೆ ಜನವರಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗವು ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಪ್ರಧಾನಿ ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.
ಪಟ್ಟಣದ ಕನಕಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ರೈತ ಸಂಘದ ಸರ್ವ ಸದಸ್ಯರ ಬೃಹತ್ ಸಮಾವೇಶ ಹಾಗೂ ವಿದ್ಯುತ್ ಇಲಾಖೆಯು ರೈತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ವಿಷಯವಾಗಿ ಮೈಸೂರಿನಲ್ಲಿ ರೈತ ನಾಯಕರು ಹಾಗೂ ಶಾಸಕರೂ ಆದ ಕೆ.ಎಸ್.ಪುಟ್ಟಣ್ಣಯ್ಯ ಅವರು ಮೈಸೂರು ಭಾಗದ ಮೂವರು ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಹೊಳೆನರಸೀಪುರ, ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕುಗಳನ್ನು ತೀವ್ರ ಬರಗಾಲದ ಪ್ರದೇಶಗಳೆಂದು ಶೀಘ್ರವೇ ಘೋಷಿಸಬೇಕೆಂದು ಆಗ್ರಹಿಸಿದ ಬಡಗಲಪುರ ನಾಗೇಂದ್ರ ಅವರು, ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ನಿಧನರಾಗಿರುವ ದಿ.ಎನ್.ಡಿ.ಸುಂದರೇಶ್ ಅವರ ಸ್ಮರಣಾರ್ಥವಾಗಿ ಡಿ.21ರಂದು ಶಿವಮೊಗ್ಗದಲ್ಲಿ ನೆನಪಿನ ದಿನವನ್ನು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ರೈತ ಹೋರಾಟದ ದಿನಗಳು, ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಮಾರ್ಗಗಳು, ಕೃಷಿಕರು ನಷ್ಟದಿಂದ ಮಿಮುಕ್ತಿ ಹೊಂದಲು ಕಂಡುಕೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಕಾಚೇನಹಳ್ಳಿ, ಯಗಚಿ, ಹಿರೀಸಾವೆ ಹಾಗೂ ಇನ್ನಿತರ ಏತ ನೀರಾವರಿ ಯೋಜನೆಗಳ ಜಾರಿಯಲ್ಲಿ ಸಂಪೂರ್ಣ ಎಡವಿರುವ ಕುರಿತೂ ರಾಜ್ಯ ಸರ್ಕಾರದೊಂದಿಗೆ ರೈತ ನಿಯೋಗವು ಶೀಘ್ರದಲ್ಲಿಯೇ ಚರ್ಚಿಸುವುದು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ವಕ್ತಾರ ದೊಡ್ಡೇರಿ ಶ್ರೀಕಂಠ ಮಾತನಾಡಿ, ತಾಲೂಕಿನಲ್ಲಿ ರೈತ ಸಂಘಟನೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಿ, ರೈತ ಹೋರಾಟವನ್ನು ತೀವ್ರಗೊಳಿಸುವುದು ಮೊದಲ ಆದ್ಯತೆ ಎಂದರು.
ರೈತ ಸಂಘದ ಅಧ್ಯಕ್ಷರ ಆಯ್ಕೆಯು ಸಂವಿಧಾನಬದ್ಧವಾಗಿ ನಡೆಯಬೇಕಿದ್ದು, ಕೆಲವರು ಬೇರೆಯೇ ನಿರ್ಧಾರಗಳನ್ನು ಕೈಗೊಂಡು, ತಮ್ಮಿಷ್ಟಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಲ್ಲಿ ಅದು ಊರ್ಜಿತವಾಗದು ಎಂದರು.
ನಂತರ ನೂರಾರು ರೈತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ವಿದ್ಯುತ್ ಇಲಾಖೆಯ ಅಸಮರ್ಪಕ ಕಾರ್ಯನಿರ್ವಹಣೆ ಹಾಗೂ ರೈತ ವಿರೋಧಿ ನೀತಿಯನ್ನು ಖಂಡಿಸಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ಉಪಾಧ್ಯಕ್ಷರಾದ ಚನ್ನಪಟ್ಟಣ ರಾಮು, ರಾಮಸ್ವಾಮಿ, ಜಿಲ್ಲಾಧ್ಯಕ್ಷ ಡಿ.ಕೆ.ನಿಂಗೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್‌ಬಾಬು, ಜಿಲ್ಲಾ ಖಜಾಂಚಿ ಉಮೇಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಳಸಮ್ಮ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

